ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು: ಸೋಮಸುಂದರ್
ಬಳ್ಳಾರಿ 24: ರೈತರು ರಾಷ್ಟ್ರದ ಬೆನ್ನೆಲುಬಾಗಿದ್ದು, ರೈತರು ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡು ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್.ಕೆ.ಎಂ ಅವರು ಹೇಳಿದರು.
ನಗರದ ಹಳೆಯ ತಾಲ್ಲೂಕು ಕಚೇರಿ ಅವರಣದಲ್ಲಿ ಸೋಮವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ರೈತರು ದೇಶದ ಜೀವನಾಡಿಯಾಗಿದ್ದು, ಸಮಾಜದಲ್ಲಿ ಎಲ್ಲರೂ ರೈತರನ್ನು ಗೌರವದಿಂದ ಕಾಣಬೇಕು ಎಂದು ತಿಳಿಸಿದರು.
ಉಪ ಕೃಷಿ ನಿರ್ದೇಶಕ ಮಂಜುನಾಥ.ಎಸ್.ಎನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರೈತರು ಹಗಲು-ಇರುಳು ಯಾವುದೇ ಸ್ವಾರ್ಥ ಇಲ್ಲದೇ ನಿಸ್ವಾರ್ಥದಿಂದ ದುಡಿಯುವ ಶ್ರಮಿಕರಾಗಿದ್ದಾರೆ, ಅವರಿಗೆ ಗೌರವಿಸುವುದು ನಮ್ಮ ಧರ್ಮವಾಗಿದೆ. ರೈತರು ತಮ್ಮ ಆರೋಗ್ಯದ ಕಾಳಜಿ ವಹಿಸಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕ ದಯಾನಂದ.ಎಂ ಅವರು ಮಾತನಾಡಿ, ಕೃಷಿ ಇಲಾಖೆಯಡಿ ಲಭ್ಯವಿರುವ ವಿವಿಧ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ 2024-25ನೇ ಸಾಲಿನಲ್ಲಿ ಬಳ್ಳಾರಿ ತಾಲ್ಲೂಕು ಕೃಷಿ ಇಲಾಖೆಯ ಆತ್ಮಯೋಜನೆ(ಕಿಸಾನ್ ಗೋಷ್ಠಿ)ಯಡಿ ಸಾಧಕ ರೈತ ಮತ್ತು ರೈತ ಮಹಿಳೆಯರಿಗೆ ಸನ್ಮಾನಿಸಲಾಯಿತು.
ಜಿಲ್ಲಾ ಮಟ್ಟದಿಂದ 10 ರೈತರು-ರೈತ ಮಹಿಳೆಯರು ಹಾಗೂ ತಾಲ್ಲೂಕು ಮಟ್ಟದಿಂದ 03 ರೈತ-ರೈತ ಮಹಿಳೆಯರಿಗೆ ಸಮಗ್ರ ಕೃಷಿ ಪದ್ದತಿಯಡಿ ಸಾಧನೆಗೈದ ರೈತ ಮತ್ತು ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು.ಇದೇ ವೇಳೆ ಹಗರಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಿಂದ “ಸಮೃದ್ಧ ಸಿರಿಧಾನ್ಯಗಳ ಮೌಲ್ಯವರ್ಧನೆ” ಎಂಬ ಶೀರ್ಷಿಕೆಯ ಕಿರುಹೊತ್ತಿಗೆ ಬಿಡುಗಡೆ ಮಾಡಿ ಸಿರಿಧಾನ್ಯಗಳ ಮೌಲ್ಯ ಹಾಗೂ ಅವುಗಳ ಉಪಯುಕ್ತತೆ ಕುರಿತು ಮಹತ್ವ ತಿಳಿಸಿಕೊಟ್ಟರು.ಈ ಸಂದರ್ಭದಲ್ಲಿ ಹಗರಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಪಾಲಯ್ಯ, ಡಾ.ರಾಜೇಶ್ವರಿ, ಜುವಾರಿ ಮುಖ್ಯ ವ್ಯವಸ್ಥಾಪಕರಾದ ಮಹೇಶ್ ಕಾಟ್ಕೆ ಸೇರಿದಂತೆ ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಆತ್ಮಯೋಜನೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.