ಇಂಗ್ಲೀಷ್ ಪ್ರಭಾವದಿಂದ ಕನ್ನಡ ಅಂಕಿಗಳು ಮೂಲೆಗುಂಪು: ಕೆರೆಪ್ಪಗೋಳ ಕಳವಳ
ದೇವರಹಿಪ್ಪರಗಿ 03 :ಸರ್ಕಾರ ಕನ್ನಡ ಭಾಷೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದರು ಇಂಗ್ಲೀಷ್ ಪ್ರಭಾವದಿಂದ ಪಠ್ಯ ಪುಸ್ತಕಗಳಲ್ಲಿ, ಕೃತಿಗಳಲ್ಲಿ, ಸರ್ಕಾರ ಹೊರಡಿಸುವ ಪತ್ರ ವ್ಯವಹಾರದಲ್ಲಿ ಕನ್ನಡ ಅಂಕಿಗಳು ಮೂಲೆಗುಂಪು ಆಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ದೇವರಹಿಪ್ಪರಗಿ ಕನ್ನಡ ಸಾಹಿತ್ಯ ಪರಿಷತ್ ಪ್ರಥಮ ಸಮ್ಮೇಳನದ ಸರ್ವಾಧ್ಯಕ್ಷರಾದ ಸಂಗಮೇಶ ಕೆರೆಪ್ಪಗೋಳ ಕಳವಳ ವ್ಯಕ್ತಪಡಿಸಿದರು.ಪಟ್ಟಣದ ಬಿ.ಎಲ್.ಡಿ. ಇ ಶಾಲಾ ಮೈದಾನದಲ್ಲಿ ನಡೆದ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ನೇತೃತ್ವ ವಹಿಸಿ ಮಾತನಾಡಿದ ಅವರು, ಸರ್ಕಾರವೇ ಎಲ್ಲೆಡೆ ಇಂಗ್ಲಿಷ್ ಅಂಕಿಗಳು ಬಳಸುತ್ತಿರುವುದರಿಂದ ಕನ್ನಡ ಅಂಕಿಗಳು ಜನರಿಂದ ಮರೆಯಾಗುತ್ತಿವೆ. ಕನ್ನಡಕ್ಕೆ ಸುಮಾರು 2000 ವರ್ಷಗಳಷ್ಟು ಸುದೀರ್ಘವಾದ ಇತಿಹಾಸವಿದೆ. ಅದರಂತೆ ಕನ್ನಡ ಅಂಕಿಗಳು ಸಹ ತನ್ನದೇ ಆದ ಇತಿಹಾಸ ಹೊಂದಿದೆ.ದೇವರಹಿಪ್ಪರಗಿ ಪಟ್ಟಣದಲ್ಲಿ ಐತಿಹಾಸಿಕ ಕಲ್ಮೇಶ್ವರ,ರಾವುತರಾಯ ಮುಲ್ಲಯ್ಯನ ಸೇರಿದಂತೆ 35ಕ್ಕೂ ಹೆಚ್ಚು ದೇವಸ್ಥಾನಗಳು ಹೊಂದಿದ್ದು ಇತಿಹಾಸವಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದ ತಾಲೂಕಿನ ಮಹನೀಯರು ಸ್ಮಾರಕಗಳಾಗಬೇಕು. ಕರ್ನಾಟಕ ಏಕೀಕರಣದ ರೂವಾರಿಗಳಲ್ಲೊಬ್ಬರಾದ ಮೊಹರೆ ಹಣಮಂತ್ರಾಯರು ಹಾಗೂ ವಚನ ಸಾಹಿತ್ಯವನ್ನು ಸಂರಕ್ಷಿಸಿ ನಾಡಿಗೆ ಊಹಿಸಿಕೊಟ್ಟಂತಹ ಶರಣ ವೀರ ಗಣಾಚಾರಿ, ಮಡಿವಾಳ ಮಾಚಿದೇವರ ಜನಿಸಿದ ಊರಲ್ಲಿ ಕನ್ನಡ ಮಾಧ್ಯಮದ ಪ್ರೌಢಶಾಲೆ ಪ್ರಾರಂಭಿಸಿ ಕನ್ನಡದ ಉಳಿವಿಗೆ ಹಾಗೂ ಬಡ ಮಕ್ಕಳ ಏಳಿಗೆಗೆ ಸರ್ಕಾರದ ಗಮನ ಹರಿಸಿ ಕನ್ನಡ ಮಾಧ್ಯಮದ ಪ್ರೌಢಶಾಲೆ ಸ್ಥಾಪಿಸಬೇಕು. ಪಟ್ಟಣದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಬೇಕು. ನೂತನ ತಾಲೂಕಿಗೆ ಸರ್ಕಾರ ಪೂರ್ಣ ಪ್ರಮಾಣದ ಸರ್ಕಾರಿ ಕಚೇರಿಗಳು ತೆರೆಯಬೇಕು ಹಾಗೂ ಕಾಯಕದ ಜೊತೆ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನನ್ನನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿರುವ,ಪುಸ್ತಕ, ಕೃತಿಗಳ ದಾನಿಗಳಿಗೆ ಹಾಗೂ ಸಮ್ಮೇಳನ ಯಶಸ್ವಿಗೆ ಸಹಕಾರ ನೀಡಿದ ಎಲ್ಲರಿಗೂ ಕೋಟಿ ಕೋಟಿ ನಮನಗಳು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ, ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಪ್ರಭುಗೌಡ ಲಿಂಗದಳ್ಳಿ ಚಬನೂರ ಅವರು ಮಾತನಾಡಿ, ಅಕ್ಷರ ಜಾತ್ರೆಯನ್ನು, ನಮ್ಮೂರ ಜಾತ್ರೆಯೆಂದು ದೇವರ ನಾಡಿನ ದೈವ ಬಲದಿಂದ ಎಲ್ಲರೂ ಕೈಜೋಡಿಸಿ ಕಾರ್ಯಕ್ರಮ ಯಶಸ್ವಿಯಾಗಿದೆ. ಕನ್ನಡಪರ ಮನಸ್ಸುಗಳಿಂದ ಮಾದರಿ ಸಮ್ಮೇಳನಕ್ಕೆ ಸಾಕ್ಷಿಯಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷರಾದ ಹಾಸಿಂಪೀರ ವಾಲಿಕಾರ ಅವರು ಮಾತನಾಡಿ, ಕಸಾಪ ನಾಲ್ಕು ಗೋಡೆಗಳ ಮಧ್ಯ ಕೆಲಸ ಮಾಡದೆ, ಗ್ರಾಮೀಣ ಪ್ರದೇಶದ ಒಬ್ಬ ಕೂಲಿ ಕಾರ್ಮಿಕ ಸಮ್ಮೇಳನದ ಸರ್ವಾಧ್ಯಕ್ಷರು ಆಗಿದ್ದು ರಾಜ್ಯಕ್ಕೆ ಮಾದರಿಯಾಗಿದೆ. ತಾಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿಯೊಬ್ಬರೂ ತನು-ಮನದಿಂದ ಸೇವೆ ಸಲ್ಲಿಸಿದ್ದರಿಂದಲೇ ಇದೊಂದು ಐತಿಹಾಸಿಕ ಸಮ್ಮೇಳನ ವಾಗಿ ಮಾರ್ಪಟಟಿತು. ಕನ್ನಡ ನಾಡು, ನುಡಿ, ಸಾಹಿತ್ಯದ ಬಗ್ಗೆ ಅಪಾರ ಅಭಿಮಾನ ಹೊಂದಿದ ಕಾರಣ ಯಶಸ್ವಿಯಾಗಲು ಸಾಧ್ಯವಾಯಿತು ಎಂದರು.ಕಾರ್ಯಕ್ರಮವನ್ನು ಇಂಡಿ ಎಸಿ ಆಬೀದ ಗದ್ಯಾಳ ಉದ್ಘಾಟಿಸಿ ಮಾತನಾಡಿದರು.ಪ್ರಾಸ್ತವಿಕವಾಗಿ ಕಸಾಪ ತಾಲೂಕು ಅಧ್ಯಕ್ಷ ಜಿ.ಪಿ. ಬಿರಾದಾರ ಅವರು ಮಾತನಾಡಿ, ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ಜನತೆ ತನು ಮನದಿಂದ ಸಹಕಾರ ನೀಡಿದ ಕಾರಣ ಸಮ್ಮೇಳನ ಯಶಸ್ವಿಗೆ ಕೃತಜ್ಞತೆಗಳು ತಿಳಿಸಿದರು.