ಗದಗ 19: ಬರದಂತಹ ಸಂಕಷ್ಟ ಸ್ಥಿತಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮ ಪಂಚಾಯತಿ ಅಧಿಕಾರಿ ಸಿಬ್ಬಂದಿ ಹಾಗೂ ಕಂದಾಯ ನೀರಿಕ್ಷಕರು ಪ್ರತಿಯೊಂದು ಗ್ರಾಮಕ್ಕೂ ಭೇಟಿ ನೀಡಿ ಬರ ಪರಿಸ್ಥಿತಿ ಕುರಿತಂತೆ ಇರುವ ಸಮಸ್ಯೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದು ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜವಾಬ್ದಾರಿ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಿ ಜನರ ವಿಶ್ವಾಸಕ್ಕೆ ಪಾತ್ರರಾಗಲು ರಾಜ್ಯ ಕಂದಾಯ ಸಚಿವ ಆರ.ವಿ.ದೇಶಪಾಂಡೆ ಅವರು ಸೂಚಿಸಿದರು.
ಗದಗ ಜಿಲ್ಲಾಪಂಚಾಯತ ಸಭಾಂಗಣದಲ್ಲಿಂದು ಜರುಗಿದ ಜಿಲ್ಲೆಯ ಬರ ನಿರ್ವಹಣೆ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿಂದಿನ ವರ್ಷಗಳಲ್ಲಿ ಜಿಲ್ಲೆಯ ಸಮಗ್ರ ಗ್ರಾಮಗಳಿಗೆ ನೀರು ಪೂರೈಸುವ ಡಿ.ಬಿ.ಒ.ಟಿ ಯೋಜನೆಯಿಂದಾಗಿ ಜಿಲ್ಲಾಡಳಿತ ನಿರಾಳವಾಗಿ ಕೆಲಸ ಮಾಡುವ ಸ್ಥಿತಿ ಇರುವುದು ನೆಮ್ಮದಿಯ ವಿಷಯವಾಗಿದೆ ಅದಾಗಿಯೂ ಜನತೆಯ ಅವಶ್ಯಕತೆಗಳಾದ ಉದ್ಯೋಗ ಮತ್ತು ರೈತರ ಜಾನುವಾರುಗಳಿಗೆ ಮೇವು ಕುರಿತಂತೆ ಹೆಚ್ಚಿನ ಗಮನ ನೀಡಿ ಕಾರ್ಯನಿರ್ವಹಿಸಲು ಸಚಿವ ದೇಶಪಾಂಡೆ ತಿಳಿಸಿದರು. ಬಿಸಿಲಿನ ಜಳದಿಂದ ಪ್ರಾಣ ಹಾನಿಗಳಾದ್ದಲ್ಲಿ ನಿಯಮಾನುಸಾರ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಟಾಸ್ಕಫೋರ್ಸ ಅನುದಾನದಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಪೂರೈಕೆ ಪೈಪುಗಳು ಮನೆ ಮನೆಗೂ ತಲುಪುವಂತೆ ಕ್ರಮ ಜರುಗಿಸ ಬೇಕು ಇದರಿಂದ ಭವಿಷ್ಯದಲ್ಲಿ ಪಂಚಾಯತಿಗಳಿಗೆ ಆದಾಯ ಹೆಚ್ಚಿಸುವದಕ್ಕೆ ಅವಕಾಶ ಒದಗಲಿದೆ. ಮೇವು ಬ್ಯಾಂಕಗಳನ್ನು ಬೇಡಿಕೆಗೆ ಅನುಸಾರವಾಗಿ ಹಾಗೂ ರೈತರಿಗೆ ಸಮೀಪವಾಗುವ ಕೇಂದ್ರವನ್ನು ಆಯ್ಕೆ ಮಾಡಿ ಪ್ರಾರಂಭಿಸಲು ಸೂಚಿಸಿದ ಸಚಿವರು ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ರೈತರ ಜಮೀನುಗಳಲ್ಲಿ ಹಾಗೂ ಗ್ರಾಮಗಳಲ್ಲಿ ಜಲ ಸಂವರ್ಧನೆ ಹೆಚ್ಚಿಸುವ ಯೋಜನೆಗಳನ್ನು ಕಾರ್ಯಗತಗೊಳಿಸಲು ತಿಳಿಸಿದರು. ಮುಂಗಾರು ಹಂಗಾಮಿನಲ್ಲಿ ಮಳೆ ಆದ ತಕ್ಷಣ ರೈತರಿಗೆ ಅಗತ್ಯದ ಗುಣಮಟ್ಟದ ಬೀಜ ಹಾಗೂ ಗೊಬ್ಬರ ಸಿಗುವದಕ್ಕೆ ಇಗಿನಿಂದಲೇ ಬೇಡಿಕೆಗೆ ತಕ್ಕಂತೆ ದಾಸ್ತಾನು ಮಾಡಿಕೊಳ್ಳಲು ಕ್ರಮ ಜರುಗಿಸಲು ಸಚಿವ ದೇಶಪಾಂಡೆ ನಿದರ್ೇಶನ ನೀಡಿದರು.
