ಪಣಜಿ,ಮಾ 19: ಗೋವಾ ನೂತನ ಮುಖ್ಯಮಂತ್ರಿಯಾಗಿ ವಿಧಾನಸಭೆಯ ಸ್ಪೀಕರ್ ಡಾ. ಪ್ರಮೋದ್ ಸಾವಂತ್ ಸೋಮವಾರ ಬೆಳಗಿನ ಜಾವ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಡೊನಾ ಪೌಲಾದ ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲೆ ಮೃದುಳಾ ಸಿನ್ಹಾ ಪ್ರಮೋದ್ ಸಾವಂತ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ಬೋಧಿಸಿದರು. ಸಾವಂತ್ ಕೊಂಕಣಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ, ಡಾ. ಸಾವಂತ್ ಅವರ ಸಂಪುಟದ ಸಹೊದ್ಯೋಗಿಗಳು, ಶಾಸಕರು ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸಾವಂತ್ ಅವರೊಂದಿಗೆ, ಶಾಸಕರಾದ ಸುದಿನ್ ಧಾವ್ಲಿಕರ್, ವಿಜಯ್ ಸರದೇಸಾಯಿ, ಬಾಬು ಅಜಗಾವ್ಂಕರ್, ರೋಹನ್ ಕುಂಟೆ, ಗೋವಿಂದ್ ಗೌಡೆ, ವಿನೋದ್ ಪಾಳ್ಯಕಾರ್, ಜಯೇಶ್ ಸೋಲ್ ಗಾಂವ್ಕರ್, ಮುವಿನ್ ಗೊಡಿನ್ಹೊ, ವಿಶ್ವಜಿತ್ ರಾಣೆ, ಮಿಲಿಂದ್ ನಾಯಕ್ ಹಾಗೂ ನಿಲೇಶ್ ಕ್ಯಾಬ್ರಲ್ ಸಂಪುಟ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.
ಸಚಿವ ಸಂಪುಟ ಸದಸ್ಯರಿಗೆ ಖಾತೆಗಳನ್ನು ಹಂಚಿಕೆಮಾಡಲಾಗಿಲ್ಲ. ಆದರೂ ಧಾವ್ಲೀಕರ್ ಹಾಗೂ ವಿಜಯ್ ಸರದೇಸಾಯಿ ಅವರನ್ನು ಉಪ ಮುಖ್ಯಮಂತ್ರಿಯಾಗಿ ನೇಮಿಸುವ ಸಾಧ್ಯತೆಯಿದೆ
ಬಿಜೆಪಿ ರಾಷ್ಟ್ರೀಯ ನಾಯಕರು ಮೈತ್ರಿ ಪಕ್ಷಗಳಾದ ಎಂಜಿಪಿ ಹಾಗೂ ಜಿಎಫ್ ಪಿ ಶಾಸಕರೊಂದಿಗೆ ದಿನವಿಡೀ ನಡೆಸಿದ ಸರಣಿ ಸಭೆ ಹಾಗೂ ಚರ್ಚೆಯ ನಂತರ ಅಂತಿಮ ಸೋಮವಾರ ಮಧ್ಯರಾತ್ರಿನಂತರ ನೂತನ ಮುಖ್ಯಮಂತ್ರಿ ಹಾಗೂ ಸಚಿವರ ಪ್ರಮಾಣವಚನ ಸಮಾರಂಭ ನಡೆಯಿತು.
ಪ್ರಮಾಣ ವಚನ ಸ್ವೀಕರ ಸಮಾರಂಭ ರಾತ್ರಿ 11 ಗಂಟೆಗೆ ನಿಗಧಿಪಡಿಸಲಾಗಿತ್ತು. ಆದರೆ ನಾನಾ ಕಾರಣಗಳಿಂದ ವಿಳಂಬದಿಂದಾಗಿ ಸಮಾರಂಭ ಬೆಳಗಿನ ಜಾವ ಸುಮಾರು 2 ಗಂಟೆಗೆ ನಡೆಯಿತು.