ಕಾರ್ಯಕ್ರಮದಲ್ಲಿ ಎಮ್ಮಿಗನೂರ ಪೂಜ್ಯಶ್ರೀ ಷ.ಬ್ರ ವಾಮದೇವ ಮಹಾಂತ ಶಿವಾಚಾರ್ಯರು,ದೇವೂರ ಶ್ರೀ ಹಾಗೂ ಕೊಕಟನೂರ ಶ್ರೀಗಳು ಸಾನಿಧ್ಯ ವಹಿಸಿದ್ದರು.ತಹಶೀಲ್ದಾರ್ ಪ್ರಕಾಶ ಸಿಂದಗಿ, ಮುಖಂಡರಾದ ಕಾಶಿನಾಥ ತಳಕೇರಿ, ಅಭಿಷೇಕ್ ಚಕ್ರವರ್ತಿ ಮಾತನಾಡಿ,ಮಾದರಿ ಯಶಸ್ವಿ ಸಾಹಿತ್ಯ ಸಮ್ಮೇಳನಕ್ಕೆ ಸಾಕ್ಷಿಯಾದ ದೇವರಹಿಪ್ಪರಗಿ ಎಂದರು.ಪಟ್ಟಣದಲ್ಲಿ ಎಲ್ಲೆಲ್ಲೂ ಕನ್ನಡದ ಕಂಪು, ನಾಡ ಬಾವುಟ ಹಿಡಿದ ಸಾವಿರಾರು ಚಿಣ್ಣರು ಶರಣರ ವೇಷ ಭೂಷಣ ಧರಿಸಿ ಕನ್ನಡದ ಘೋಷಣೆ ಕೂಗುತ್ತಾ ಸಮ್ಮೇಳನದ ಸರ್ವಾಧ್ಯಕ್ಷರಾದ ಸಂಗಮೇಶ ಕೆರೆಪ್ಪಗೋಳ ಅವರನ್ನು ಸಾರೋಟಿನಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ಕಲಾತಂಡಗಳ, ಡೊಳ್ಳು ಕುಣಿತ ಕನ್ನಡ ಪರ ಸಂಘಟನೆಗಳು ತಾಲೂಕಿನ ಶಿಕ್ಷಕರು ಮುಖಂಡರು ಮೆರವಣಿಗೆ ಮೂಲಕ ಮುಖ್ಯ ವೇದಿಕೆಗೆ ಸಂಭ್ರಮದಿಂದ ಬರಮಾಡಿಕೊಂಡರು.ಸಮ್ಮೇಳನದಲ್ಲಿ , ಉಪನ್ಯಾಸ, ಕವನ ವಾಚನ, ಜಾನಪದ ಸಂಭ್ರಮ ಹಾಗೂ ಬಂಡಾಯ ಸಾಹಿತ್ಯದ ಕುರಿತು ವಿಶೇಷ ಕಾರ್ಯಕ್ರಮ ಏರಿ್ಡಸಲಾಗಿತ್ತು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ಸಮಾರೋಪ ಸಮಾರಂಭ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದೇ ಸಂದರ್ಭದಲ್ಲಿ ಪ.ಪಂ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ, ಅಧ್ಯಕ್ಷರ ಪ್ರತಿನಿಧಿಯಾದ ಬಸವರಾಜ ದೇವಣಗಾಂವ, ಉಪಾಧ್ಯಕ್ಷರಾದ ರಮೇಶ ಮಸಿಬಿನಾಳ, ಉದ್ದಿಮೆದಾರರಾದ ರಿಯಾಜ ಯಲಗಾರ,ಬಸೀರಅಹ್ಮದ್ ಕಸಾಬ್, ಶೇಖರಗೌಡ ಪಾಟೀಲ, ಪ್ರಕಾಶ ಮಲ್ಲಾರಿ, ಜಿ.ಎಸ್.ಬೇವನೂರ,ಸಿ.ಕೆ.ಕುದರಿ, ಸಾಹೇಬಗೌಡ,ಸಾಯಿಬಣ್ಣ ಬಾಗೇವಾಡಿ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು, ವಿವಿಧ ಸಂಘಟನೆಗಳ ಮುಖಂಡರ ಭಾಗವಹಿಸಿದ್ದರು.