ಕವಳಕೇರಿ ಗ್ರಾಮದಲ್ಲಿ ಸರ್ವಧರ್ಮಿಯರ ಸಾಮೂಹಿಕ ವಿವಾಹ
ಕುಕನೂರು 23: ಎಲ್ಲಾ ಮನಸ್ಸುಗಳು ಒಂದು ಗೂಡಿ ಹೃದಯ ಶ್ರೀಮಂತಿಕೆಯಿಂದ ಸರ್ವಧರ್ಮ ಸಾಮೂಹಿಕ ವಿವಾಹ ನಡೆಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಸಂಸದ ರಾಜಶೇಖರ್ ಹಿಟ್ನಾಳ ಹೇಳಿದರು.
ಅವರು ಕುಕನೂರು ತಾಲ್ಲೂಕಿನ ಕವಳಕೇರಿ ಗ್ರಾಮದ ಜೈ ಭೀಮ್ ಕ್ರಾಂತಿ ಯುವಸೇನೆ ವತಿಯಿಂದ ಡಾ. ಬಿ. ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಇವರ ಜಂಯತೋತ್ಸವದ ಅಂಗವಾಗಿ ಹಮ್ಮಿಕೊಂಡ ಮೂರನೇ ವರ್ಷದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಇರ್ವರ ಮಹನೀಯರ ಭಾವ ಚಿತ್ರಕ್ಕೆ ಮಾಲಾರೆ್ಣ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ನಂತರದಲ್ಲಿ ಕಾರ್ಯಕ್ರಮದ ಸಾನಿಧ್ಯವಹಿಸಿ ಕುಕನೂರು ಪಟ್ಟಣದ ಅನ್ನದಾನೀಶ್ವರ ಶಾಖಾಮಠದ ಮಹಾದೇವ ಸ್ವಾಮಿಜೀಗಳು ಮಾತನಾಡಿ ರಾಷ್ಟ್ರ ನಾಯಕರ ಜನುಮ ದಿನದಂದು ನೂತನ ದಂಪತಿಗಳು ಸಪ್ತಪದಿ ತುಳಿದು ಎಲ್ಲಾ ಸಮಾಜದ ಹಿರಿಯರ, ಕಿರಿಯರ ಸಮ್ಮುಖದಲ್ಲಿ ಅಗ್ನಿಸಾಕ್ಷಿಯಾಗಿ ನವ ದಾಂಪತ್ಯಕ್ಕೆ ಕಾಲಿಟ್ಟಿರುವ ನೀವುಗಳು ಭಾಗ್ಯಶಾಲಿಗಳಾಗಿದ್ದು ಸಾವಿರಾರು ಜನರ ಆಶಿರ್ವಾದ ಹಾರೈಕೆ ನಿಮ್ಮ ಬಾಳನ್ನು ಬೆಳಗಲಿ ಎಂದು ಹರಸಿದರು.ನೂತನ ದಾಂಪತ್ಯಕ್ಕೆ ಕಾಲಿಟ್ಟ ದಂಪತಿಗಳು ಹಿರಿಯರ ಮಾರ್ಗದರ್ಶನದಲ್ಲಿ, ಗೌರವಯುತವಾಗಿ ಜೀವನ ಸಾಗಿಸಬೇಕು, ಇಂದು ನೀವು ಹೋದ ಮನೆಗೆ ಸೊಸೆ ಮುಂದೆ ನಿಮ್ಮ ಮನೆಗೂ ಸೊಸೆ ಬರುವಳು ಎನ್ನುವ ಕಲ್ಪನೆಯೊಂದಿಗೆ ಕುಟುಂಬದ ಜೊತೆಗೆ ಅನ್ಯೂನ್ಯತೆಯಿಂದ ಬದುಕು ಸಾಗಿಸಿ ಗ್ರಾಮಕ್ಕೆ ಅಲ್ಲದೆ ದೇಶಕ್ಕೆ ಮಾದರಿಯ ಬದುಕು ನಿಮ್ಮದಾಗಲಿ ಎಂದು ಕಿವಿ ಮಾತನ್ನು ಹೇಳಿದರು.ಈ ವೇಳೆ ಮಾಜಿ ಜಿಪಂ ಸದಸ್ಯ ಈರ್ಪ ಕುಡುಗುಂಟಿಯವರು ಡಾ. ಬಿ. ಆರ್ ಅಂಬೇಡ್ಕರ್ ಹಾಗೂ ದೇಶದ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ಇವರ ಕುರಿತು ಮಾತನಾಡಿದರು.ನಂತರ ನೂತನ ದಂಪತಿಗಳ ಕುರಿತು ಮಾತನಾಡಿ ಜೀವನದಲ್ಲಿ ಸಹನೆ ತಾಳ್ಮೆಯಿಂದ, ಕೇಲವೊಂದು ಬಾರಿ ತ್ಯಾಗದ ಮನೋಭಾವನೆಯಿಂದ ಜೀವನ ನಡೆಸಬೇಕು, ಅತ್ತೆ, ಮಾವಂದಿರನ್ನು ತಮ್ಮ ತಂದೆ, ತಾಯಿಯಂತೆ ಗೌರವಿಸಿ ಆದರಿಸುವ ಜೊತೆಗೆ ಸಮಾಜದಲ್ಲಿ ಉತ್ತಮ ದಾಂಪತ್ಯ ನಿಮ್ಮದಾಗಲಿ ಎಂದು ಹರಸಿದರು.ನಂತರ ಮಾಜಿ ತಾಪಂ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಮಲ್ಲನಗೌಡ ಕೋನನಗೌಡ ಮಾತನಾಡಿದರು.ಸಾಮೂಹಿಕ ವಿವಾಹದಲ್ಲಿ ಏಳು ಜೋಡಿ ನೂತನ ದಂಪತಿಗಳು ದಾಂಪತ್ಯಕ್ಕೆ ಕಾಲಿಟ್ಟರು, ನಂತರ ಪ್ರಸಾದ ವಿತರಣೆ ನೆರವೇರಿತು.ಕಾರ್ಯಕ್ರಮದ ವೇದಿಕೆಯಲ್ಲಿ ಇಟಗಿ ಗದಿಗೆಪ್ಪಜ್ಜನವರು, ಚಿತ್ರದುರ್ಗದ ಮಾದರ ಚೆನ್ನಯ್ಯನವರು, ಮರುಳಸಿದ್ದೇಶ್ವರ ಸ್ವಾಮಿಗಳು, ವಿಶ್ವನಾಥ ಮರಿಬಸಪ್ಪನವರ್, ಬಸವರಾಜ ಬೂದಗುಂಪಿ ಸೇರಿದಂತೆ ಭೀಮ್ ಕ್ರಾಂತಿ ಯುವಸೇನೆ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಹಿರಿಯರು, ಯುವಕರು, ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು.