ಲೋಕಸಭಾ ಚುನಾವಣೆ: ಕರ್ತವ್ಯನಿರತ 10,405 ಅಧಿಕಾರಿ, ಸಿಬ್ಬಂದಿಗೆ ಮತದಾನಕ್ಕೆ ವ್ಯವಸ್ಥೆ

ಕೊಪ್ಪಳ 22: ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್. 23 ರಂದು ಮತದಾನ ನಡೆಯಲಿದ್ದು ಚುನಾವಣಾ ಕರ್ತವ್ಯಕ್ಕೆ ನಿಯೋಜಿತ 10,405 ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಇಡಿಸಿ ಹಾಗೂ ಅಂಚೆ ಮತಪತ್ರದ ಮೂಲಕ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಕೊಪ್ಪಳ ಕ್ಷೇತ್ರಕ್ಕೆ ಒಟ್ಟು 13,223 ಚುನಾವಣಾ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಇದರಲ್ಲಿ 6162 ಸಿಬ್ಬಂದಿಗೆ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ (ಇಡಿಸಿ) ಹಾಗೂ ಕೊಪ್ಪಳ ಕ್ಷೇತ್ರಕ್ಕೆ ಸಂಬಂದಿಸಿದಂತೆ 1497 ಹಾಗೂ ಇತರೆ ಕ್ಷೇತ್ರಕ್ಕೆ ಸಂಬಂದಿಸಿದಂತೆ 2746 ಅಂಚೆ ಮತಪತ್ರ ವಿತರಿಸಲಾಗಿದೆ. ಒಟ್ಟಾರೆ ನಿಯೋಜಿತ ಸಿಬ್ಬಂದಿಯಲ್ಲಿ ಶೇ.78 ರಷ್ಟು ಸಿಬ್ಬಂದಿಗೆ ಮತದಾನದ ವ್ಯವಸ್ಥೆ ಕಲ್ಪಿಸಲಾಗಿದೆ.

ಇಡಿಸಿ ಹಾಗೂ ಅಂಚೆ ಮತಪತ್ರಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಮತದಾನ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ಸಿಬ್ಬಂದಿ, ಕೆಎಸ್ಆರ್ಟಿಸಿ ಸಾರಿಗೆ ಸಿಬ್ಬಂದಿ ಹಾಗೂ ಇತರೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸದ ಸಿಬ್ಬಂದಿ ಹಾಗೂ ಖಾಸಗಿ ವಾಹನ ಚಾಲಕ ಸಿಬ್ಬಂದಿಗಳು ಸಹ ಒಳಗೊಂಡಿರುತ್ತಾರೆ. 95 ಖಾಸಗಿ ವಾಹನ ಚಾಲಕ ಸಿಬ್ಬಂದಿಗೂ ಅಂಚೆ ಮತಪತ್ರ, ಇಡಿಸಿ ವಿತರಿಸಲಾಗಿದೆ.  ಬಾಕಿ ಉಳಿದ 2818 ಸಿಬ್ಬಂದಿಗಳಲ್ಲಿ ಏಪ್ರಿಲ್. 18 ರಂದು ನಡೆದ 2ನೇ ಹಂತದ ಮತದಾನದಲ್ಲಿ ಮತ ಚಲಾಯಿಸಿದವರು, ನೇರವಾಗಿ ತಮ್ಮ ಚುನಾವಣಾಧಿಕಾರಿಗಳಿಗೆ ಅಂಚೆ ಮತಪತ್ರ ಮನವಿ ಸಲ್ಲಿಸಿದವರು, ಭಾಗದ ಸಂಖ್ಯೆ, ಕ್ರಮ ಸಂಖ್ಯೆ ತಪ್ಪಾಗಿ ತಿರಸ್ಕೃತಗೊಂಡವರು ಹಾಗೂ ಅಂಚೆಪತ್ರ ಇಡಿಸಿಗಾಗಿ ಮನವಿ ಸಲ್ಲಿಸದೇ ಇರುವವರು ಒಳಗೊಂಡಿರುತ್ತಾರೆ.