ಬೂದಿಹಾಳ ಪೀರಾಪೂರ ಏತ ನೀರಾವರಿ ಕಾಮಗಾರಿ ಶೀಘ್ರದಲ್ಲಿ ಮುಕ್ತಾಯಗೊಳಿಸಿ ಸಂಪೂರ್ಣ ನೀರಾವರಿಗೊಳಪಡಿಸಲು ಆಗ್ರಹ

Demand to finish the irrigation work of Budihal Peerapura as soon as possible and make it fully irr

ಬೂದಿಹಾಳ ಪೀರಾಪೂರ ಏತ ನೀರಾವರಿ ಕಾಮಗಾರಿ ಶೀಘ್ರದಲ್ಲಿ ಮುಕ್ತಾಯಗೊಳಿಸಿ ಸಂಪೂರ್ಣ ನೀರಾವರಿಗೊಳಪಡಿಸಲು ಆಗ್ರಹ 

ವಿಜಯಪುರ  13 : ಬೂದಿಹಾಳ ಪೀರಾಪೂರ ಏತ ನೀರಾವರಿ ಕಾಮಗಾರಿ ಮುಕ್ತಾಯಗೊಳಿಸಿ ತಾಳಿಕೋಟಿ ತಾಲೂಕಿನ 38 ಹಳ್ಳಿಗಳಿಗೆ ಸಮಗ್ರ ನೀರಾವರಿ ಕಲ್ಪಿಸಿ ಕೃಷಿಗೆ ನೀರು ಒದಗಿಸಲು  ಕ್ರಮ ಕೈಗೊಳ್ಳಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಗುರುರಾಜ ಪಡಶೆಟ್ಟಿ, ಎಚ್‌. ಎನ್‌. ಬಿರಾದಾರ ಜಂಟಿಯಾಗಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. ಗುರುವಾರದಂದು ವಿಜಯಪುರ ನಗರದ  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾ ಭವನದಲ್ಲಿ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ 5 ನದಿಗಳು ಹರಿದು ಪಂಚ ನದಿಗಳ ಬೀಡು, ಎರಡನೇ ಪಂಜಾಬ ಎಂದು ಕರೆಯಲಾಗುತ್ತಿದೆ. ಆದರೆ ಈ ಹೇಳಿಕೆ ಕೇವಲ ಭಾಷಣದಲ್ಲಿ ಸೀಮಿತವಾಗಿದೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ದಿವಂಗತ ರಾಮಕೃಷ್ಣಾ ಹೆಗಡಿಯವರು ಮೇಲ್ಕಾಣಿಸಿದ ಹಳ್ಳಿಗಳಿಗೆ ನೀರಾವರಿ ಕಲ್ಪಿಸಲು ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಜಾರಿಗೆ ತರಲಾಗುವುದೆಂದು ಹೇಳಿದ್ದರು. ಆದರೆ ಆ ಯೋಜನೆ ಅನುಷ್ಠಾನಕ್ಕೆ ಬರಲಿಲ್ಲ. ನಂತರದಲ್ಲಿ ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ ನೀರಾವರಿ ಕಲ್ಪಿಸಲಾಗುವುದು ಎಂದು ಯೋಜನೆ ರೂಪಿಸಲಾಗಿತ್ತು. ಇದನ್ನು ಕೂಡ ಸರ್ಕಾರ ಕೈ ಬಿಟ್ಟಿತು. ನಂತರದ 2017ನೇ ಸಾಲಿನಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯನವರು ಬೂದ್ಯಾಳು ಮತ್ತು ಪೀರಾಪೂರ ಏತ ನೀರಾವರಿ ಹೊಸ ಯೋಜನೆ ಅನುಷ್ಠಾನಕ್ಕೆ ತಂದರು. ನಂತರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿಯವರು ಬೂದಿಹಾಳ ಹಾಗೂ ಪೀರಾಪೂರ ಏತ ನೀರಾವರಿಯ 1ನೇ  ಉದ್ಘಾಟನೆ ಮಾಡಿ 2ನೇ ಹಂತದ ಶಂಕು ಸ್ಥಾಪನೆ ನೆರವೇರಿಸಿದರು. 

