ಮೈಕ್ರೋ ಫೈನಾನ್ಸ್‌ಗಳಿಂದ ಆರ್ಥಿಕ ಕ್ಷೇತ್ರ ಹಿಂಸಾತ್ಮಕ ವಾತಾವರಣವಾಗಿ ಬದಲಾಗುತ್ತಿದೆ: ಸಚಿವ ಎಚ್‌.ಕೆ. ಪಾಟೀಲ

Microfinance is turning the financial sector into a violent environment: Minister H.K. Patil

ಮೈಕ್ರೋ ಫೈನಾನ್ಸ್‌ಗಳಿಂದ ಆರ್ಥಿಕ ಕ್ಷೇತ್ರ ಹಿಂಸಾತ್ಮಕ ವಾತಾವರಣವಾಗಿ ಬದಲಾಗುತ್ತಿದೆ: ಸಚಿವ ಎಚ್‌.ಕೆ. ಪಾಟೀಲ  

ಗದಗ 28 : ಸಹಕಾರ ಕ್ಷೇತ್ರವು ಇಂದು ತನ್ನ ಕ್ಷೇತ್ರವನ್ನು ವಿಸ್ತಾರ ಮಾಡಿಕೊಳ್ಳದ ಕಾರಣ ಕಾರ​‍್ೋರೇಟ್ ಸಂಸ್ಥೆಗಳು, ಅನಧೀಕೃತ ಫೈನಾನ್ಸ್‌ ಕಂಪನಿಗಳು ಬೃಹದಾಕಾರವಾಗಿ ಬೆಳೆಯುತ್ತಿರುವ ಪರಿಣಾಮ ದೇಶದ ಮತ್ತು ರಾಜ್ಯದ ಆರ್ಥಿಕ ಕ್ಷೇತ್ರ ಹಿಂಸಾತ್ಮಕ ವಾತಾವರಣವಾಗಿ ಬದಲಾಗುತ್ತಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಅವರು ಕಳವಳ ವ್ಯಕ್ತಪಡಿಸಿದರು.  

ನಗರದ ಹುಬ್ಬಳ್ಳಿ ರಸ್ತೆಯ ಗದಗ ಕೋ. ಆಪ್ ಇಂಡಸ್ಟ್ರಿಯಲ್ ಎಸ್ಟೇಟ್ ಆವರಣದಲ್ಲಿನ ತಿರಂಗ ಪಾರ್ಕನಲ್ಲಿ ಗದಗ ಪರಿಸರದ ಸಹಕಾರಿಗಳು ಹಮ್ಮಿಕೊಂಡಿದ್ದ ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಮೈಕ್ರೋ ಫೈನಾನ್ಸ್‌ಗಳು ಇಂದು ಜನರನ್ನು ಹಿಡಿದು, ಹೊಡೆದು ಸಾಲ ವಸೂಲಿ ಮಾಡುವುದು, ಬಂದೂಕು ಹಿಡಿದು ಬೆದರಿಕೆ ಹಾಕುವುದು ಮಾಡುತ್ತಿರುವುದರಿಂದ ಸಾಲ ಪಡೆದವರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಿರುವುದು  

ಖೇದಕರ ವಿಷಯವಾಗಿದೆ. ಆದ್ದರಿಂದಲೇ ಜೋರು ಮಾಡಿ ಹಣ ವಸೂಲಿ ಮಾಡುವವರಿಗೆ, ಅಮಾನವೀಯವಾಗಿ ಹಣ ವಸೂಲಿ ಮಾಡುವವರಿಗೆ ಅಂಕುಶದ ಜೊತೆಗೆ ಮಟ್ಟ ಹಾಕಲು ಸರಕಾರ ಕಾನೂನು ತರಲು ಚಿಂತನೆ ನಡೆಸಿದೆ ಎಂದು ಹೇಳಿದರು.   

ಇಂದಿನ ದಿನಮಾನದಲ್ಲಿ ಸಹಕಾರ ಕ್ಷೇತ್ರದಲ್ಲಿ ಲಾಭವಿಲ್ಲದ ಕಾರಣ ಯುವಜನತೆ ಸಹಕಾರ ಕ್ಷೇತ್ರದಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಹಿರಿಯರೆಲ್ಲರೂ ಸೇವೆಗೆ ಕೀರ್ತಿಯನ್ನು ಅಪೇಕ್ಷೆ ಮಾಡುತ್ತಿದ್ದ ಪರಿಣಾಮ ದೊಡ್ಡಮನುಷ್ಯರಾಗುತ್ತಿದ್ದರು. ಆದರೆ, ಇಂದು ಪ್ರತಿಯೊಬ್ಬರೂ ಸೇವೆಗೆ ಕೀರ್ತಿಯನ್ನು ಅಪೇಕ್ಷೆ ಮಾಡದೆ ಲಾಭವನ್ನು ನೀರೀಕ್ಷಿಸುತ್ತಿದ್ದಾರೆ. ಅದರ ಪರಿಣಾಮ ಸಹಕಾರ ಕ್ಷೇತ್ರದ ತನ್ನ ವ್ಯಾಪ್ತಿಯನ್ನು ಕ್ಷೀಣಿಸಿಕೊಳ್ಳುತ್ತಿದೆ ಎಂದು ಹೇಳಿದರು.  

