ಬೆಳಗಾವಿ,25:ಖೋಟಾ ನೋಟು ಚಲಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 1 ಕೋಟಿ 81 ಸಾವಿರ ರೂಪಾಯಿ ಮೌಲ್ಯದ ಖೋಟಾ ನೋಟು ಜಪ್ತಿ ಮಾಡಿದ್ದಾರೆ. ಈ ಪ್ರಕರಣದ ತನಿಖೆಗೆ ಸಿಐಡಿಗೆ ಹಸ್ತಾಂತರ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಿ.ಸಿ ರಾಜಪ್ಪ ಇಂದಿಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ವಡಗಾವಿಯ ಆಶೀಫ್ ಶೇಖ್ ಮತ್ತು ಶ್ರೀನಗರದ ರಫೀಕ ದೇಸಾಯಿ ಬಂಧಿತ ಆರೋಪಿತರು. ನಗರದ ಹೊರವಲಯದ ಚನ್ನಮ್ಮಾ ಸೊಸೈಟಿಯ ಹತ್ತಿರ ಆಸೀಫ್ ಶೇಖ್ ಖೋಟಾ ನೋಟು ಚಲಾವಣೆಗೆ ರಫೀಕ ದೇಸಾಯಿಗೆ ತಂದುಕೊಡುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 2000 ರೂಪಾಯಿ ಮುಖಬೆಲೆಯ 50 ಬಂಡಲ್ಗಳನ್ನು ಜಪ್ತಿ ಮಾಡಲಾಗಿದೆ. ಈ ನೋಟುಗಳನ್ನು ಪರಿಶೀಲಿಸಿದಾಗ ಅಸಲಿನೋಟಿನಂತೆಯೇ ಕಂಡುಬಂದವು. ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವು ಖೋಟಾ ನೋಟುಗಳಿರುವುದು ಖಚಿತವಾಯಿತು.
ಆಶೀಫ್ ಶೇಖ್ ತನ್ನ ಮನೆಯಲ್ಲಿ ಲ್ಯಾಪಟಾಪ್ ಮತ್ತು ಕಲರ್ ಪ್ರಿಂಟರ್ ಮೂಲಕ ಸ್ಕ್ಯಾನ್ ಮಾಡಿ ಕೋರಲ್ ಡ್ರಾ ಮತ್ತು ಅಡೋಬ್ ಪೋಟೋ ಶಾಪ್ ಸಾಪ್ಟವೇರ್ ಮುಖಾಂತರ ಪ್ರೀಂಟ್ ಮಾಡುತ್ತಿದ್ದ ಬಗ್ಗೆ ಮಾಹಿತಿ ನೀಡಿದ.