ಕೃಷಿ ತಂತ್ರಜ್ಞಾನ ಮತ್ತು ಕೃಷಿ ಯಂತ್ರೋಪಕರಣಗಳ ಪ್ರದರ್ಶನ
ಗದಗ 26 : ಜಿಲ್ಲೆಯ ರೈತರ, ರೈತ ಮಹಿಳೆಯರ, ಗ್ರಾಮೀಣ ಯುವಕ-ಯುವತಿಯರ ಹಾಗೂ ವಿಸ್ತರಣ ಸಿಬ್ಬಂದಿಯ ಆಶೋತ್ತರಗಳನ್ನು ಈಡೇರಿಸಲು 1985 ರಲ್ಲಿ ಪ್ರಾರಂಭವಾದ ಐ.ಸಿ.ಎ.ಆರ್-ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರವು ರೈತ ಸಮುದಾಯದ ಸಮಸ್ಯೆಗಳನ್ನು ಗುರುತಿಸಿ ಜೀವನೋಪಾಯವನ್ನು ಸುಧಾರಿಸಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರವು ತನ್ನ ಮುಖ್ಯ ಕ್ಯಾಂಪಸ್‌ನಲ್ಲಿ ಕೃಷಿ ಹಾಗೂ ಕೃಷಿ ಪೂರಕ ಪ್ರಾತ್ಯಕ್ಷಿಕೆ ಘಟಕಗಳನ್ನು ರೈತರ ಸೇವೆಗಾಗಿ ಸ್ಥಾಪಿಸಿದೆ. ಇದಲ್ಲದೇ 100 ಎಕರೆ ಬೋಧನಾ ಕ್ಷೇತ್ರದಲ್ಲಿ ಹಲವಾರು ಕೃಷಿ ಹಾಗೂ ತೋಟಗಾರಿಕೆ ಮಾದರಿಗಳನ್ನು ರೂಪಿಸಿ ಅಭಿವೃದ್ಧಿಪಡಿಸಿದೆ. ತರಬೇತಿಯ ಜೊತೆಗೆ ರೈತರ ಹೊಲಗಳಲ್ಲಿ ಕ್ಷೇತ್ರ ಪ್ರಯೋಗಗಳು, ಪ್ರಾತ್ಯಕ್ಷಿಕೆ ಹಾಗೂ ವಿಸ್ತರಣಾ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ. ಕೃಷಿ ತಂತ್ರಜ್ಞಾನ ವರ್ಗಾವಣೆಯನ್ನು ಬಲಪಡಿಸಲು ಕೇಂದ್ರವು ಪ್ರತಿ ವರ್ಷ “ಕೃಷಿ ತಂತ್ರಜ್ಞಾನ ಸಪ್ತಾಹವನ್ನು” ಆಚರಿಸುತ್ತಿದೆ. ಈ ಸಪ್ತಾಹದಲ್ಲಿ ರೈತರ ತರಬೇತಿ, ವಿಚಾರ ಸಂಕಿರಣ, ವಿಸ್ತರಣಾ ಕಾರ್ಯಕ್ರಮಗಳು, ವಸ್ತು ಪ್ರದರ್ಶನ ಮುಂತಾದ ಕಾರ್ಯಕ್ರಮಗಳನ್ನು ರೈತರಿಗಾಗಿ ಹಮ್ಮಿಕೊಳ್ಳಲಾಗುತ್ತದೆ. ಕೇಂದ್ರದಲ್ಲಿ ಗದಗ ಜಿಲ್ಲೆಗೆ ಸೂಕ್ತವಾದ ಕೃಷಿ ಹಾಗೂ ಕೃಷಿ ಪೂರಕ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ಘಟಕಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಸ್ಥಾಪಿಸಲಾಗಿದ್ದು, ಇವುಗಳ ಮುಖಾಂತರ ತಂತ್ರಜ್ಞಾನಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಕೇಂದ್ರದ ಕ್ಯಾಂಪಸ್‌ನಲ್ಲಿ ಹಾಗೂ ಬೋಧನಾ ಕ್ಷೇತ್ರದಲ್ಲಿರುವ ಪ್ರಾತ್ಯಕ್ಷಿಕೆ ಘಟಕಗಳ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ.
