ಶಿಕ್ಷಣ ಸಂಸ್ಥೆಗಳು ಕಲಾವಿದರನ್ನು ಪ್ರೋತ್ಸಾಹಿಸಲಿ: ದೊಡ್ಡಣ್ಣವರ
ಬೆಳಗಾವಿ 30: ಶಿಕ್ಷಣದ ಪ್ರಸಾರ ಪ್ರಚಾರದ ಜತೆಗೆ ಶಿಕ್ಷಣ ಸಂಸ್ಥೆಗಳು ಪಠ್ಯೇತರ ಚಟುವಟಿಕೆಗಳ ಮುಖಾಂತರ ವಿವಿಧ ಪ್ರತಿಭಾವಂತ ಕಲಾವಿದರನ್ನು ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳಿಗೆ ವಿವಿಧ ಕಲೆಗಳ ತರಬೇತಿಯನ್ನು ನೀಡಬೇಕು. ಇದರಿಂದ ಕಲಾವಿದರ ಪ್ರತಿಭೆಗಳನ್ನು ಬೆಳಕಿಗೆ ತರಲು ಸಾಧ್ಯ ಎಂದು ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಅವರು ಹೇಳಿದರು.
ಅವರು ಇಲ್ಲಿಯ ಭರತೇಶ ಶಿಕ್ಷಣ ಸಂಸ್ಥೆ ಆಯೋಜಿಸಿದ ಎರಡು ದಿನ ನಡೆದ ಜಿಲ್ಲಾ ಮಟ್ಟದ ದೇಶಭಕ್ತಿ ಗೀತೆಗಳ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಸಂಜೀವ ದೊಡ್ಡಣ್ಣವರ ಅವರು ಬಹುಮಾನ ವಿತರಿಸಿದರು. ಪ್ರಾಚಾರ್ಯೆ ಯೋಗಿತಾ ಪಾಟೀಲ ಸ್ವಾಗತಿಸಿದರು. ನಮ್ರತಾ ಮೋರೆ ವಂದಿಸಿದರು. ಮಿನ್ಹಾಜ್ ತರಸಗಾರ ನಿರೂಪಿಸಿದರು. ಎ.ಎ.ಸನದಿ, ಭರತೇಶ ಮಾರಣಬಸರಿ ಉಪಸ್ಥಿತರಿದ್ದರು.
ಕಿರಿಯರ ವೈಯಕ್ತಿಕ ವಿಭಾಗದಲ್ಲಿ ಸಾತ್ವಿಕ ಭಂಡಾರಿ, ಹಿರಿಯರ ವೈಯಕ್ತಿಕ ವಿಭಾಗದಲ್ಲಿ ಖುಷಿ ಢವಳಿ, ಕಿರಿಯರ ಸಾಮೂಹಿಕ ವಿಭಾಗದಲ್ಲಿ ಮರಾಠಿ ವಿದ್ಯಾನಿಕೇತನ ಶಾಲಾ ತಂಡ ಹಾಗೂ ಹಿರಿಯರ ಸಾಮೂಹಿಕ ವಿಭಾಗದಲ್ಲಿ ನಾದಸುಧಾ ಮಹಿಳಾ ತಂಡ ಪ್ರಥಮ ಬಹುಮಾನ ಪಡೆಯಿತು.
ಒಟ್ಟು ರೂ. 25000 ನಗದು ಹಾಗೂ ಆಕರ್ಷಕ ಟ್ರೋಫಿ ವಿತರಿಸಲಾಯಿತು.