ನಮ್ಮ ಸಂಸ್ಕೃತಿಯ ಪ್ರತಿಬಿಂಬವೇ ಹಿರಿಯರು-ಪಂ.ಶ್ರೀಧರಚಾರ್ಯ

Elders are the reflection of our culture - P. Sridharacharya

ನಮ್ಮ ಸಂಸ್ಕೃತಿಯ ಪ್ರತಿಬಿಂಬವೇ ಹಿರಿಯರು-ಪಂ.ಶ್ರೀಧರಚಾರ್ಯ 

ಗದಗ,01  : ಮನೆಯೇ ಮೊದಲ ಪಾಠಶಾಲೆಯಾಗಿರುವುದರಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ತಾಯಿಗೆ ಮೊದಲ ಸ್ಥಾನವಿದೆ. ಮಗುವಿಗೆ ಮೌಲ್ಯಾಧಾರಿತ ಬದುಕನ್ನು ಕಟ್ಟಿ ಕೊಡುವ ಜವಾಬ್ದಾರಿ ತಾಯಿಯದ್ದಾಗಿದೆಯೆಂದು ಸಾಹಿತಿ ಕವಿತಾ ದಂಡಿನ ಪ್ರತಿಪಾದಿಸಿದರು. 

ಜ್ಞಾನಭಾರತಿ ವಿದ್ಯಾಸಂಸ್ಥೆಯ ಶ್ರೀನಿವಾಸ ನರಗುಂದಕರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸಂಸ್ಕಾರ-ಸಾಂಸ್ಕೃತಿಕ ಮೇಳದಲ್ಲಿ    ಮಕ್ಕಳ ಪರೀಕ್ಷಾ ತಯಾರಿಕೆಯಲ್ಲಿ ಪಾಲಕರ ಕರ್ತವ್ಯ ಹಾಗೂ ಕೌಟುಂಬಿಕ ಜೀವನದಲ್ಲಿ ಸಂಸ್ಕಾರ ಅಳವಡಿಕೆಯಲ್ಲಿ ಮಾತೆಯರ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿದರು. 

ಮೌಲ್ಯ ಶಿಕ್ಷಣವು ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನುಂಟು ಮಾಡುತ್ತದೆ. ಮಕ್ಕಳು ಮೋಬೈಲ್ ದಾಸರಾಗುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿಯಾಗಿದೆ. ಮೋಬೈಲ್ ಅತೀಯಾದ ಬಳಕೆಯಿಂದ ವಿದ್ಯಾರ್ಥಿಗಳ ಮೆದುಳಿನ ಮೇಲೆ ತೀವ್ರ ಪರಿಣಾಮವುಂಟಾಗುತ್ತಿದೆ. ಮಕ್ಕಳು ಒಂಟಿತನವನ್ನು ಹೆಚ್ಚಾಗಿ ಪ್ರೀತಿಸುತ್ತಾರೆ. .ಪರಿಣಾಮವಾಗಿ ಮಕ್ಕಳು ಮನೆ,ಶಾಲೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮೌನಿಗಳಾಗುತ್ತಿದ್ದಾರೆ. ಮೋಬೈಲ್ ಮಾತ್ರವೇ ಅವರ ಬದುಕು ಎಂಬಂತಾಗಿದೆ. ಪಾಲಕರು ತಮ್ಮ ಮಕ್ಕಳ ಬಗ್ಗೆ ನಿಗಾವಹಿಸಬೇಕು.ಮಕ್ಕಳು ಮೋಬೈಲ್‌ನಲ್ಲಿ ಏನು ವಿಕ್ಷಿಸುತ್ತಿದ್ದಾರೆಂಬ ಬಗ್ಗೆ ಪಾಲಕರು ಸತತ ನಿಗಾವಹಿಸುವಂತೆ ಮನವಿ ಮಾಡಿದರು. 

ಜ್ಞಾನಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಪಂ.ಶ್ರೀಧರಚಾರ್ಯ ಶಿರಹಟ್ಟಿ ಮಾತನಾಡಿ ಹಿರಿಯರು ನಮ್ಮ ಆಸ್ತಿ. ಅವರ ಅನುಭವಗಳು ನಮಗೆ ದಾರೀದೀಪ. ನಮ್ಮ ಸಂಸ್ಕೃತಿಯ ಪ್ರತಿಬಿಂಬವೇ ಹಿರಿಯರು. ಅವರ ನಡೆ-ನುಡಿ ಮಕ್ಕಳ ಬದುಕಿಗೆ ಮಾರ್ಗದರ್ಶನವಾಗಿವೆಯೆಂದು  ಪ್ರತಿಪಾದಿಸಿದರು. 

ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳು ವೈಜ್ಞಾನಿಕ ಮನೋಭಾವದೊಂದಿಗೆ ಉತ್ತಮ ಕಲಿಕಾ ಪ್ರವೃತ್ತಿಯನ್ನು ಅಳವಡಿಸಿಕೊಂಡು ಮುಂದೆ ಬರಲು ಪ್ರಯತ್ನಶೀಲರಾಗಬೇಕು. ಕುಟುಂಬದಲ್ಲಿ ಮಕ್ಕಳ ಆಸಕ್ತಿ ಬಗೆಗೆ ಕಾಳಜಿ ಹೊಂದಿ ಅವರ ಉನ್ನತ ಭವಿಷ್ಯದತ್ತ ಎಲ್ಲರೂ ಚಿಂತಿಸಬೇಕು ಎಂದರು. 

ಸಂಪನ್ಮೂಲ ವ್ಯಕ್ತಿ ಶಿಲ್ಪಾ ಹಳ್ಳಿಕೇರಿ ಮಾತನಾಡಿ ಶಾಲೆಗಳೊಂದಿಗೆ ಪಾಲಕರು ನಿಕಟ ಸಂಪರ್ಕಹೊಂದಿ ತಾವೂ ಕೈಜೋಡಿಸಿ ಮಗುವಿನ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು. ಮಕ್ಕಳಲ್ಲಿ ಓದುವ ಹವ್ಯಾಸ ರೂಢಿಸಬೇಕು ಎಂದರು. 

  ಸಂಸ್ಥೆಯ ಕಾರ್ಯದರ್ಶಿ ಸೂರ್ಯನಾರಾಯಣ ನರಗುಂದಕರ ಮಾತನಾಡಿ ಮುಗ್ಧ ಮಕ್ಕಳ ಕನಸಿಗೆ ರಕ್ಕೆ ನೀಡುವ ಉನ್ನತ ಕೇಂದ್ರಗಳೇ ಶಾಲೆಗಳು. ಸಂಸ್ಕಾರ-ಸಂಸ್ಕೃತಿ ಮಕ್ಕಳಿಗೆ ಅವಶ್ಯವಾಗಿದ್ದು ಇದರಿಂದಾಗಿ ಮಕ್ಕಳಲ್ಲಿ ಉತ್ತಮ ಮೌಲ್ಯಗಳು ಒಡಮೂಡುತ್ತವೆ. ಅದಕ್ಕಾಗಿ ಪ್ರತಿಯೊಬ್ಬರು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು, ಹಬ್ಬ-ಹರಿದಿನಗಳ ಮಹತ್ವತೆಯನ್ನು, ಕುಟುಂಬದ ಪರಸ್ಪರ ಪರಿಚಯವನ್ನು ಮಾಡಿಕೊಡಬೇಕು. ಅಂದಾಗ ಮಕ್ಕಳು ಸುಸಂಸ್ಕೃತ ನಾಗರಿಕರಾಗಿ ಬೆಳೆಯುತ್ತಾರೆ ಎಂದರು. 

ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕದೊಂದಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ವೇದಿಕೆಯ ಮೇಲೆ ರಾಜಶ್ವೇರಿ ಬೇವಿನಮರದ, ಮುಖ್ಯೋಪಾಧ್ಯಾಯಿನಿ ಮೀನಾಕ್ಷಿ ಕಪ್ಪರದ, ಸರಸ್ವತಿ ಬಡಗೂಳಿಯವರ ಉಪಸ್ಥಿತರಿದ್ದರು.  

  ವಿದ್ಯಾ ಪೂಜಾರಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮೀನಾಕ್ಷಿ ಕಪ್ಪರದ ಸ್ವಾಗತಿಸಿ ವರದಿ ವಾಚಿಸಿದರು. ಆರ್‌.ವಿ ಪಲ್ಲೇದ ಪರಿಚಯಿಸಿದರು. ರುಕ್ಮೀಣಿ ರಾಠೋಡ ನಿರೂಪಿಸಿದರು.   ಕರಿಯಪ್ಪ ಹೆಳವಿ ವಂದಿಸಿದರು. ಕಾರ್ಯಕ್ರಮದಲ್ಲಿ ಪಾಲಕರಾದ ಸುಜಾತಾ ಶೆಂದಗೆ,ಸಪೂರಾ ಬೇಗಂ ಖಾಜಿ, ಸುನೀತಾ ದಲಭಂಜನ, ಈಶ್ವರ​‍್ಪ ಬೇವಿನಮರದ, ಗೀತಾ ಕುಲಕರ್ಣಿ,   ರಾಹುಲ ಮಹೇಂದ್ರಕರ, ಸಯ್ಯದ ಖಾಜಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.