ವಾಲ್ಮೀಕಿ ಸಮಾಜದ ಬಾಲಕಿ ಮೇಲೆ ಅತ್ಯಾಚಾರಗೈದ ದುಷ್ಕರ್ಮಿಗಳ ಮೇಲೆ ಕೂಡಲೇ ಪೋಕ್ಸೋ ಅಡಿ ಪ್ರಕರಣ ದಾಖಲಿಸಲು ಮಲ್ಲಿಕಾರ್ಜುನ ಬಟಗಿ ಆಗ್ರಹ
ವಿಜಯಪುರ 03 : ರಾಯಚೂರು ಜಿಲ್ಲಾ ಮಸ್ಕಿ ತಾಲೂಕು ಕವಿತಾಳ ಗ್ರಾಮದ 10ನೇ ತರಗತಿಯಲ್ಲಿ ಓದುತ್ತಿದ್ದ ವಾಲ್ಮೀಕಿ ಸಮಾಜದ ಬಾಲಕಿಯನ್ನು ಅಪಹರಿಸಿ ಬಾಲಕಿ ಮೇಲೆ ನಿರಂತರವಾಗಿ ನಾಲ್ಕು ದಿನಗಳವರೆಗೆ ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಕೊಲೆ ಬೆದರಿಕೆ ಒಡ್ಡಿದ ದುಷ್ಕರ್ಮಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತೀಯ ವಾಲ್ಮಿಕಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಬಾಲಕಿಗೆ ನ್ಯಾಯ ಒದಗಿಸುವಲ್ಲಿ ರಾಯಚೂರು ಜಿಲ್ಲಾಡಳಿತ ವಿಫಲವಾಗಿದೆ. ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡು ಬಾಲಕಿಗೆ ನ್ಯಾಯ ಒದಗಿಸಬೇಕು. ಈ ಪ್ರಕರಣವನ್ನು ಮಾನ್ಯ ಮುಖ್ಯಮಂತ್ರಿಗಳು, ಗೃಹಮಂತ್ರಿಗಳು ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳನ್ನು ಬಂಧಿಸಬೇಕು. ಅಲ್ಲದೇ ವಾಲ್ಮೀಕಿಯ ಸಮಾಜದ ಶಾಸಕರು, ಸಚಿವರು ಅಲ್ಲದೇ ವಾಲ್ಮೀಕಿ ಸಮಾಜದ ರಾಜನಳ್ಳಿಯ ಜಗದ್ಗುರುಗಳಾದ ಶ್ರೀ ಪ್ರಸಾನಂದ ಸ್ವಾಮೀಜಿ ಅವರು ಸಂತ್ರಸ್ತೆ ಬಾಲಕಿಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳದಿರುವುದು ವಾಲ್ಮಿಕಿ ಸಮಾಜ ತಲೆ ತಗ್ಗಿಸುವಂತಾಗಿದೆ. ಬಾಲಕಿಗೆ ಸರ್ಕಾರ ಶಿಕ್ಷಣದ ಜೊತೆ ಸಹಾಯ ಹಾಗೂ ಧೈರ್ಯ ತುಂಬುವ ಕೆಲಸ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡು ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮಲ್ಲಿಕಾರ್ಜುನ ಬಟಗಿ ಎಚ್ಚರಿಸಿದ್ದಾರೆ.