ಸಂಭ್ರಮದಿಂದ ಹನುಮ ಜಯಂತಿ ಆಚರಣೆ
ದೇವರಹಿಪ್ಪರಗಿ 12: ಹನುಮ ದೇವರ ಸ್ಮರಣೆ ಎಲ್ಲರಲ್ಲೂ ಒಂದು ವಿಶೇಷ ಶಕ್ತಿಯನ್ನು ತುಂಬುತ್ತದೆ. ರಾಮದೂತನನ್ನು ನೆನೆಯುವ ದಿನವೇ ಹನುಮ ಜಯಂತಿಯಾಗಿದ್ದು, ತ್ರೇತಾಯುಗದಲ್ಲಿ ರಾಮಭಕ್ತನಾಗಿ ಅವತಾರ ಮಾಡಿದ ಹನುಮನಿಗೆ ಅನೇಕ ವಿಧವಾದ ಶಕ್ತಿಯಿರುವುದನ್ನು ರಾಮಾಯಣದಲ್ಲಿ ತಿಳಿದುಕೊಳ್ಳಬಹುದು ಎಂದು ಸಿದ್ದೇಶ್ವರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವ್ಹಿ.ಕೆ.ಪಾಟೀಲ ಹೇಳಿದರು.
ಅವರು ಪಟ್ಟಣದ ಇಂಡಿ ರಸ್ತೆಯ ಕೆಇಬಿ ಹನುಮಾನ ಮಂದಿರದಲ್ಲಿ ಶನಿವಾರ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಇಬಿ ಸಿಬ್ಬಂದಿಗಳಾದ ಚಿದಾನಂದ ಸುರುಪುರ, ಮಲ್ಲು ಪೂಜಾರಿ ಹಾಗೂ ಶಿವಾನಂದ ಜಗನ್ನಾಥ ಅವರು ಮಾತನಾಡಿ ಹಲವು ವರ್ಷಗಳಿಂದ ಕೆಇಬಿ ಆವರಣದಲ್ಲಿ ಅಧಿಕಾರಿಗಳು,ಸಿಬ್ಬಂದಿಗಳು ಗುತ್ತಿಗೆದಾರರು ಹಾಗೂ ಆಂಜನೇಯನ ಭಕ್ತರ ಸಹಯೋಗದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಹಲವಾರು ಕಾರ್ಯಕ್ರಮಗಳನ್ನು ಹಾಗೂ ಪ್ರಸಾದ ವ್ಯವಸ್ಥೆ ಹಮ್ಮಿಕೊಳ್ಳಲಾಗಿದ್ದು ಪಟ್ಟಣದ ಭಕ್ತರಿಂದ ಹನುಮ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಪಟ್ಟಣದಲ್ಲಿ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು. ಬೆಳಿಗ್ಗೆಯಿಂದ ರಾಮಭಕ್ತ ಶ್ರೀ ಆಂಜನೇಯನಿಗೆ ಅಲಂಕಾರ, ಅಭಿಷೇಕ, ಮಹಾಮಂಗಳಾರತಿ, ಪ್ರಸಾದ ವ್ಯವಸ್ಥೆ, ಆಂಜನೇಯನ ತೊಟ್ಟಿಲ ಉತ್ಸವ ಹಾಗೂ ವಿಶೇಷ ಪೂಜೆ ಸೇರಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಿ ಹನುಮಂತನ ನಾಮಸ್ಮರಣೆ ಮಾಡುತ್ತ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಪಟ್ಟಣದ ಪ್ರಮುಖರಾದ ಪ್ರದೀಪ್ ಹಿರೇಮಠ, ಮಹೇಶ್ ಬಿರಾದಾರ,ದೇವು, ಶ್ರೀಶೈಲ ನಾವಿ, ಮಲ್ಲು ಪಾಟೀಲ, ರಘು ಕುಲಕರ್ಣಿ, ಮಲ್ಲು ಬಿದರಕುಂದಿ, ತಿಪ್ಪಣ್ಣ ಬಂಗಾರಗುಂಡ, ವಸಂತ ನಾಡಗೌಡ, ಕಾಸಯ್ಯ ಹಿರೇಮಠ, ರಾಜು ಹಳ್ಳೆದ, ಸಿದ್ದು ಪಾಟೀಲ ಸೇರಿದಂತೆ ಕೆಇಬಿ ಸಿಬ್ಬಂದಿ ವರ್ಗ, ಗುತ್ತಿಗೆದಾರರು ಹಾಗೂ ಪಟ್ಟಣದ ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು.