ಕೊಪ್ಪಳ : ಸಮಾಜದಲ್ಲಿ ನಿಸ್ವಾರ್ಥದ ಸೇವೆ ಅಗತ್ಯ: ಬಸವಲಿಂಗೇಶ್ವರ ಮಹಾಸ್ವಾಮಿಗಳು ಶ್ರೀಗಳು

ಲೋಕದರ್ಶನ ವರದಿ

ಕೊಪ್ಪಳ 07: ಪ್ರತಿಯೊಬ್ಬ ಮನಷ್ಯ ಜೀವನದಲ್ಲಿ ಸೌಹರ್ಧತೆ ಬೆಳೆಸಿಕೊಂಡು ಪರಸ್ಪರ ಕಷ್ಟ-ಸುಖ ಹಂಚಿಕೊಂಡು ಬದುಕು ಸಾಗಿಸಿದರೆ ಜೀವನ ಸಾರ್ಥಕವಾಗುತ್ತದೆ, ಸಮಾಜದಲ್ಲಿ ಸ್ವಾರ್ಥವನ್ನು ಬಿಟ್ಟು ನಿಸ್ವಾರ್ಥ ಸೇವೆ ಮಾಡಬೇಕು ಇಂದಿನ ಸಂದರ್ಭದಲ್ಲಿ ಸಮಾಜಕ್ಕೆ ನಿಸ್ವಾರ್ಥದ ಸೇವೇ ಅಗತ್ಯವಾಗಿದೆ ಎಂದು ಯಲುಬುರ್ಗಾ  ಶ್ರೀಧರ ಮುರಡಿ ಹಿರೇಮಠದ ಷ.ಬ್ರ. ಬಸವಲಿಂಗೇಶ್ವರ ಮಹಾಸ್ವಾಮಿಗಳು ನುಡಿದರು.

ಅವರು ಶುಕ್ರವಾರ ಜಿಲ್ಲೆಯ ಯಲುಬುರ್ಗಾ ಪಟ್ಟಣದ 11ನೇ ವಾರ್ಡ ಮಾರುತಿ ನಗರ ಬಡವಣೆಯಲ್ಲಿ ಮಧು ಸೇವಾಶ್ರಮ ಚಾರಿಟೇಬಲ್ ಟ್ರಸ್ಟ್ವತಿಯಿಂದ ಆರ್ಥಿಕವಾಗಿ  ಹಿಂದುಳಿದ ಬಡ ಮಕ್ಕಳಿಗಾಗಿ ನೂತನ ಉಚಿತ ವಸತಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

ಮುಂದುವರೆದು ಮಾತನಾಡಿದ ಅವರು ಮನುಷ್ಯನ ಜನ್ಮ ಸಾರ್ಥವಾಗಬೇಕೆಂದರೆ ನಿಸ್ವಾರ್ಥದ ಸೇವೆ ಮಾಡಬೇಕು ಈ ದಿಶೆಯಲ್ಲಿ ಯಾವುದೆ ಫಲ ಅಪೇಕ್ಷೆ ಇಲ್ಲದೆ ಈ ಸಂಸ್ಥೆ ಹಿಂದುಳಿದ ಬಡ ಮತ್ತು ಅನಾಥ ಮಕ್ಕಳ ಭವಿಷ್ಯ ಉಜ್ವಲ ಗೋಳಿಸಲು ಮಕ್ಕಳಿಗೆ ಶಿಕ್ಷಣ ವಸತಿ ಮತ್ತು ಊಟ ಸೇರಿದಂತೆ ಸಮವಸ್ತ್ರ ಪಠ್ಯ ಪುಸ್ತಕ ಮತ್ತು ವಾಹನದ ವ್ಯವಸ್ಥೆ ಮಾಡಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಲು ಶ್ರಮಿಸುತ್ತಿದ್ದಾರೆ. ತಮ್ಮ ತಾಯಿಯ ಮಾರ್ಗದರ್ಶದಲ್ಲಿ ತಮ್ಮ ತಂದೆಯ ಸ್ಮರಣಾರ್ಥಕವಾಗಿ ಬಡಿಮಕ್ಕಳ ಭವಿಷ್ಯ ರೂಪಿಸುವ ಪುಣ್ಯದ ಕೆಲಸ ಸ್ಯಾಮ್ ಸನ್ ಸಂತೋಷ ನೇತೃತ್ವದ ತಂಡಮಾಡುತಿದೆ, ಅನಾಥರಿಗೆ ಅಶ್ರಯ ನೀಡಿ ಆಶ್ರದಾತ, ಅನ್ನ ನೀಡಿ ಅನ್ನದಾತ, ಅಕ್ಷರ ನೀಡಿ ಅಕ್ಷರ ದಾತರಾಗಿ ಉತ್ತಮ ಸೇವೆ ಮಾಡುವ ಇಂತಹ ಸಂಸ್ಥೆಗಳಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಶ್ರೀಗಳು ನುಡಿದರು.

