ಹೊಸಳ್ಳಿ: ವಿದ್ಯುತ ತಗುಲಿ ಮೃತಪಟ್ಟ ಮಕ್ಕಳ ಮನೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಭೇಟಿ
ಕೊಪ್ಪಳ 15: ಕೊಪ್ಪಳ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿನ ಇಬ್ಬರು ಮಕ್ಕಳು ಕಾಲುವೆಯಲ್ಲಿ ಈಜಾಡಲು ತೆರಳಿ ವಿದ್ಯುತ ತಗುಲಿ ಮೃತರಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ ರಾಮತ್ನಾಳ ಮೃತ ಬಾಲಕರ ಮನೆಗೆ ಬೇಟಿ ನೀಡಿ ನೊಂದ ಪಾಲಕರಿಗೆ ಸಾಂತ್ವನ ಹೇಳಿದರು.
ಹೊಸಳ್ಳಿ ಗ್ರಾಮದ ಮಕ್ಕಳು ಮೃತಪಟ್ಟ ಘಟನೆಯು ಏಪ್ರಿಲ್ 8 ರಂದು ವರದಿಯಾದ ಹಿನ್ನಲೆಯಲ್ಲಿ, ಏ.15 ರಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ ರಾಮತ್ನಾಳ ಬಾಲಕರ ಮನೆಗೆ ಹಾಗೂ ಮಕ್ಕಳು ಮೃತಪಟ್ಟ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಕ್ಕಳ ರಕ್ಷಣೆಯ ಕುರಿತು ಚರ್ಚಿಸಿದರು.
ಸಭೆಯಲ್ಲಿ ಮಾತನಾಡಿದ ಅವರು ಮಕ್ಕಳ ಜೀವವು ಅತ್ಯಮೂಲ್ಯವಾದದ್ದು, ಮಕ್ಕಳು ತಮ್ಮ ಬೇಸಿಗೆಯ ರಜೆಯನ್ನು ಅನುಭವಿಸುವುದರೊಂದಿಗೆ ಸುರಕ್ಷಿತವಾಗಿರುವುದು ಅತ್ಯವಶ್ಯಕವಾಗಿದೆ. ಬೇಸಿಗೆ ರಜೆ ಅವಧಿಗಳು ಈಗಾಗಲೇ ಆರಂಭಗೊಂಡಿವೆ, ಮಕ್ಕಳು ರಜೆಯ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಮತ್ತು ಈಜು ಕಲಿಯಲು ಅಥವಾ ಈಜಾಡಲು ಹೋಗುವ ಸಂದರ್ಭಗಳು ಅಧಿಕವಾಗಿದ್ದು, ವಿದ್ಯುತ ಅಪಘಾತದಿಂದ ಹಾಗೂ ನೀರಿನಲ್ಲಿ ಉಸಿರುಗಟ್ಟಿ ಜೀವವನ್ನು ಕಳೆದುಕೊಳ್ಳುವ ಪ್ರಸಂಗಗಳು ಜರುಗುತ್ತಿವೆ, ಈ ರೀತಿಯ ಘಟನೆಗಳು ಮರುಕಳಿಸದಂತೆ ಮಕ್ಕಳಸ್ನೀಹಿ ವಾತಾವರಣವನ್ನು ನಿರ್ಮಾಣ ಮಾಡಬೇಕಾಗಿದ್ದು. ಆದ್ದರಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ನದಿ, ಕಾಲುವೆ, ಹಳ್ಳ ಮತ್ತು ಬಾವಿಗಳ ಹತ್ತಿರ “ನೀರು ಆಳವಿದೆ, ಎಚ್ಚರಿಕೆ” ಎಂಬ ಫಲಕಗಳನ್ನು ಅಳವಡಿಸುವುದು ಹಾಗೂ ಸ್ಥಳೀಯ ಜೀವರಕ್ಷಕ ಸಾಧನಗಳಾದ ನೀರಿನ ಟ್ಯೂಬ್, ಹಗ್ಗವನ್ನು ತೇಲಿಬಿಡುವುದು ಅಥವಾ ಅಳವಡಿಸುವ ಮೂಲಕ ಮಕ್ಕಳ ಹಾಗೂ ಮಾನವ ಜೀವಗಳನ್ನು ರಕ್ಷಿಸಬಹುದಾಗಿದ್ದು ಈ ಕುರಿತು ಕ್ರಮವಹಿಸುವಂತೆ ಹಾಗೂ“ಮಕ್ಕಳ ರಕ್ಷಣೆ ನಮ್ಮೆಲ್ಲರ ಮತ್ತು ಸಮುದಾಯದ ಹೊಣೆಯಾಗಿದ್ದು, ಎಲ್ಲರೂ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು
ಈ ಸಂದರ್ಭದಲ್ಲಿ ಕೊಪ್ಪಳ ತಹಶೀಲ್ದಾರ್ ವಿಠ್ಠಲ ಚೌಗಲಾ, ಕೊಪ್ಪಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಹೊಸಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುರೇಶ ಛಲವಾದಿ, ಕೊಪ್ಪಳ ಪ್ರಭಾರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶರಣಪ್ಪ, ಮುನಿರಾಬಾದ್ ಆರಕ್ಷಕ ಉಪ-ನೀರೀಕ್ಷಕ ಸುನೀಲ ಎಚ್., ಕೊಪ್ಪಳ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸಂತೋಷ ಕುಮಾರ, ಹೊಸಳ್ಳಿ ಪಂಚಾಯತ ಅಭಿವೃದ್ಧಿ ಅಧಿಕಾರಿ ವಿರೇಶ ಜಿ. ಸೇರಿದಂತೆ ಕರ್ನಾಟಕ ನೀರಾವರಿ ನಿಗಮ ನಿಯಮಿತ ಮುನಿರಾಬಾದ್ ಉಪವಿಭಾಗದ ಅಧಿಕಾರಿಗಳು ಹಾಗೂ ಮತ್ತಿತರರಿದ್ದರು.