ಅಲ್ಲಿಂದ ಶೇ. 90  ರಷ್ಟು ಕಾಮಗಾರಿ ಮುಗಿದಿದ್ದು ಇನ್ನು ಶೇ. 10 ರಷ್ಟು ಕಾಮಗಾರಿ ಬಾಕಿ ಇದೆ. ಬಾಕಿ ಉಳಿದ ಕಾಮಗಾರಿಯನ್ನು  ಮುಕ್ತಾಯಗೊಳಿಸಬೇಕು. ಇದಕ್ಕೆ ತಗಲುವ 170 ರಿಂದ 180 ಕೋಟಿ ಅನುದಾನವನ್ನು ಮುಂಬರುವ ಬಜೆಟ್ ಅಧಿವೇಶನದಲ್ಲಿ ಚರ್ಚಿಸಿ ಬಿಡುಗಡೆ ಮಾಡಬೇಕು. ಮತ್ತು ಹೊಲ ಗಾಲುವೆ, ಸೀಳು ಗಾಲುವೆ ಮತ್ತು ವಿತರಣಾ ಕಾಲುವೆ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಿಸಿ ಮುಕ್ತಾಯಗೊಳಿಸಬೇಕು. ಈ ಯೋಜನೆ ಅನುಷ್ಠಾನ ಆದನಂತರ 38 ಹಳ್ಳಿಗಳ ವ್ಯಾಪ್ತಿಗೆ ಬರುವ ಸುಮಾರು 50657 ಸಾವಿರ ಎಕರೆಗಿಂತಲೂ ಹೆಚ್ಚು ಜಮೀನು ನೀರಾವರಿಗೊಳಪಡುತ್ತವೆ. ಆದ್ದರಿಂದ ಶೀಘ್ರದಲ್ಲಿ ಬಾಕಿ ಉಳಿದ ಕಾಮಗಾರಿ ಮುಕ್ತಾಯಗೊಳಿಸಬೇಕು. ನೀರಾವರಿಯಿಂದ ವಂಚಿಗೊಂಡ ಜಮೀನುಗಳಿಗೆ ಪೈಪ್ ಲೈನ್ ಮಾಡಿ ನೀರು ಕೊಡುವಂತಾಗಬೇಕು. ಇದಕ್ಕೆ ವಿಳಂಬ ನೀತಿ ಕಾರಣಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ನೀರಾವರಿಯಿಂದ ವಂಚಿತರಾಗಿದ್ದೇವೆ. ಈಗಾಗಲೇ ನಿವೃತ್ತಿ ಹೊಂದಿದ ಅಭಿಯಂತರರು ಮತ್ತು ಕಂಪನಿಯವರು ಕೆಬಿಜೆಎನ್‌ಎಲ್ ಅವರ ಮಾರ್ಗದರ್ಶನದಲ್ಲಿ ಸರ್ವೆಯಾಗಿದ್ದು ಇದರ ಪೈಕಿ 250 ರಿಂದ 260 ಓಟಲೆಟ್ ಬಾಕ್ಸ್‌ ಸ್ಥಳ ಬದಲಾವಣೆ ಮಾಡಬೇಕಾಗಿರುತ್ತದೆ. ಇದಲ್ಲದೇ ಇನ್ನೂ ಹೆಚ್ಚುವರಿ ಓಟಲೆಟ್ ಬಾಕ್ಸ್‌ಗಳನ್ನು ಅಳವಡಿಸುವುದು ಅತ್ಯವಶ್ಯವಾಗಿದೆ. ಕಾರಣ ಸರ್ಕಾರ ತಕ್ಷಣ ಉಳಿದ ಕಾಮಗಾರಿಗೆ ಚಾಲನೆ ನೀಡಿ ಕಾಮಗಾರಿ ಮುಕ್ತಾಯಗೊಳಿಸಿ ಸಮಗ್ರ ನೀರಾವರಿಗೆ ಒಳಪಡಿಸಬೇಕು ಇಲ್ಲದಿದ್ದರೆ ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಈ ವಾರದಲ್ಲಿ ಮುಖ್ಯಮಂತ್ರಿ ಹಾಗೂ ನೀರಾವರಿ ಮಂತ್ರಿಗಳ ಬಳಿ ನಿಯೋಗ ತೆಗೆದುಕೊಂಡು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಇದಕ್ಕೂ ಸ್ಪಂದಿಸದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಅರವಿಂದ ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ರುದ್ರಗೌಡ ಬಿರಾದಾರ, ಎಸ್‌.ಸಿ. ನಾಗರೆಡ್ಡಿ, ಮಲ್ಲಣ್ಣ ಹಿರೇಕುರಬರ, ಕಾಶೀನಾಥ ತಳವಾರ, ಶಿವಪ್ಪ ಇಂಗಳೇಶ್ವರ, ಸುಭಾಸಗೌಡ ಬಿಸಿರೊಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.