ಸಿರಿಧಾನ್ಯ ಮೇಳ ಹಾಗೂ ಕೃಷಿ ತಂತ್ರಜ್ಞಾನ ಪ್ರದರ್ಶನ : ದಿನಾಂಕ 28-01-2025 ರಂದು ಕೃಷಿ ತಂತ್ರಜ್ಞಾನ ಹಾಗೂ ಕೃಷಿ ಯಂತ್ರೋಪಕರಣಗಳ ಪ್ರದರ್ಶನವನ್ನು ಹುಲಕೋಟಿಯ ಶ್ರೀ ಕೈಲಾಸ ಆಶ್ರಮಮದ ಆವರಣದಲ್ಲಿ ಏರಿ್ಡಸಲಾಗಿದೆ. ಈ ಕೃಷಿ ತಂತ್ರಜ್ಞಾನ ಪ್ರದರ್ಶನದಲ್ಲಿ ನೈಸರ್ಗಿಕ ಕೃಷಿ, ಮಣ್ಣು ಮತ್ತು ನೀರು ಸಂರಕ್ಷಣೆ, ಮಳೆ ನೀರು ಕೊಯ್ಲು, ಕೊಳವೆ ಬಾವಿ ಹಾಗೂ ತೆರೆದ ಬಾವಿಗಳ ಮರುಪೂರಣ, ಪರ್ಯಾಯ ಭೂ ಬಳಕೆ ಪದ್ಧತಿಗಳು, ಒಣ ಬೇಸಾಯದಲ್ಲಿ ತೋಟಗಾರಿಕೆ, ತರಕಾರಿ ಹಾಗೂ ಹೂವಿನ ಬೇಸಾಯ, ಸಾವಯವ ಕೃಷಿ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಸಿರಿಧಾನ್ಯಗಳ ಮಹತ್ವ ಹಾಗೂ ಆಹಾರದಲ್ಲಿ ಅವುಗಳ ಉಪಯೋಗ, ಹೈನುಗಾರಿಕೆ ತಂತ್ರಜ್ಞಾನಗಳು, ಶ್ರಮ ಕಡಿಮೆ ಮಾಡುವ ಸಾಧನಗಳು ಮುಂತಾದ ವಿಷಯಗಳ ಕುರಿತು ಪ್ರದರ್ಶನವನ್ನು ಆಯೋಜಿಸಲಾಗಿದೆ. ಇದರೊಂದಿಗೆ ಕೃಷಿ ಯಂತ್ರೋಪಕರಣಗಳಾದ ಮಿನಿ ಟ್ರ್ಯಾಕ್ಟರ್, ಕಳೆ ತೆಗೆಯುವ ಸಾಧನ, ಹಾಲು ಕರೆಯುವ ಯಂತ್ರ, ಕಾಳು ಸ್ವಚ ಮಾಡುವ ಯಂತ್ರ ಹಾಗೂ ಇನ್ನಿತರ ಉಪಕರಣಗಳನ್ನು ಪ್ರದರ್ಶಿಸಲಾಗಿದೆ. ಉಪಯುಕ್ತ ಕೃಷಿ ಮಾಹಿತಿ ಪುಸ್ತಕಗಳು ಹಾಗೂ ಪ್ರಕಟಣೆಗಳನ್ನು ಕೂಡಾ ಪ್ರದರ್ಶನದಲ್ಲಿ ಇಡಲಾಗಿದೆ. ಇದರ ಜೊತೆಗೆ ಸಿರಿಧಾನ್ಯಗಳ ಮಾರಾಟವನ್ನು ಏರಿ್ಡಸಲಾಗಿದೆ.
ಕೃಷಿ ಸಂಸ್ಕರಣೆ ಘಟಕ : ಹಲವಾರು ಕೃಷಿ ಉತ್ಪನ್ನಗಳಾದ ಬೇಳೆಕಾಳು ಬೆಳೆ, ಮೆಣಸಿನಕಾಯಿ, ಗೋವಿನಜೋಳ ಇತ್ಯಾದಿಗಳನ್ನು ಸಂಸ್ಕರಿಸುವ ಯಂತ್ರಗಳನ್ನು ಈ ಘಟಕವು ಹೊಂದಿದೆ. ಇದರ ಸೇವೆಯನ್ನು ಸ್ವ-ಸಹಾಯ ಗುಂಪಿನ ಮಹಿಳೆಯರು ಪಡೆಯಬಹುದಾಗಿದೆ. ಇದು ತರಬೇತಿ ಹಾಗೂ ಉತ್ಪಾದನಾ ಘಟಕವಾಗಿ ಕಾರ್ಯ ನಿರ್ವಹಿಸುತ್ತಿದೆ.
ಬೀಜ ಸಂಸ್ಕರಣೆ ಘಟಕ : ಉತ್ತಮ ಬೀಜ ಕೃಷಿಗೆ ಅತ್ಯವಷ್ಯಕ. ಅದಕ್ಕಾಗಿ ಬೀಜ ಸಂಸ್ಕರಣೆ ಯಂತ್ರವನ್ನು ಸ್ಥಾಪಿಸಲಾಗಿದೆ. ಈ ಯಂತ್ರದಲ್ಲಿ ಗ್ರೇಡಿಂಗ್ ಮಾಡಲು ಅವಕಾಶವಿದ್ದು, ರೈತಬಾಂಧವರು ತಮ್ಮ ಕಾಳು-ಕಡಿಗಳನ್ನು ಪೇಟೆಯಲ್ಲಿ ಮಾರುವದಕ್ಕಿಂತ ಮೊದಲು ಬೀಜ ಸಂಸ್ಕರಣೆ ಘಟಕದಲ್ಲಿ ಗ್ರೇಡಿಂಗ್ ಮಾಡಿಸಿ ಒಂದೇ ಸೈಜಿನ ಉತ್ತಮ ಕಾಳು-ಕಡಿಗಳನ್ನು ಪೇಟೆಗೆ ತೆಗೆದುಕೊಂಡು ಹೋಗುವದರಿಂದ ಪ್ರತಿ ಕ್ವಿಂಟಾಲಿಗೆ ರೂ. 200-300 ರಷ್ಟು ಹೆಚ್ಚಿನ ದರಗಳನ್ನು ಪಡೆಯಬಹುದು.
ಸಿರಿಧಾನ್ಯ ಸಂಸ್ಕರಣಾ ಘಟಕ : ಗಾತ್ರದಲ್ಲಿ ಸಿರಧಾನ್ಯ ಕಾಳುಗಳು ಸಣ್ಣದಾಗಿ ಇರುವುದರಿಂದ ಸಂಸ್ಕರಣೆಗೆ ಹೆಚ್ಚು ಸಮಯ ಬೇಕಾಗುತ್ತದೆ. ಸಂಸ್ಕರಿಸಿದ ಸಿರಿಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಸಿಗುವುದರಿಂದ ಪ್ರಾಥಮಿಕ ಹಂತದ ಸಂಸ್ಕರಣೆಗೆ ಹಾಗೂ ದ್ವಿತೀಯ ಹಂತದ ಸಂಸ್ಕರಣೆಗೆ ವಿವಿಧ ಯಂತ್ರೋಪಕರಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಾಥಮಿಕ ಹಂತದ ಸಂಸ್ಕರಣೆಗೆ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿಯಲ್ಲಿ ವಿವಿಧ ಯಂತ್ರೋಪಕರಣಗಳು ಲಭ್ಯವಿವೆ. ಪ್ರಮುಖವಾಗಿ ಶ್ರೇಣೀಕರಣ ಮತ್ತು ಸ್ವಚ್ಛಗೊಳಿಸುವ ಯಂತ್ರ, ಕಲ್ಲು ಬೇರಿ್ಡಸುವ ಯಂತ್ರ, ಡಿ-ಹಲ್ಲರ್‌ಯಂತ್ರ, ಹೊಳಪು ಯಂತ್ರ, ಹಿಟ್ಟು ಮಾಡುವಯಂತ್ರ, ಸಿರಿಧಾನ್ಯಗಳ ಗಿರಣಿ ಮುಂತಾದವುಗಳು.
ಅಜೋಲ್ಲಾ ಘಟಕ: ಸಸಾರಜನಕಯುಕ್ತವಾದ ಅಜೋಲ್ಲಾವು ಪಶುಗಳಿಗೆ ಉತ್ತಮ ಆಹಾರ ಒದಗಿಸುವ ಒಂದು ಸಣ್ಣ ಸಸ್ಯವಾಗಿರುತ್ತದೆ. ಇದನ್ನು ಎಲ್ಲ ರೈತರು ತಮ್ಮ ಮನೆ ಹಿತ್ತಲಿನಲ್ಲಿ ಬೆಳೆದು, ಹಿಂಡುವ ದನಗಳಿಗೆ ಅಜೋಲ್ಲಾ ನೀಡಿದರೆ ಉತ್ತಮ ಹಾಲಿನ ಇಳುವರಿ ಕಡಿಮೆ ಖರ್ಚಿನಲ್ಲಿ ಪಡೆಯಲು ಸಾಧ್ಯವಾಗುತ್ತದೆ.
ಎರೆಹುಳು ಗೊಬ್ಬರ ಘಟಕ: ಜಿಲ್ಲೆಯಲ್ಲಿ ಸಾವಯವ ಕೃಷಿ ಉತ್ತೇಜಿಸಲು ಈ ಘಟಕ ಸ್ಥಾಪಿಸಲಾಗಿದೆ. ಈ ಘಟಕದಲ್ಲಿ ರೈತರಿಗೆ ಬೇಕಾಗುವ ಎರೆಹುಳುಗಳನ್ನು ವೃದ್ಧಿಸಿ, ಅವನ್ನು ಪೂರೈಸಲಾಗುತ್ತಿದೆ. ಇದಲ್ಲದೇ ಕೆವಿಕೆ ಫಾರ್ಮನಲ್ಲಿ ದೊರೆಯುವ ಕಸ-ಕಡ್ಡಿಗಳನ್ನು ಉಪಯೋಗಿಸಿಕೊಂಡು ದೊಡ್ಡ ಪ್ರಮಾಣದಲ್ಲಿ ಎರೆಹುಳು ಗೊಬ್ಬರವನ್ನು ತಯಾರಿಸಲಾಗುತ್ತದೆ. ಎರೆಹುಳುಗಳ ಮೈಮೇಲೆ ದ್ರವರೂಪದಲ್ಲಿರುವ ಪೋಷಕಾಂಶಗಳನ್ನು ಪಡೆಯಲು ಎರೆಜಲ ಘಟಕವನ್ನು ಸ್ಥಾಪಿಸಲಾಗಿದೆ. ಇದರಿಂದ ಉತ್ಪತ್ತಿಯಾದ ಎರೆ ಜಲವನ್ನು ವಿವಿಧ ಬೆಳೆಗಳಿಗೆ ಸಿಂಪಡಿಸಿದಾಗ ಆಯಾ ಬೆಳೆಗೆ ಬೇಕಾದ ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸಿದಂತಾಗುವದು. ತನ್ಮೂಲಕ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ.
ಆಡು ಸಾಕಾಣಿಕೆ ಘಟಕ: ಉತ್ತಮ ಬೆಳವಣಿಗೆ ತೋರಿಸುವ ಜಮುನಾಪಾರಿ ಕುರಿ ತಳಿಯ ಆಡುಗಳನ್ನು ಸಾಕಲಾಗಿದ್ದು, ಇವುಗಳ ಮರಿಗಳನ್ನು ಇಚ್ಛಿತ ರೈತರಿಗೆ ಪೂರೈಸಲಾಗುವದು. ಈ ಘಟಕವನ್ನು ತರಬೇತಿಗಾಗಿ ಬರುವ ರೈತರಿಗೆ ಹೊಸ ತಂತ್ರಜ್ಞಾನಗಳನ್ನು ಕಲಿಸುವದಕ್ಕಾಗಿ ಕೂಡ ಉಪಯೋಗಿಸಲಾಗುತ್ತದೆ.
ಕುರಿ ಸಾಕಾಣಿಕೆ ಘಟಕ: ಉತ್ತಮ ಬೆಳವಣಿಗೆ ಹಾಗೂ ಉತ್ತಮ ಉಣ್ಣೆಯನ್ನು ಕೊಡುವ ರಾ್ಯಂಬುಲೆಟ್ ತಳಿಯ ಘಟಕವನ್ನು ತರಬೇತಿಗಾಗಿ ಬರುವ ರೈತರಿಗೆ ಹೊಸ ತಂತ್ರಜ್ಞಾನಗಳನ್ನು ಕಲಿಸುವದಕ್ಕಾಗಿ ಉಪಯೋಗಿಸಲಾಗುತ್ತಿದೆ.
ಹೈನುಗಾರಿಕೆ ಘಟಕ: ತರಬೇತಿಗಾಗಿ ಬರುವ ರೈತ-ರೈತಮಹಿಳೆಯರಿಗೆ ನವೀನ ತಂತ್ರಜ್ಞಾನಗಳನ್ನು ಕಲಿಸಲು ಈ ಘಟಕ ಉಪಯೋಗವಾಗುತ್ತಿದೆ.
ಮಾವು ಹಾಗೂ ಗೋಡಂಬಿ ತೋಟ: ಕೆವಿಕೆ ಮುಖ್ಯ ಕಟ್ಟಡದ ಮುಂಭಾಗದ ಎರಡು ಎಕರೆ ಪ್ರದೇಶದಲ್ಲಿ ಅಲ್ಪೊನ್ಸೋ ಜಾತಿಯ (ಬದಾಮು) ಮಾವಿನ ಗಿಡಗಳನ್ನು ಬೆಳಸಲಾಗಿದೆ. ಈ ತೋಟದಲ್ಲಿ ಎಲ್ಲ ಜಾತಿಯ (ಸಿಂಧು, ಹೈಬ್ರಿಡ್, ಮಲ್ಲಿಕಾ, ಕೇಸರ್ ಇತ್ಯಾದಿ) ಗಿಡಗಳನ್ನು ಬೆಳಸಲಾಗಿದ್ದು, ಇವುಗಳನ್ನು ಕಸಿ ಮಾಡಲು ಉಪಯೋಗಿಸಲಾಗುತ್ತದೆ. ಇದೇ ರೀತಿ ಹಿಂಭಾಗದಲ್ಲಿ ಗೋಡಂಬಿಯ ವಿವಿಧ ತಳಿಗಳನ್ನು ಬೆಳೆಸಲಾಗಿದೆ.
