ಲೋಕದರ್ಶನ ವರದಿ
ಬೆಳಗಾವಿ, 20: ವ್ಯಕ್ತಿಯ ಅದರಲ್ಲೂ ಮಕ್ಕಳ-ಯುವಜನತೆಯ ಜೀವ ಮತ್ತು ಜೀವನ ಯಶಸ್ಸಿನಿಂದ ಇರುವಂತಾಗಲು ಅವುಗಳ ಸುರಕ್ಷತೆ ಮಾಡಿಕೊಳ್ಳುವದು ಅತೀ ಅವಶ್ಯ. ಜೀವವನ್ನು ಮೊದಲು ಕಾಪಾಡಿಕೊಳ್ಳಬೇಕು. ಅದುಳಿದಾಗ ನಂತರ ಜೀವನ. ಅಪಘಾತ, ಅಪರಾಧ ಎರಡೂ ಜೀವಕ್ಕೆ ಕುತ್ತುಗಳೇ. ರಸ್ತೆಯಲ್ಲಿ ದಾಟುವಾಗ ರಸ್ತೆಗುಂಟ ಹೋಗುವಾಗ ಸಾರಿಗೆ ನಿಯಮಗಳು ನಿಮ್ಮನ್ನು ಸುರಕ್ಷಿತವಾಗಿಡಬಲ್ಲವು. ಅಪರಾಧಗಳು ನಿಮ್ಮಿಂದ ನಡೆಯದಂತೆ ಎಚ್ಚರವನ್ನು ವಹಿಸಬೇಕು. ನಿಮ್ಮನ್ನು ಸದಾ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿ ಬೆಳೆಸುವ, ನಿಮ್ಮ ಮೇಲೆ ಕನಸನ್ನು ಇಟ್ಟಿರುವ ನಿಮ್ಮ ಪಾಲಕ - ಪೋಷಕರಿಗೆ ನಿರಾಶೆ-ಆತಂಕಗಳನ್ನು ಉಂಟುಮಾಡುವ ಬೇಜವಾಬ್ದಾರಿತನ, ರಸ್ತೆ ನಿಯಮ ಉಲ್ಲಂಘನೆ ಮಾಡದಂತೆ ಜಾಗೃತಿ ಬೆಳೆಸಿಕೊಳ್ಳಬೇಕು" ಎಂದು ಉತ್ತರ ಸಂಚಾರ ಪೊಲಿಸ ಠಾಣೆಯ ಸಬ್ ಇನಸ್ಪೆಕ್ಟರ ಆಗಿರುವ ಎಂ.ಬಿ.ಗುಜನಾಳ ಅವರು ತಿಳಿಸಿ ಹೇಳಿದರು.
ಅವರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರೌಢ ಶಾಲೆಯಲ್ಲಿ ಸಂಚಾರ ಪೋಲಿಸ ಠಾಣೆಯ ವತಿಯಿಂದ ಏರ್ಪಡಿಸಲಾಗಿದ್ದ ರಸ್ತಾ ಸುರಕ್ಷತಾ ಸಪ್ತಾಹ ಮತ್ತು ಅಪರಾಧ ತಡೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸಂಚಾರಿ ನಿಯಮಗಳ ಬಗ್ಗೆ ಮತ್ತು ರಸ್ತೆ ಅಪಘಾತ ಮತ್ತು ಅಪರಾಧಗಳಿಗೆ ಸಂಭಂದಿತ ಕಾನೂನು ಮತ್ತು ಕಾಯಿದೆಗಳ ಕುರಿತು ಉತ್ತರ ಸಂಚಾರಿ ಪೋಲಿಸ ಠಾಣೆಯ ಹವಲ್ದಾರರಾದ ಚೌಗಲಾ ಅವರು ಸರಳವಾಗಿ ತಿಳಿಸಿದರು. ಸಮಾರಂಭದಲ್ಲಿ ಕೆಎಸ್ಆರ್ಆರ್ಎಚ್ಎಸ್ ಸಂಸ್ಥೆಯ ಚೇರಮನ್ ರಾದ ಆರ್. ಪಿ.ಪಮ್ಮಾರ ಉಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಾದ್ಯಾಪಕರಾದ ಬಿ ಪಿ ಲಮಾಣಿ ಅವರು ವಹಿಸಿ ಜನಸಂಖ್ಯೆ ವೃದ್ದಿಯಿಂದ ಹೆಚ್ಚಾದ ವಾಹನಗಳ ಮಿತಿಮೀರಿದ ವೇಗ ಸಂಚಾರದಿಂದ ನಮ್ಮನ್ನು ನಾವು ಕಾಪಾಡಿಕೊಂಡು ಜೋಪಾನವಾಗಿ ಇರುವದು-ರಸ್ತೆ ನಿಯಮಗಳ ಪಾಲನೆಯಿಂದ ಮಾತ್ರ ಸಾದ್ಯ ಎಂದು ಸಮಾರೋಪ ಭಾಷಣ ಮಾಡಿದರು. ಆರಂಭದಲ್ಲಿ ಎಲ್ ಕೆ ಪಮ್ಮಾರ ಅವರು ಸ್ವಾಗತಿಸಿದರು. ಮತ್ತು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ವಿ ಎಸ್ ಭೂತಿ. ವಂದಿಸಿದರು. ಬಿ ಎಂ ಮಠ ಎಸ್ ಎಸ್ ಲಮಾಣಿ, ಎಂ ಬಿ ತೋಟಗಿ, ಎಸ್ ಆರ್ ವೀರಾಪೂರ. ಉಪಸ್ಥಿತರಿದ್ದರು.