ಉತ್ತರ ಕರ್ನಾಟಕ ಪ್ರತಿಭೆಗಳು ಯಾರಿಗೂ ಕಮ್ಮಿಯಿಲ್ಲ : ಪವನಕುಮಾರ

No one lacks North Karnataka talent: Pawan Kumar

ಉತ್ತರ ಕರ್ನಾಟಕ ಪ್ರತಿಭೆಗಳು ಯಾರಿಗೂ ಕಮ್ಮಿಯಿಲ್ಲ : ಪವನಕುಮಾರ  

ವಿಜಯಪುರ 22 : ಉತ್ತರ ಕರ್ನಾಟಕದಲ್ಲಿ ಅನೇಕ ಪ್ರತಿಭೆಗಳಿದ್ದು, ಅವರ ಪ್ರತಿಭೆಗೆ ತಕ್ಕಂತೆ ಚಲನಚಿತ್ರದಲ್ಲಿ ಅವಕಾಗಳು ಸಿಗುತ್ತಿಲ್ಲ. ಸೂಕ್ತ ವೇದಿಕೆ ಸಿಕ್ಕರೆ ಉತ್ತರ ಕರ್ನಾಟಕದ ಕಲಾವಿದರು ತಾವು ಯಾರಿಗೂ ಕಮ್ಮಿಯಿಲ್ಲ ಎಂಬುದನ್ನು ತೋರಿಸುತ್ತಾರೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ, ಚಲನಚಿತ್ರ ನಿರ್ದೇಶಕ ಪವನಕುಮಾರ ಒಡೆಯರ ಹೇಳಿದರು.  

ಅವರು ನಗರದ ಖಾಸಗಿ ಹೋಟೇಲ್‌ನಲ್ಲಿ ಪರಿಸರ ವೇದಿಕೆ ಹಾಗೂ ಶಿವಶರಣ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ಹಾಗೂ ವಿವಿದ್ಧೋದ್ಧೇಶಗಳ ಸಂಸ್ಥೆಯ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.  

ಉತ್ತರ ಕರ್ನಾಟಕದ ಭಾಗದಲ್ಲಿ ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರ ಹಾಗೂ ಆದಿಲ್ ಶಾಹಿ ಸಾಮ್ರಾಜ್ಯ ಕಾಲದ ಅನೇಕ ಸ್ಮಾರಕಗಳಿದ್ದು ಜೊತೆಗೆ ದೇಶಗತಿ ಮನೆತನದ ಕೋಟೆ ಕೊತ್ತಲುಗಳಿದ್ದು, ಪ್ರಾಕೃತಿಕವಾಗಿ ಬಯಲುಸೀಮೆ ನಾಡಾಗಿರುವ ಉತ್ತರ ವಲಯವು ಚಲನ ಚಿತ್ರ ನಿರ್ಮಾಣಕ್ಕೆ ಪೂರಕವಾಗಿದೆ. 

ಇಲ್ಲಿನ ಸ್ಮಾರಕಗಳನ್ನು ಹಾಗೂ ಸಾಹಿತ್ಯ ಸಂಸ್ಕೃತಿ ಮತ್ತು ಜವಾರಿ ಭಾಷೆಯನ್ನು ಬಳಸಿಕೊಂಡು ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕ ಕೇಂದ್ರಿಕೃತ ಚಲನಚಿತ್ರ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದು, ಇಲ್ಲಿನ ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.  

ಪರಿಸರ ವೇದಿಕೆ ಅಧ್ಯಕ್ಷ ಅಂಬಾದಾಸ ಜೋಶಿಯವರು ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಹಿರಿಯ ಸಾಹಿತಿಗಳು ಆಗಿ ಹೋಗಿದ್ದು, ಅವರು ಅಮೂಲ್ಯ ಕಥೆ, ಕಾದಂಬರಿಗಳನ್ನು ರಚಿಸಿದ್ದಾರೆ. ಉತ್ತರ ಕರ್ನಾಟಕ ಸೊಗಡನ್ನು ಇಲ್ಲಿನ ಸಾಹಿತ್ಯದಲ್ಲಿ ಕಾಣಬಹುದು. ಇವುಗಳನ್ನು ಇಟ್ಟುಕೊಂಡು ಉತ್ತಮ ಚಲನಚಿತ್ರ ನಿರ್ಮಿಸಬಹುದು. ಆ ನಿಟ್ಟಿನಲ್ಲಿ ಚಲನಚಿತ್ರ ನಿರ್ದೇಶಕರು ಹಾಗೂ ನಿರ್ಮಾಪಕರು ಪ್ರಯತ್ನ ಮಾಡಬೇಕೆಂದು ಹೇಳಿದರು.  

ಇದೇ ಸಂದರ್ಭದಲ್ಲಿ ಚಲನಚಿತ್ರ ನಿರ್ದೇಶಕ ಸುನೀಲಕುಮಾರ ಸುಧಾಕರ, ಸಾಹಿತಿ ಪರಶುರಾಮ ಶಿವಶರಣ,  ಸಂಶೋದಕರಾದ ಲಾಯಪ್ಪ ಇಂಗಳೆ, ಸಾಹಿತಿಗಳಾದ ಡಾ. ಸುಭಾಸ ಕನ್ನೂರ, ಮಾಧವ ಗುಡಿ, ಪತ್ರಕರ್ತ ಉಮೇಶ ಶಿವಶರಣ, ಪ್ರವೀಣ ವಾಗ್ಮೋರೆ, ಕಲ್ಲಪ್ಪ ಸಾಗರ ಸೇರಿದಂತೆ ಇನ್ನಿತರರು ಇದ್ದರು.