ಸಿರಿಧಾನ್ಯಗಳು ಹಾಗೂ ಸಾಂಪ್ರದಾಯಕ ಫುಡ್ ಕೆಫೆ: ಆರೋಗ್ಯ ಸಂಪತ್ತು ಎಲ್ಲರಿಗೂ ಬೇಕು. ಬದಲಾಗುತ್ತಿರುವ ಜೀವನ ಶೈಲಿ, ಆಧುನಿಕತೆ, ಬಾಯಿ ರುಚಿ ಮತ್ತು ಸಿದ್ಧ ಆಹಾರಗಳ ಬಳಕೆಯಿಂದ ನಾನಾ ತರಹದ ರೋಗಗಳು ಸಣ್ಣ ವಯಸ್ಸಿನಲ್ಲಿ ಕಂಡು ಬರುತ್ತವೆ. ಮುಖ್ಯವಾಗಿ ಮಧುಮೇಹ, ರಕ್ತದ ಒತ್ತಡ, ನರಗಳ ದೌರ್ಬಲ್ಯ, ಪಾರ್ಶ್ವವಾಯು ಇತ್ಯಾದಿ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪರ್ಯಾಯವಾದ ಆಹಾರದ ಬಳಕೆ ಅತ್ಯವಶ್ಯಕ. ನಮ್ಮ ಪೂರ್ವಜರು ಬಳಸುತ್ತಿದ್ದ ಸಿರಿಧಾನ್ಯಗಳ ಆಹಾರವನ್ನು ಮರು ಪರಿಚಯಿಸಬೇಕಾಗಿದೆ. ಈ ನಿಟ್ಟಿನಲ್ಲಿ ಗದಗ ಜಿಲ್ಲೆಯಲ್ಲಿ ಸಿರಿಧಾನ್ಯಗಳ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುತ್ತಿದೆ. ಜೊತೆಗೆ ಸಿರಿಧಾನ್ಯಗಳಿಂದ ತಯಾರಿಸಿದ ವಿವಿಧ ಆಹಾರ ಪದಾರ್ಥಗಳನ್ನು ಹಾಗೂ ಮೌಲ್ಯವರ್ಧಿತ ವಸ್ತುಗಳನ್ನು ತರಬೇತಿ, ಪ್ರಾತ್ಯಕ್ಷಿಕೆ ಹಾಗೂ ವಸ್ತು ಪ್ರದರ್ಶನದ ಮೂಲಕ ಪರಿಚಯಿಸುತ್ತಿದೆ. ಈ ವ್ಯವಸ್ಥೆಯನ್ನು ಬಲಪಡಿಸಲು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಸಿರಿಧಾನ್ಯಗಳ ರೆಸ್ಟಾರಂಟನ್ನು ಪ್ರಾರಂಭಿಸಲಾಗಿದೆ.
ಅಗ್ರಿಕ್ಲಿನಿಕ್: ಒಂದೇ ಸೂರಿನಡಿ ರೈತರಿಗೆ ವಿವಿಧ ಸೌಲಭ್ಯ ಕಲ್ಪಿಸಲು ಅಗ್ರಿ ಕ್ಲಿನಿಕ್ ಪ್ರಾರಂಭಿಸಲಾಗಿದೆ. ರೈತರಿಗೆ ಬೇಕಾಗುವ ಸುಧಾರಿತ ಬೀಜ, ಸಸಿಗಳು, ಜೈವಿಕ ಗೊಬ್ಬರ, ಸಾವಯವ ಪರಿಕರಗಳು ರೈತರಿಗೆ ಪೂರೈಸಲಾಗುತ್ತಿದೆ. ಜೊತೆಗೆ ಸೂಕ್ತವಾದ ಕೃಷಿ ಸಲಹೆ ಹಾಗೂ ಮಾರ್ಗದರ್ಶನವನ್ನು ರೈತರಿಗೆ ಕೊಡಲಾಗುತ್ತಿದೆ.
ಮಣ್ಣು ಮತ್ತು ನೀರು ಪರೀಕ್ಷೆ: ಈ ಸೌಲಭ್ಯವನ್ನು ರೈತರಿಗೆ ಕೊಡಲಾಗುತ್ತಿದ್ದು, ಪರೀಕ್ಷೆಯ ಆಧಾರದ ಮೇಲೆ ಸೂಕ್ತವಾದ ಬೆಳೆ ಪದ್ಧತಿಯನ್ನು ಅಳವಡಿಸಲು ರೈತರಿಗೆ ಶಿಫಾರಸ್ಸುಮಾಡಲಾಗುತ್ತಿದೆ.
ಕಿಸಾನ್ ಮೊಬೈಲ್ ಸಂದೇಶಗಳು: ಈ ಸೇವೆಯಲ್ಲಿ ರೈತರಿಗೆ ಬೆಳೆ, ಹವಾಮಾನ, ಮಾರುಕಟ್ಟೆ, ಪಶು ಸಂಗೋಪನೆ ಇತರೆ ಮಾಹಿತಿಯನ್ನು ರೈತರಿಗೆ ಮೊಬೈಲ್ ಮುಖಾಂತರ ಹಂಗಾಮಿಗೆ ಅನುಗುಣವಾಗಿ ಕೊಡಲಾಗುತ್ತಿದೆ.
ಕೆವಿಕೆ ಫಾರ್ಮ, ಕುರ್ತಕೋಟಿ
ಕುರ್ತಕೋಟಿ ಗ್ರಾಮದ ಸರಹದ್ದಿನಲ್ಲಿ ಹುಲಕೋಟಿ-ಕುರ್ತಕೋಟಿ ಹಾಗೂ ಕುರ್ತಕೋಟಿ-ಅಸುಂಡಿ ರಸ್ತೆಗೆ ಹೊಂದಿಕೊಂಡಂತೆ ಸುಮಾರು 66 ಎಕರೆಗಳಲ್ಲಿ ಕೆವಿಕೆ ಫಾರ್ಮ ಇರುತ್ತದೆ. ಈ ಫಾರ್ಮನಲ್ಲಿ ಮುಖ್ಯವಾಗಿ ಎರೆಮಣ್ಣಿನಲ್ಲಿ ವಿವಿಧ ರೀತಿಯ ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ. ಅದರ ವಿವರಗಳು ಈ ಕೆಳಗಿನಂತಿವೆ.
ತೋಟಗಾರಿಕೆ ಬೆಳೆಗಳು : ಕಪ್ಪು ಮಣ್ಣಿನಲ್ಲಿ ಸಾಮಾನ್ಯವಾಗಿ ರೈತರು ಹೆಚ್ಚಾಗಿ ಕೃಷಿ ಬೆಳೆಗಳನ್ನು ಮಾತ್ರ ಬೆಳೆಯುತ್ತಾರೆ. ಬರಗಾಲದ ನಿರಂತರ ಸಮಸ್ಯೆ ಎದುರಿಸುತ್ತಿರುವ ಗದಗ ಜಿಲ್ಲೆಯಲ್ಲಿ ಮಳೆಯು ನಿಯಮಿತವಾಗಿ ಆಯಾ ಕಾಲದಲ್ಲಿ ಆಗದೇ ಇರುವದರಿಂದ ಬರೀ ಕೃಷಿ ಬೆಳೆಗಳನ್ನು ಬೆಳೆಯುವ ರೈತ ಬಹಳಷ್ಟು ಸಲ ಹಾನಿ ಅನುಭವಿಸುತ್ತಾನೆ. ಇದನ್ನು ತಪ್ಪಿಸಲು ಕಪ್ಪು ಮಣ್ಣಿನಲ್ಲಿ ಉತ್ತಮವಾಗಿ ಬರಬಲ್ಲ ಬೆಳೆಗಳು ಯಾವುವು ಮತ್ತು ಅವುಗಳನ್ನು ಯಾವ ರೀತಿ ಬೆಳೆಸಬಹುದು ಎಂಬುದನ್ನು ಸಂಶೋಧನೆ ಮಾಡಲಾಗುತ್ತಿದೆ. ಕಪ್ಪು ಮಣ್ಣಿನಲ್ಲಿ ಮಾವು, ಹುಣಸೆ, ನೇರಳೆ, ನೆಲ್ಲಿ ಇತ್ಯಾದಿ ಮರಗಳನ್ನು ಬೆಳೆಸಲು ಪ್ರಯತ್ನಿಸಲಾಗುತ್ತಿದೆ. ಇವುಗಳಲ್ಲಿ ಉತ್ತಮವೆಂದು ಕಂಡುಬರುವ ಹಾಗೂ ರೈತನಿಗೆ ಹೆಚ್ಚು ಆದಾಯ ತಂದುಕೊಡುವ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಕೆ.ವಿ.ಕೆ.ಯು ಸಂಶೋಧನೆಯ ನಂತರ ರೈತರಿಗೆ ತಾಂತ್ರಿಕ ಮಾಹಿತಿ ಒದಗಿಸುತ್ತದೆ.
ಅರಣ್ಯ ಬೆಳೆಗಳು : ಕಪ್ಪು ಮಣ್ಣಿನಲ್ಲಿ ಕೃಷಿ ಬೆಳೆಗಳ ಜೊತೆಗೆ ಅಥವಾ ಬೇರೆ ಬೇರೆಯಾಗಿ ಬೆಳೆಯಬಹುದಾದ ಸಿಮರೂಬಾ, ಬೇವು, ಹೊಂಗೆ, ಹೆಬ್ಬೇವು, ರಕ್ತ ಚಂದನ, ಶ್ರೀಗಂಧ ಇತ್ಯಾದಿಗಳನ್ನು ಹಲವು ವಿಧಗಳಲ್ಲಿ ಬೆಳೆಯಲಾಗಿದೆ. ಲಾಭದಾಯಕವಾದ ಅರಣ್ಯ ಬೆಳೆಗಳನ್ನು ಇಡಿಯಾಗಿ ಅಥವಾ ಕೃಷಿ ಬೆಳೆಗಳ ಜೊತೆಗೆ ಬೆಳೆಯಲು ರೈತರಿಗೆ ತಾಂತ್ರಿಕ ಮಾಹಿತಿ ನೀಡಲಾಗುವದು. ಉತ್ತಮ ತಳಿಗಳ ಸಸಿಗಳನ್ನು ತಯಾರಿಸಿ ರೈತರಿಗೆ ಕೊಡಲಾಗುವದು.
ಹುಲ್ಲು ಬೆಳೆಗಳು : ಹೈನುಗಾರಿಕೆ, ಆಡು ಹಾಗೂ ಕುರಿ ಸಾಕಾಣಿಕೆಗೆ ಅನುಕೂಲವಾಗುವ ಹಲವಾರು ಹುಲ್ಲು ಬೆಳೆಗಳನ್ನು ವಿವಿಧ ರೀತಿಗಳಲ್ಲಿ ಮತ್ತು ವ್ಯವಸ್ಥೆಗಳಲ್ಲಿ ಬೆಳೆಯಲಾಗುತ್ತಿದೆ. ಬದುವಿನ ಮೇಲೆ ಬ್ರೆಕೇರಿಯಾ ಹಾಗೂ ಸ್ಟೈಲೋ ಹೆಮಾಟಾ ಹುಲ್ಲುಗಳನ್ನು ಹಚ್ಚಲಾಗಿದೆ. ಅರಣ್ಯ ಸಸಿಗಳ ಸಾಲಿನಲ್ಲಿ ಸೈಕ್ರಸ್, ಸಿಲಿಯಾರಿಸ್ ಹಾಗೂ ಸ್ಟೈಲೋ ಸಿಯಾಬ್ರಾನಾ ಹುಲ್ಲುಗಳನ್ನು ನೆಡಲಾಗಿದೆ. ಈ ಹುಲ್ಲುಗಳ ಬೀಜಗಳನ್ನು ಹಾಗೂ ಗಡ್ಡೆಗಳನ್ನು ಈಗಾಗಲೇ ನೂರಾರು ಜನ ರೈತರಿಗೆ ಕೊಡಲಾಗಿದೆ.
ಕೃಷಿ ಬೆಳೆಗಳು : ಕಪ್ಪು ಮಣ್ಣಿನಲ್ಲಿ ಬೆಳೆಯಬಹುದಾದ ಹಿಂಗಾರು ಹಂಗಾಮಿನ ಬೆಳೆಗಳಾದ ಜೋಳ ಹಾಗೂ ಕಡಲೆ ಬೀಜಗಳನ್ನು ಬಿತ್ತಲಾಗಿದ್ದು, ಮುಂದಿನ ಹಂಗಾಮಿಗೆ ಈ ಬೆಳೆಗಳ ಫೌಂಡೇಶನ್ ಬೀಜಗಳನ್ನು ಬೀಜೋತ್ಪಾದನೆ ಮಾಡುವ ರೈತರಿಗೆ ಕೊಡಲಾಗುವದು. ತನ್ಮೂಲಕ ಉತ್ತಮ ತಳಿಗಳ ಬೀಜಗಳು ಎಲ್ಲ ರೈತರಿಗೂ ಲಭ್ಯವಾಗುವದು. ಈ ಬೆಳೆಗಳಲ್ಲಿ ಅನುಸರಿಸುವ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಇವನ್ನು ಬೆಳೆಯಲಾಗುತ್ತಿದ್ದು, ಹೆಚ್ಚಿನ ಉತ್ಪಾದಕತೆ ಮಾಡಲು ಪ್ರಯತ್ನಿಸಲಾಗುತ್ತಿದೆ.
