ಅಪಸ್ಮಾರ ಖಾಯಿಲೆಯ ಮಿತ್ಯೆಗಳನ್ನು ತಿರಸ್ಕರಿಸಿ: ಡಾ ರಾಜೇಂದ್ರ ಬಸರೀಗೀಡದ
ಗದಗ 19: ಅಪಸ್ಮಾರ ಖಾಯಿಲೆಯ ಕುರಿತು ಇರುವ ಮಿಥ್ಯೆಗಳನ್ನು ತಿರಸ್ಕರಿಸಿ ಸೂಕ್ತ ಮತ್ತು ವೈಜ್ಞಾನಿಕ ರೀತಿಯಲ್ಲಿ ಚಿಕಿತ್ಸೆಗೆ ಮುಂದಾಗಬೇಕು. ಅಪಸ್ಮಾರ ಖಾಯಿಲೆ ಎದುರಿಸುತ್ತಿರುವ ರೋಗಿಯ ಉಪಚಾರಕ್ಕೆ ಸಮಯೋಚಿತ ಕ್ರಮಗಳನ್ನು ಕೈಕೊಂಡರೆ ಅದನ್ನು ನಿಯಂತ್ರಣದಲ್ಲಿಡಬಹುದು ಎಂದು ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ರಾಜೇಂದ್ರ ಬಸರಿಗಿಡದ ಹೇಳಿದರು.ಗದಗದ ಸಂಕನೂರು ನರ್ಸಿಂಗ್ ಕಾಲೇಜಿನಲ್ಲಿ ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದ ಅಡಿಯಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಅಪಸ್ಮಾರ ದಿನಾಚರಣೆಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಾಶ್ವವಾಯು, ಸ್ಮರಣ ಶಕ್ತಿ ಕಳೆದುಕೊಳ್ಳುವಿಕೆ, ತಲೆನೋವು ಮತ್ತು ಅಪಸ್ಮಾರದಂತಹ ನರಸಂಬಂಧಿ ಕಾಯಿಲೆಗಳ ಕುರಿತು ಜಾಗೃತಿ ಮತ್ತು ಚಿಕಿತ್ಸೆಯನ್ನು ನೀಡಲು ಕರ್ನಾಟಕ ರಾಜ್ಯ ಸರ್ಕಾರವು ನಿಮಾನ್ಸ್ ಸಹಯೋಗದಲ್ಲಿ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮವನ್ನು ಜಾರಿಗೊಳಿಸಿದೆ. ಇದು ದೇಶದ ಮೊದಲ ಮೆದುಳು ಆರೋಗ್ಯ ಉಪಕ್ರಮವಾಗಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಉಪಪ್ರಾಚಾರ್ಯ ಮತ್ತು ಆಡಳಿತಾಧಿಕಾರಿ ಡಾ. ವಿನ್ಸೆಂಟ್ ಪಾಟೀಲ್, ಮನುಷ್ಯನ ಸುಸ್ಥಿರ ಆರೋಗ್ಯಕ್ಕೆ ಮೆದುಳಿನ ಆರೋಗ್ಯ ಅವಶ್ಯಕತೆ. ಆ ದಿಸೆಯಲ್ಲಿ ಮೆದುಳು ಆರೋಗ್ಯ ಉಪಕ್ರಮವು ಜಾರಿಯಾಗಿ ಮುನ್ನೆಚ್ಚರಿಕೆ ಮತ್ತು ಚಿಕಿತ್ಸೆಯ ಮೂಲಕ ಸಾರ್ವಜನಿಕ ಆರೋಗ್ಯದ ಉತ್ತಮ ಕಾರ್ಯಕ್ರಮವಾಗಿ ಮಾರ್ಪಟಟಿದೆ. ಇಂದಿನ ಜೀವನಶೈಲಿಯಲ್ಲಿನ ಬದಲಾವಣೆಯಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು ಇಂತಹ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಿರುವುದು ಆರೋಗ್ಯಕ್ಕೆ ನೀಡಿರುವ ಚಿಕಿತ್ಸೆಯಂತಿದೆ ಎಂದರು. ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದ ಗದಗ ಜಿಲ್ಲಾ ಸಂಯೋಜಕ ಮಾರುತಿ ಹರಿಕಂತ್ರ ಪ್ರಾಸ್ತಾವಿಕವಾಗಿ ಮಾತನಾಡಿ ಕಭಿ ಕಾರ್ಯಕ್ರಮದ ಉದ್ದೇಶಗಳು, ಗದಗ ಜಿಲ್ಲೆಯಲ್ಲಿ ಕಭಿಯ ಚಟುವಟಿಕೆಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಸ್ಪತ್ರೆಯ ಸಹಕಾರದಿಂದ ಸಾರ್ವಜನಿಕರಿಗೆ ಅಗತ್ಯ ಸೇವೆ ಸಲ್ಲಿಸುತ್ತಿರುವ ಕುರಿತು ವಿವರಿಸಿದರು. ಫಿಸಿಯೋಥೆರಪಿಸ್ಟ್ ಜಗನಾಥ ಪಟೇಲ್, ಅಪಸ್ಮಾರ ರೋಗದ ಲಕ್ಷಣ ಕಾರಣ ಮತ್ತು ಪರಿಣಾಮಗಳು ಹಾಗೂ ಚಿಕಿತ್ಸಾ ಕ್ರಮಗಳ ಬಗ್ಗೆ ಉಪನ್ಯಾಸ ನೀಡಿದರು. ನರ್ಸಿಂಗ್ ಕಾಲೇಜಿನ ಹಿರಿಯ ಉಪನ್ಯಾಸಕಿ ಡಾ. ರಶ್ಮಿ ಡಿ. ಎಚ್, ಮಾನಸಿಕ ಆರೋಗ್ಯ ಕಾರ್ಯಕ್ರಮ ಮತ್ತು ಕರ್ನಾಟಕ ಮೆದುಳು ಆರೋಗ್ಯ ಕಾರ್ಯಕ್ರಮದ ಸಿಬ್ಬಂದಿ, ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಭಿ ತಂಡದ ನರ್ಸಿಂಗ್ ಅಧಿಕಾರಿ ರವಿ ನಂದ್ಯಾಳ ವಂದಿಸಿದರು.