ರಾಜ್ಯದ ಕೌಶಲ್ಯಾಭಿವೃದ್ಧಿ, ಮುಜರಾಯಿ ಇಲಾಖೆಗಳ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಪಿ.ಟಿ. ಪರಮೇಶ್ವರ ನಾಯ್ಕ ಅವರು ಮಾತನಾಡಿ ಜಿಲ್ಲೆಯಲ್ಲಿ ಸಮಗ್ರ ಹಳ್ಳಿಗಳಿಗೆ ಮಲಪ್ರಭಾ ಹಾಗೂ ತುಂಗಭದ್ರಾ ನದಿಗಳಿಂದ ನೀರು ಸರಬರಾಜು ಮಾಡುವ ಡಿ.ಬಿ.ಓ.ಟಿ. ಯೋಜನೆ ಜಾರಿಯಿಂದಾಗಿ ಬರಗಾಲದಲ್ಲೂ ಕೂಡ ಜನರಿಗೆ ನೀರು ಪೂರೈಕೆ ಆಗುತ್ತಿರುವದು ಉತ್ತಮ ಕಾರ್ಯವಾಗಿದೆ. ಜಿಲ್ಲೆಯ ಅರಣ್ಯ ಸಂರಕ್ಷಣೆ ಹಾಗೂ ಸಂವರ್ಧನೆ ನಿಟ್ಟಿನಲ್ಲಿ ಕಪ್ಪತಗುಡ್ಡ ಅರಣ್ಯ ಪ್ರದೇಶವನ್ನು ವನ್ಯಧಾಮವಾಗಿ ರಾಜ್ಯ ಸರಕಾರ ಆದೇಶ ಮಾಡಿರುವದು ಈ ಭಾಗದ ಜನರ ಭಾವನೆಗಳಿಗೆ ಸ್ಪಂದಿಸಿದಂತಾಗಿದೆ. ರಾಜ್ಯದಲ್ಲಿ ಮಳೆಗಾಗಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ಮೂವತ್ತೈದು ಸಾವಿರ ದೇವಾಲಯಗಳಲ್ಲಿ ಪರ್ಜನ್ಯ ಜಪ ಏರ್ಪಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರು. ಗದಗ ಜಿಲ್ಲಾಡಳಿತ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಬರ ಪರಿಸ್ಥಿತಿಯನ್ನು ಚೆನ್ನಾಗಿ ನಿರ್ವಹಿಸುತ್ತಿದ್ದು ಮಳೆಗಾಲದ ವರೆಗೂ ಜನರಿಗೆ ಕುಡಿಯುವ ನೀರು, ಉದ್ಯೋಗ ಹಾಗೂ ಜಾನುವಾರುಗಳಿಗೆ ಮೇವು ಪೂರೈಕೆಯನ್ನು ಜವಾಬ್ದಾರಿ ಹಾಗೂ ದಕ್ಷತೆಯಿಂದ ನಿರ್ವಹಿಸಲು ಜಿಲ್ಲಾ ಉಸ್ತುವಾರಿ ಸಚಿವರ ಪಿ.ಟಿ.ಪರಮೇಶ್ವರ ನಾಯ್ಕ ಸೂಚಿಸಿದರು.
ರಾಜ್ಯದ ತೋಟಗಾರಿಕೆ ಸಚಿವರಾದ ಎಂ.ಸಿ.ಮನಗೂಳಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ ಸಿ.ಇ.ಒ. ಮಂಜುನಾಥ ಚವ್ಹಾಣ, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.