ಬೋರವೆಲ್ ರಿಚಾರ್ಜ್ ಪಿಟ್ : ಮಳೆ ನೀರನ್ನು ಕೊಯ್ಲು ಮಾಡಿ ಬೋರವೆಲ್ ಮುಖಾಂತರ ಅಂತರ್ಜಲ ಮರುಪೂರಣ ಮಾಡುವ ವ್ಯವಸ್ಥೆಯನ್ನು ಫಾರ್ಮಿನಲ್ಲಿ ಮಾಡಲಾಗಿದೆ. ತನ್ಮೂಲಕ ಬೇಸಿಗೆ ಹಂಗಾಮಿನಲ್ಲಿ ನೀರಿನ ಕೊರತೆಯನ್ನು ನೀಗಿಸಿಕೊಳ್ಳಲು ಪ್ರಯತ್ನಿಸಲಾಗಿದೆ. ನೀರಿನ ಸಮಸ್ಯೆ ಎದುರಿಸುತ್ತಿರುವ ರೈತರು ಈ ತಂತ್ರಜ್ಞಾನವನ್ನು ಬಳಸಿಕೊಂಡು ಬತ್ತಿದ ಬಾವಿ/ಬೋರವೆಲ್‌ಗಳಲ್ಲಿ ಜಲಮರುಪೂರಣ ಮಾಡಿ, ಅದೇ ನೀರನ್ನು ಬೇಕಾದ ಸಮಯದಲ್ಲಿ ಉಪಯೋಗಿಸಿಕೊಳ್ಳಬಹುದು.
ಕೃಷಿ ಹೊಂಡ/ಚೆಕ್ ಡ್ಯಾಂ/ಇನ್‌ಫಿಲ್ಟರೇಶನ್ ವೆಲ್ ಇತ್ಯಾದಿ : ಹೆಚ್ಚಾದ ಮಳೆನೀರನ್ನು ಸಂಗ್ರಹಿಸಲು ಕೆ.ವಿ.ಕೆ. ಫಾರ್ಮಿನಲ್ಲಿ ಮೂರು ಕೃಷಿ ಹೊಂಡಗಳನ್ನು, ಒಂದು ಚೆಕ್ ಡ್ಯಾಂ, ಹಲವಾರು ಇನ್‌ಫಿಲ್ಟರೇಶನ್ ವೆಲ್‌ಗಳು ಹಾಗೂ ಇನ್ನಿತರೆ ಸ್ಟ್ರಕ್ಚರ್‌ಗಳನ್ನು ಮಾಡಲಾಗಿದೆ. ಇದರಿಂದಾಗಿ ಬಿದ್ದ ಮಳೆ ನೀರನ್ನು ಭೂಮಿಯಲ್ಲಿ ಇಂಗಿಸಲು ಅನುಕೂಲವಾಗುತ್ತದೆ.
ಒಟ್ಟಾರೆ ಕೆ.ವಿ.ಕೆ. ಫಾರ್ಮಿನಲ್ಲಿ ಕಪ್ಪು ಮಣ್ಣಿನಲ್ಲಿ ರೈತರು ಹೇಗೆ ಹೆಚ್ಚಿನ ಆದಾಯ ಪಡೆಯಬಹುದು ಹಾಗೂ ಬರಗಾಲದ ಬವಣೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುವದರ ಬಗ್ಗೆ ನಿರಂತರ ಸಂಶೋಧನೆ ನಡೆಯುತ್ತಿದ್ದು, ಉತ್ತಮವೆಂದು ಕಂಡುಬಂದ ಪರಿಣಾಮಗಳನ್ನು ರೈತರಿಗೆ ತರಬೇತಿ ಹಾಗೂ ಪ್ರಾತ್ಯಕ್ಷಿಕೆಗಳ ಮುಖಾಂತರ ತಲುಪಿಸಲು ಕೆ.ವಿ.ಕೆ. ಪ್ರಯತ್ನಿಸುತ್ತಿದೆ.