ಸಂಗೀತ ನಮ್ಮ ಬದುಕಿನ ಸಂಜೀವಿನಿ: ಡಾ. ಮಹೇಶ

Music is the essence of our life: Dr. Mahesh

ಸಂಗೀತ ನಮ್ಮ ಬದುಕಿನ ಸಂಜೀವಿನಿ: ಡಾ. ಮಹೇಶ 

ಧಾರವಾಡ 18: ಸಂಗೀತ ನಮ್ಮ ಬದುಕಿನ ಸಂಜೀವಿನಿ. ಆದರೆ ಭಾವನೆಗಳನ್ನು ಅರಳಿಸಿ ದುಃಖ, ಖಿನ್ನತೆಯನ್ನು ದೂರ ಮಾಡಿ, ಮನೋಲ್ಲಾಸ ಉಂಟು ಮಾಡುವ ಶಕ್ತಿ ಇದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ‌್ಯಕಾರಿ ಸಮಿತಿ ಸದಸ್ಯ ಡಾ. ಮಹೇಶ ಧ. ಹೊರಕೇರಿ ಹೇಳಿದರು.  

ಕರ್ನಾಟಕ ವಿದ್ಯಾವರ್ಧಕ ಸಂಘವು ಸುಶೀಲಾ ಮಲ್ಲೇಶಪ್ಪ ಅಪ್ಪಾಜಿ ದತ್ತಿ ಅಂಗವಾಗಿ ಬೆಳಗಾವಿಯ ರುದ್ರಾಂಬಿಕಾ ಮಹಾಂತೇಶ ಯಾಳಗಿ ಅವರಿಂದ ಹಮ್ಮಿಕೊಂಡ ಜಾನಪದ ಮತ್ತು ವಚನ ಗಾಯನ ಕಾಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಮುಂದುವರೆದು ಮಾತನಾಡಿದ ಅವರು, ಸಂಗೀತ ಕೇಳುವುದರಿಂದ ಹಲವು ರೋಗಗಳು ನಿವಾರಣೆಯಾಗಬಲ್ಲವು. ಸಂಗೀತಕ್ಕೆ ಒಲಿಯದ ಮನಸ್ಸುಗಳೇ ಇಲ್ಲ. ವಿಶೇಷವಾಗಿ ನಮ್ಮ ಜನಪದ ಹಾಡುಗಳಂತು ಭಾವಮಯವಾದ ಹಾಡುಗಳಾಗಿರುವದರಿಂದ ಕೇಳುಗರಿಗೆ ಹಾಡುವವರ ಮನಸ್ಸಿನ ಬೇಸರ ಜಡತ್ವವನ್ನು ತೊಲಗಿಸಿ ಮನರಂಜನೆ ನೀಡುತ್ತವೆ. ಜಾನಪದ ಹಾಡು ನಮ್ಮ ಸಂಸ್ಕೃತಿ, ಸಾಂಪ್ರದಾಯದ ಪ್ರತಿಕವಾಗಿರುವದರಿಂದ ಮೂಲ ಜಾನಪದಕ್ಕೆ ಧಕ್ಕೆಯಾಗದಂತೆ ಹಾಡಬೇಕೇ ವಿನಹ ಅಶ್ಲೀಲ ಹಾಡು ಹಾಡುವುದು ಸಲ್ಲದು. ಯುವಶಕ್ತಿ ಈ ಸಂಗೀತ ಹಾಗೂ ಜಾನಪದ ಹಾಡುಗಾರಿಕೆಯ ಪರಂಪರೆಯಿಂದ ವಿಮುಖರಾಗಬಾರದು ಎಂದು ಹೇಳಿದರು. 

ವೀರಣ್ಣ ಒಡ್ಡೀನ ಪ್ರಾಸ್ತಾವಿಕ ಮಾತನಾಡಿ, ಕ.ವಿ.ವ ಸಂಘ ನಿರಂತರವಾಗಿ ಕಲೆ ಸಾಹಿತ್ಯ, ಸಂಸ್ಕೃತಿ ಹಾಗೂ ಸಂಗೀತ ಕಲೆಯನ್ನು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ದಿ. ಸುಶೀಲಾ ಅಪ್ಪಾಜಿ ಅವರು ಹೆಚ್ಚು ಓದದಿದ್ದರೂ ಅಪಾರ ಲೋಕಾನುಭವ ಹೊಂದಿದವರು. ಸಂಗೀತ ಪ್ರೇಮಿಯಾದ ಅವರು ಕಲೆಯನ್ನು, ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ ಎಂದರು. 

ಪ್ರಾರಂಭದಲ್ಲಿ ಬೆಳಗಾವಿಯ ರುದ್ರಾಂಬಿಕಾ ಮ. ಯಾಳಗಿ ಅವರಿಂದ ಸೊಗಸಾದ ಜಾನಪದ ಹಾಡು ಹಾಗೂ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಲಾಯಿತು. ಜಿತೇಂದ್ರ ಬಣ್ಣವರ್ ತಬಲಾ ಸಾಥ ನೀಡಿದರು. 

ಬೀನಾ ಹಿರೇಮಠ ಪ್ರಾರ್ಥಿಸಿದರು. ಕು. ಸಿಂಚನಾ ಕಟ್ಟಿಮನಿ ದೇಶಭಕ್ತಿಗೀತೆ ಹಾಡಿದರು.  ಶಂಕರ ಕುಂಬಿ ನಿರೂಪಿಸಿದರು, ದತ್ತಿದಾನಿ ಮಂಜುಳಾ ಕಟ್ಟಿಮನಿ ವಂದಿಸಿದರು 

ಕಾರ್ಯಕ್ರಮದಲ್ಲಿ ಲೀಲಾ ಕಲಕೋಟಿ, ದೇಸಾಯಿಗೌಡ ಪಾಟೀಲ ಸೇರಿದಂತೆ ಸಾಹಿತಿಗಳು, ಮುಂತಾದವರು ಇದ್ದರು.