ಜ.16 ರಿಂದ ಮೂರು ದಿನಗಳ ಕಾಲ ಜಿಲ್ಲೆಗೆ ಉಪ ಲೋಕಾಯುಕ್ತರ ಭೇಟಿ ಅಗತ್ಯ ಮಾಹಿತಿಯೊಂದಿಗೆ ಹಾಜರಾಗಲು ಅಧಿಕಾರಿಗಳಿಗೆ ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚನೆ
ಬಳ್ಳಾರಿ 24: ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರ್ಪ ಅವರು, ಜನವರಿ 16, 17 ಹಾಗೂ 18 ರಂದು 3 ದಿನಗಳ ಕಾಲ ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಲೋಕಾಯುಕ್ತ ದೂರುಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮ ನಡೆಸಲಿದ್ದು, ಅಗತ್ಯ ಮಾಹಿತಿಯೊಂದಿಗೆ ಉಪ ಲೋಕಾಯುಕ್ತರ ಎಲ್ಲಾ ಕಾರ್ಯಕ್ರಮದಲ್ಲೂ ಹಾಜರಾಗಬೇಕೆಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಉಪ ಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿ ತನಿಖೆಗೆ ಬಾಕಿ ಇರುವ ದೂರು ಪ್ರಕರಣಗಳ ವಿಚಾರಣೆ ಮತ್ತು ಸಭೆ ನಡೆಸುವರು. ಈವರೆಗೆ ನೋಂದಣಿಯಾದ ದೂರು ಪ್ರಕರಣಗಳು, ಅವುಗಳ ವಿಲೇವಾರಿ ಮಾಹಿತಿಯೊಂದಿಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಉಪ ಲೋಕಾಯುಕ್ತರ ಕಾರ್ಯಕ್ರಮಗಳಿಗೆ ಅಗತ್ಯ ಮಾಹಿತಿಯೊಂದಿಗೆ ಹಾಜರಾಗಬೇಕು ಎಂದು ತಿಳಿಸಿದರು.
ಲೋಕಾಯುಕ್ತ ಪ್ರಕರಣ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿಸಿಕೊಂಡಿದ್ದಲ್ಲಿ ಸೂಕ್ತ ಕಾರಣವನ್ನು ಉಪ ಲೋಕಾಯುಕ್ತರ ಗಮನಕ್ಕೆ ತರಬೇಕು ಎಂದರು.
ಬಾಕಿ ಉಳಿದಿರುವ ಲೋಕಾಯುಕ್ತ ದೂರು ಅರ್ಜಿಗಳನ್ನು ವೈಯಕ್ತಿಕ ಗಮನಹರಿಸಿ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ವಿಲೇವಾರಿ ಮಾಡಲು ಕಾನೂನು ಚೌಕಟ್ಟಿನಲ್ಲಿ ಅವಕಾಶವಿಲ್ಲದಿದ್ದಲ್ಲಿ ದೂರುದಾರರರಿಗೆ ಹಿಂಬರಹ ನೀಡಬೇಕು. ಹಿಂಬರಹ ನೀಡಿರುವ ಬಗ್ಗೆ ಅಗತ್ಯ ದಾಖಲೆಗಳನ್ನು ಸಂಬಂಧಿಸಿದ ಇಲಾಖಾಧಿಕಾರಿಗಳು ಹೊಂದಿರಬೇಕು ಎಂದು ನಿರ್ದೇಶನ ನೀಡಿದರು.
*ಕರ್ನಾಟಕ ಉಪ ಲೋಕಾಯುಕ್ತರಿಂದ ವಿಡಿಯೋ ಸಂವಾದ:*
ಬರುವ ಜನವರಿ 16, 17 ಮತ್ತು 18 ರಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರ್ಪ ಅವರು, ಜಿಲ್ಲೆಗೆ ಭೇಟಿ ನೀಡಲಿರುವ ಪ್ರಯುಕ್ತ ಉಪ ಲೋಕಾಯುಕ್ತರು, ಸೋಮವಾರ ಸಂಜೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವೀಡೀಯೋ ಸಂವಾದ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಎಲ್ಲಾ ವಸತಿ ನಿಲಯಗಳಲ್ಲಿ ಸ್ವಚ್ಛತೆ, ಶೌಚಾಲಯ, ವಸತಿ ನಿಲಯಗಳ ಕಾಂಪೌಂಡ್ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳು ಸುವ್ಯವಸ್ಥಿತದಲ್ಲಿರಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿನ ಎಲ್ಲಾ ಶಾಲೆಗಳಿಗೆ ಸೂಕ್ತ ಕಟ್ಟಡದ ವ್ಯವಸ್ಥೆ, ಶಾಲಾ ಮಕ್ಕಳಿಗೆ ಬ್ಯಾಗ್, ಶೂ-ಸಾಕ್ಸ್ ಹಾಗೂ ಬಿಸಿಯೂಟದ ವ್ಯವಸ್ಥೆ ಮತ್ತು ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯಗಳು ಅಚ್ಚುಕಟ್ಟಾಗಿರಬೇಕು ಎಂದು ಡಿಡಿಪಿಐ ಅಧಿಕಾರಿಗಳಿಗೆ ತಿಳಿಸಿದರು.
ಬಳ್ಳಾರಿ ನಗರದಲ್ಲಿ ಖಾತಾ ಬದಲಾವಣೆಗೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಕರಣಗಳು, ಕಸ ವಿಲೇವಾರಿ, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ, ಕುಡಿಯುವ ನೀರಿನ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ, ಕಸ ವಿಲೇವಾರಿ ಘಟಕಗಳ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.
ನರೇಗಾ ಯೋಜನೆ, ಸ್ವಚ್ಛ ಭಾರತ್ ಮಿಷನ್ ಯೋಜನೆಗಳ ಕುರಿತು ಜಿಪಂ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು. ಜಿಲ್ಲೆಯಲ್ಲಿ ಅರಣ್ಯ ಜಾಗ ಒತ್ತುವರಿ ಕುರಿತು ಅರಣ್ಯ ಇಲಾಖಾಧಿಕಾರಿಗಳ ಜೊತೆ ಪರಸ್ಪರ ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಕಂದಾಯ, ಡಿಎಂಎಫ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಜೆಸ್ಕಾಂ, ಸಾರಿಗೆ, ಆಹಾರ, ಅಬಕಾರಿ, ಜೆಸ್ಕಾಂ, ಆರೋಗ್ಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಮಾಹಿತಿ ಪಡೆದುಕೊಂಡ ಅವರು, ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳನ್ನು ಸಕಾಲದಲ್ಲಿ ತಲುಪಿಸಬೇಕು. ಯಾವುದೇ ರೀತಿಯಲ್ಲಿ ವಿಳಂಬವಾಗುವಂತಿಲ್ಲ. ಯಾವುದೇ ಅಕ್ರಮಗಳಿಗೆ ಅಧಿಕಾರಿಗಳು ಅಸ್ಪದ ನೀಡಬಾರದು ಎಂದು ಸೂಚನೆ ನೀಡಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಕರ್ನಾಟಕ ಲೋಕಾಯುಕ್ತ ಬಳ್ಳಾರಿ ವಿಭಾಗದ ಪೊಲೀಸ್ ಅಧೀಕ್ಷಕರಾದ ಸಿದ್ದರಾಜು, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್., ಎಎಸ್ಪಿ ನವೀನ್ ಕುಮಾರ್, ಸಹಾಯಕ ಆಯುಕ್ತ ಪ್ರಮೋದ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.