ಮುಖ್ಯ ಅಥಿತಿಗಳಾಗಿ  ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಹಿರಿಯ ಪತ್ರಕರ್ತ ಎಂ. ಸಾದಿಕ್ ಅಲಿ ಮಾತನಾಡಿ ಎಲ್ಲಾ ಕ್ಷೇತ್ರದ ಅಭಿವೃದ್ಧಿ ಶಿಕ್ಷಣ ರಂಗದಲ್ಲಿ ಅಡಗಿದೆ ಮೂದಲು ನಾವು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಇಂತಹ ಶಿಕ್ಷಣ ಸಂಸ್ಥೆಗಳು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವಾಗ ಪ್ರತಿಯೋಬ್ಬರ ಸಹಕಾರ ಅತ್ಯವಶ್ಯಕವಾಗಿದೆ ಎಂದರು. ಇನ್ನೋರ್ವ ಕಾರ್ಯನಿರತ ಪತ್ರಕರ್ತರ ಸಂಘದ ನಾಮಕರಣ ರಾಜ್ಯ ಸದಸ್ಯ ಹರೀಶ್ ಹೆಚ್.ಎಸ್, ಮತ್ತು ಯುವ ನಾಯಕ ಶೀವು ಪಾಟೀಲ್ ಮಾತನಾಡಿದರು.   ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರು ಸೆಂಟ್ ಜಾನ್ಸ್ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕಿ ವಿಜಯಾ ಮಧುಕರ್ ವಹಿಸಿ ಅಧ್ಯಕ್ಷೀಯ ಭಾಷಣ ಮಾಡಿದರು.

ವೇದಿಯ ಮೇಲೆ ಉಪಸ್ಥಿತರಿದ್ದ ಸಂಸ್ಥೆಯ ಅಧ್ಯಕ್ಷ ಸ್ಯಾಮ್ ಸನ್ ಸಂತೋಷರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು, ಉಪಾಧ್ಯಕ್ಷೆ ಕ್ರೀಷ್ಟೀನಾ ಸ್ಯಾಮ್ ಸನ್ ಸೋತೋಷರವರು ಸೇರಿದಂತೆ  ಅಥಿತಿಗಳಾಗಿ ವಿನಯವಾಣಿ ಪತ್ರಿಕೆಯ ಸಂಪಾದಕ ಬಸವರಾಜ್ ತಿಪ್ಪಣ್ಣವರ ಪತ್ರಕರ್ತರಾದ ಖಲೀಲ್ ಉಡೇವು, ಫಕೀರಪ್ಪ ಗೊಟೂರು, ಇನ್ನು ಮುಂತಾದವರು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಗಣ್ಯರಿಗೆ ಮತ್ತು ಅಥಿತಿಗಳಿಗೆ ಸನ್ಮಾನಿಸಲಾಯಿತು.