ಫೆ.2 ರವಿವಾರದಂದು ಇಬ್ರಾಹಿಂಪೂರದಲ್ಲಿ ಜಿನಬಿಂಬ ಉತ್ತಾಪನೆ ಕಾರ್ಯಕ್ರಮ
ಬೆಳಗಾವಿ 31: ಬೆಳಗಾವಿ ನಗರದಿಂದ ಕೇವಲ 40 ಕಿಮಿ. ಅಂತರದಲ್ಲಿರುವ ಮಹಾರಾಷ್ಟ್ರದ ಚಂದಗಡ ತಾಲೂಕಿನ ಇಬ್ರಾಹಿಂಪೂರ ಗ್ರಾಮದಲ್ಲಿನ ಸುಮಾರು 1000 ವರ್ಷಗಳ ಪ್ರಾಚೀನ ಅವಳಿ ಜಿನಮಂದಿರಗಳಿದ್ದು ಈ ಅವಳಿ ಬಸದಿಗಳು ಜೀರ್ಣಾವಸ್ಥೆಗೆ ತಲುಪಿರುತ್ತವೆ. ಹಾಗಾಗಿ ಈ ಜಿನಮಂದಿರಗಳ ಜಿರ್ಣೋದ್ದಾರ ಮಾಡುವ ಯೋಜನೆ ಹೊಂದಿದ್ದು, ಪ್ರಸ್ತುತ ಜಿನಬಿಂಬಗಳ ಉತ್ತಾಪನಾ ಕಾರ್ಯಕ್ರಮ ಇದೆ ಫೆ.2 ರವಿವಾರದಂದು ಇಬ್ರಾಹಿಂಪೂರ ಗ್ರಾಮದಲ್ಲಿ ನಡೆಯಲಿದೆ.
ಈ ಎರಡು ಅವಳಿ ಜಿನಬಸದಿಗಳಲ್ಲಿ ಭ.ಶ್ರೀ. 1008 ಪಾರ್ಶ್ವನಾಥ ತೀರ್ಥಂಕರರ ಪ್ರತಿಮೆಗಳು ವಿರಾಜಮಾನವಾಗಿವೆ. ಫೆ. 2 ರಂದು ಬೆಳಿಗ್ಗೆ 7 ಗಂಟೆಗೆ ಮಂಗಲವಾದ್ಯದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಕಾರ್ಯಕ್ರಮದ ಸಾನಿಧ್ಯವನ್ನು ಆಚಾರ್ಯ ದೇವನಂದಿ ಮಹಾರಾಜರು ಮತ್ತು ಆಚಾರ್ಯ ಕುಮದನಂದಿ ಮಹಾರಾಜರು ವಹಿಸಲಿದ್ದು, ಅಧೀನೇತೃತ್ವವನ್ನು ಕೊಲ್ಲಾಪರ, ರಾಯಬಾಗ, ಹೊಸುರ ಮಠದ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಅವರು ವಹಿಸಲಿದ್ದಾರೆ. ಅದರಂತೆ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಹೊಂಬುಜ ಮಠ, ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿ ಸೋಂದಾಮಠ ಇವರು ಮಾರ್ಗದರ್ಶನ ಮಾಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ, ಚಂದಗಡ ಮತಕ್ಷೇತ್ರದ ಶಾಸಕ ಶಿವಾಜಿ ಪಾಟೀಲ, ಮಾಜಿ ಶಾಸಕರಾದ ಸಂಜಯ ಪಾಟೀಲ ಇವರು ಆಗಮಿಸಲಿದ್ದು, ಈ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಭ.ಶ್ರೀ.1008 ಪಾರ್ಶ್ವನಾಥ ದಿಗಂಬರ ಜೈನ ಮಂದಿರ ಇಬ್ರಾಹಿಂಪೂರ ಆಡಳಿತ ಮಂಡಳಿಯದವರು ಕೋರಿದ್ದಾರೆ.