ದೇಶದ ಇತಿಹಾಸ ಮೆಲುಕು ಹಾಕಿದಾಗ ಶಾಸಕರಾದವರು, ರಾಜ್ಯದ ನಾಯಕರಾದವರು ಸಹಕಾರಿ ಬ್ಯಾಂಕ್, ಶಿಕ್ಷಣ ಸಂಸ್ಥೆ, ಟೆಕ್ಸಟೈಲ್ ಮಿಲ್, ಪ್ರೊಸೆಸ್ಸಿಂಗ್ ಯುನಿಟ್, ಸಕ್ಕರೆ ಕಾರ್ಖಾನೆ, ಖಾದಿ ಗ್ರಾಮೋದ್ಯೋಗ ಸೇರಿ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಫಲಾಪೇಕ್ಷೆ ಇಲ್ಲದೇ ಸೇವೆ ಮಾಡಿದ್ದರು. ಆದರೆ, ಕಳೆದ 25 ವರ್ಷಗಳಿಂದ ಇತ್ತೀಚೆಗೆ ಸಹಕಾರಿ ಕ್ಷೇತ್ರದ ಆಸ್ತಿಯನ್ನು ಪಡೆದುಕೊಂಡು ಖಾಸಗಿ ಮಾಡಿಕೊಂಡು, ಸರಕಾರದ ಸವಲತ್ತುಗಳನ್ನು ಪಡೆದುಕೊಂಡವರು ರಾಜಕೀಯ ನಾಯಕತ್ವವನ್ನು ಪಡೆದುಕೊಳ್ಳುತ್ತಿದ್ದರೆ. ಈ ವ್ಯತ್ಯಾಸದಿಂದಾಗಿ ಯುವಕರು ಸಹಕಾರಿ ಕ್ಷೇತ್ರದಲ್ಲಿ ಆಸಕ್ತಿ ಕಳೆದುಕೊಂಡು ಕೇವಲ ಲಾಭದ ಉದ್ದೇಶಕ್ಕಾಗಿ ಗಮನ ಹರಿಸುತ್ತಿರುವುದು ಆರೋಗ್ಯಕರವಾದ ಬೆಳವಣಿಗೆಯಲ್ಲ ಎಂದು ಹೇಳಿದರು.  

ಗದಗದಲ್ಲಿ ಇಂಡಸ್ಟ್ರಿಯಲ್ ಎಸ್ಟೇಟ್ ಆರಂಭಿಸುವಾಗ ಇದೊಂದು ಯಶಸ್ವಿ ಪ್ರಯೋಗ ಆಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಇಂದು ಹಲವಾರು ಉದ್ಯಮಿಗಳು ಸಹಕಾರಿ ಮನೋಭಾವನೆ ಹೊಂದಿ ಯಶಸ್ವಿಯಾಗಿರುವುದನ್ನು ನೋಡಿದಾಗ ಹೆಮ್ಮೆ, ಅಭಿಮಾನ ಉಂಟಾಗುತ್ತದೆ. ಸ್ಥಳೀಯ ಉದ್ಯಮಿಗಳು ಹೊಸಪೀಳಿಗೆಯನ್ನು ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಲು ಸಿದ್ಧಮಾಡಿದರೆ ಸಹಕಾರಿ ಕ್ಷೇತ್ರಕ್ಕೆ ಬಹುದೊಡ್ಡ ಲಾಭವಾಗುತ್ತದೆ ಎಂದು ವಿನಂತಿಸಿದರು.    

ಮಾಜಿ ಶಾಸಕ ಡಿ.ಆರ್‌. ಪಾಟೀಲ ಮಾತನಾಡಿ, ಗದಗ ಸಹಕಾರಿ ರಂಗದ ತೊಟ್ಟಿಲು. ಈ ತೊಟ್ಟಿಲಿನಿಂದ ಬೆಳೆದು, ಸಹಕಾರಿ ರಂಗವನ್ನು ಬೆಳೆದವರನ್ನು ಸನ್ಮಾನಿಸಿವುದು ಒಂದು ಖುಷಿಯ ಸಂಗತಿಯಾಗಿದೆ. ಕೆ.ಎಲ್‌. ಪಾಟೀಲ ಅವರು ಹುಬ್ಬಳ್ಳಿಯ ರೆಡ್ಡಿ ಸಹಕಾರಿ ಬ್ಯಾಂಕ್ ನ ಚೇರಮನ್ ರಾಗಿ ಮೂರು ದಶಕಗಳ ಕಾಲ ಸಂಸ್ಥೆಯ ಬೆಳವಣಿಗೆಗೆ ಸೇವೆ ಸಲ್ಲಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಶಂಕರಣ್ಣ ಮುನವಳ್ಳಿ ಅವರು ಮೊದಲಿನಿಂದಲೂ ವ್ಯಾಪಾರ, ಶೈಕ್ಷಣಿಕ ಹಾಗೂ ಸಹಕಾರಿ ರಂಗದಲ್ಲಿ ಕೆಲಸ ಮಾಡಿದ್ದಾರೆ. ಕೆಎಲ್‌ಇ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಎಚ್‌.ಜಿ. ಹಿರೇಗೌಡ್ರ ಅವರು ಕೆಎಂಎಫ್ ನಿರ್ದೇಶಕರಾಗಿ, ಪಶುಪಾಲಕರಿಗೆ ಅನುಕೂಲ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹನುಮಾನಸಿಂಗ್ ಜಮಾದಾರ ಅವರು ಉತ್ತಮ ಬರಹಗಾರರಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರದ ಸ್ಥಾನಕ್ಕೇರಲಿ ಎಂದು ಹಾರೈಸಿದರು. 

ಎಚ್‌.ಜಿ. ಹಿರೇಗೌಡರ ಮಾತನಾಡಿ, ರಾಜ್ಯವು ಹೈನುಗಾರಿಕೆ ಕ್ಷೇತ್ರದಲ್ಲಿ ಸಾಕಷ್ಟು ಮುಂದಿದ್ದರೂ, ಗುಣಮಟ್ಟದಲ್ಲಿ ಹಿಂದೆ ಉಳಿದಿದ್ದೇವೆ. ಹಾಲು ಉತ್ಪಾದಕ ಕ್ಷೇತ್ರದಿಂದ ರೈತರು ಅಭಿವೃದ್ಧಿ ಹೊಂದಲು ಸಾಧ್ಯವಾಗಿದ್ದು, ಹೈನು ಉತ್ಪಾದನೆ ಕ್ಷೇತ್ರ ಇನ್ನಷ್ಟು ಪ್ರಗತಿ ಸಾಧಿಸಬೇಕಿದೆ ಎಂದರು.ಸನ್ಮಾನ: ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಾಗೂ ಸರಕಾರದಿಂದ “ಸಹಕಾರ ರತ್ನ” ಪ್ರಶಸ್ತಿಗೆ ಭಾಜನರಾದ ಕೆ.ಎಲ್‌. ಪಾಟೀಲ, ಎಚ್‌.ಜಿ. ಹಿರೇಗೌಡರ, ಶಂಕರಣ್ಣ ಮುನವಳ್ಳಿ ಹಾಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹನುಮಾನಸಿಂಗ್ ಜಮಾದಾರ ಅವರನ್ನು ಸನ್ಮಾನಿಸಲಾಯಿತು.ಜಿಪಂ ಮಾಜಿ ಅಧ್ಯಕ್ಷರಾದ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಏಕನಾಥ ನಾಗನೂರ, ಬಸು ತಿರ್ಲಾಪೂರ, ಮೋಹನ ದುರಗಣ್ಣವರ, ಪ್ರಭು ದಂಡಾವತಿಮಠ, ಶಶಿ ಪಾಟೀಲ, ಪ್ರಕಾಶ ಬೊಮ್ಮನಹಳ್ಳಿ, ರಂಗನಗೌಡ ಓದುಗೌಡರ, ಎಂ.ಆರ್‌. ಪಾಟೀಲ, ಬಸಲಿಂಗಪ್ಪ ಮುಂಡರಗಿ ಸೇರಿ ಮಾಜಿ ಸೈನಿಕರು, ಗದಗ ಪರಿಸರದ ಸಹಕಾರಿಗಳು ಸೇರಿ ಅನೇಕರು ಹಾಜರಿದ್ದರು.  

ನಿವೃತ್ತ ಪ್ರಾಚಾರ್ಯ ಅನಿಲ್ ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣಗೌಡ ಎಚ್‌. ಪಾಟೀಲ ಸ್ವಾಗತಿಸಿದರು. ಮಧುಸೂದನ ಪುಣೇಕರ, ಆನಂದ ಪೋತ್ನಿಸ್ ಪರಿಚಯಿಸಿದರು. ಜಿ.ಕೆ. ಆದಪ್ಪಗೌಡರ ವಂದಿಸಿದರು.