ಹಾರೂಗೇರಿಯಲ್ಲಿ ರಾಜ್ಯ ಹೆದ್ದಾರಿ ನುಂಗಿದ ಪಾರ್ಕಿಂಗ್ ಸುಗಮ ಸಂಚಾರಕ್ಕೆ ಸಂಚಕಾರ* ಬೇಕಾಬಿಟ್ಟಿ ವಾಹನಗಳ ನಿಲುಗಡೆ
ಹಾರೂಗೇರಿ : ಪಟ್ಟಣದ ಜತ್-ಜಾಂಬೋಟಿ ರಾಜ್ಯ ಹೆದ್ದಾರಿ ಮುಖ್ಯ ರಸ್ತೆ ಪಾರ್ಕಿಂಗ್ ಲಾಟ್‌ಗಳಾಗುತ್ತಿದ್ದು, ಸುಗಮ ಸಂಚಾರಕ್ಕೆ ಸಂಚಕಾರ ಬಂದಿದೆ. ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಬುಧವಾರದ ಸಂತೆಯಂದು ಅರ್ಧ ಹೆದ್ದಾರಿಯನ್ನು ಪಾರ್ಕಿಂಗ್ ಆಕ್ರಮಿಸಿಕೊಳ್ಳುತ್ತಿದ್ದು, ಇಲ್ಲಿ ರಸ್ತೆ ದಾಟುವುದೇ ಒಂದು ಸವಾಲಾಗಿದೆ.
ಪಟ್ಟಣದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡಿದರೂ, ರಸ್ತೆ ಮಧ್ಯೆಯೇ ವಾಹನ ನಿಲ್ಲಿಸಿದರೂ ಯಾರೂ ಕೇಳೋರಿಲ್ಲ, ಹೇಳೋರಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಪಾದಚಾರಿಗಳು ಹಾಗೂ ಇನ್ನಿತರ ವಾಹನಗಳ ಸವಾರರು ಹಾಗೂ ಸಾರ್ವಜನಿಕರಿಗೆ ಕಿರಿಕಿರಿಯುಂಟಾಗುತ್ತಿದೆ. ರಾಜ್ಯ ಹೆದ್ದಾರಿ ಪಕ್ಕದಲ್ಲೇ ಪೊಲೀಸ್ ಠಾಣೆಯಿದ್ದರೂ ಪೊಲೀಸರು ತಮಗೆ ಸಂಬಂಧವೇ ಇಲ್ಲ ಎಂಬಂತೆ ಇದ್ದಾರೆ. ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕೆಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಪುರಸಭೆ ಪ್ರತಿವರ್ಷ ಸಂತಕರ ವಸೂಲಿಗೆ ಟೆಂಡರ್ ಕರೆದು ಲಕ್ಷ್ಯಾಂತರ ರೂ. ಆದಾಯ ಪಡೆದು ಕೈತೊಳೆದುಕೊಳ್ಳುತ್ತಿದ್ದು, ವ್ಯಾಪಾರಸ್ತರ ಸಮಸ್ಯೆ ಬಗ್ಗೆ ಕಿವಿಗೊಡುತ್ತಿಲ್ಲ. ಕಣ್ಣೆದುರೇ ವ್ಯಾಪಾರಸ್ತರು ರಸ್ತೆಯ ಮೇಲೆಯೇ ವ್ಯಾಪಾರ ಮಾಡುತ್ತಿದ್ದರೂ ತಾಲೂಕು ಮಟ್ಟಕ್ಕೆ ಬೆಳೆದು ನಿಂತ ಹಾರೂಗೇರಿಗೆ ಬರುವ ವ್ಯಾಪಾರಸ್ತರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಖರೀದಿ, ಸಂತೆಗೆ ಬಂದ ಜನರಿಗೆ ನೆಮ್ಮದಿಯಿಂದ ಓಡಾಡಲೂ ಆಗುತ್ತಿಲ್ಲ.
ಹಾರೂಗೇರಿ ಪಟ್ಟಣ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಹಳ್ಳಿಗಳಿಗೆ ಶೈಕ್ಷಣಿಕ, ವಾಣಿಜ್ಯ, ವ್ಯಾಪಾರದ ಪ್ರಮುಖ ಕೇಂದ್ರವಾಗಿರುವುದರಿಂದ ದಿನ ಬೆಳಗಾದರೆ ಸಾವಿರಾರು ಜನರು ವಾಹನಗಳ ಮೇಲೆ ಬರುತ್ತಾರೆ. ಈ ರಾಜ್ಯ ಹೆದ್ದಾರಿ ಮಾರ್ಗವಾಗಿ ಸುಮಾರು 137 ಸರ್ಕಾರಿ ಬಸ್ಸುಗಳು ಸೇರಿದಂತೆ ನೂರಾರು ಟ್ರಕ್‌ಗಳು, ಕಾರುಗಳು, ಖಾಸಗಿ ಬಸ್ಸುಗಳು ಸೇರಿ ಸಾವಿರಾರು ವಾಹನಗಳು ಸಂಚರಿಸುವುದರಿಂದ ಇಕ್ಕಟ್ಟಾದ ರಸ್ತೆಯಲ್ಲಿ ವಾಹನ ಸವಾರರು ಹಾಗೂ ಜನಸಾಮಾನ್ಯರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.
ಪಟ್ಟಣದ ವ್ಯಾಪಾರ ಕೇಂದ್ರವಾದ ಹನುಮಾನ ಗಲ್ಲಿಗೆ ಹೋಗುವ ರಸ್ತೆಯುದ್ದಕ್ಕೂ ಬಂಗಾರ, ಬಟ್ಟೆ, ಬಾಂಡೆ, ಓಷಧ ಮೊದಲಾದ ನೂರಾರು ಅಂಗಡಿಗಳಿದ್ದು, ಆ ಅಂಗಡಿಗಳಿಗೆ ಪಾರ್ಕಿಂಗ್ ವ್ಯವಸ್ಥೆಯಿಲ್ಲದೇ ಅಂಗಡಿಗಳ ಮುಂದೆಯೇ ವಾಹನಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ಕಾಲ್ನಡಿಯೂ ಕಷ್ಟವಾಗಿದೆ. ಇದು ಗ್ರಾಹಕರಿಗೂ ಸಮಸ್ಯೆಯಾಗುತ್ತಿದೆ. ಕಿರಿದಾದ ರಸ್ತೆ ನಡುವೆಯೇ ಕಾರು, ಬೈಕ್, ಪಾದಚಾರಿಗಳ ಓಡಾಟ ಹಾಗೂ ಪಾರ್ಕಿಂಗ್ ಎಲ್ಲವೂ ಜಂಜಾಟದ ಸಂಚಕಾರಕ್ಕೆ ಆಸ್ಪದವಾಗುತ್ತಿದೆ.
ರಸ್ತೆಯ ಮೇಲೆ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿರುವ ವಾಹನಗಳನ್ನು ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಲ್ಲುತ್ತಿರುವ ದ್ವಿಚಕ್ರ ವಾಹನಗಳಿಗೆ ಸಂಬಂಧಪಟ್ಟ ಪೊಲೀಸ್ ಠಾಣಾಧಿಕಾರಿಗಳು ವಾಹನಗಳ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಮಾಡಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದಕ್ಕೆ ಕ್ರಮ ಕೈಗೊಂಡು, ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ನೀಡಬೇಕು.
ಹಾರೂಗೇರಿ ಪಟ್ಟಣ ಸುಮಾರು 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಸಂಜೆ ತುಂಬಾ ಜನದಟ್ಟನೆಯ ಪ್ರದೇಶವಾಗಿದೆ. ವಾಹನಗಳ ಪಾರ್ಕಿಂಗ್ ಮಾಡಲು ಜಾಗದ ಸಮಸ್ಯೆ ಇದೆ. ಪುರಸಭೆ ಆಡಳಿತ ತಮ್ಮ ವ್ಯಾಪ್ತಿಯ ಸರ್ಕಾರಿ ಜಾಗಗಳಲ್ಲಿ ಬುಧವಾರ ಸಂತೆ ದಿನದಂದು ಮತ್ತು ಶನಿವಾರ, ರವಿವಾರ ವಾಹನ ಸವಾರರಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕಿದೆ.
( ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ರಸ್ತೆ ಬದಿಗಳಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸುವುದರಿಂದ ವಯೋವೃದ್ಧರು, ವಿಶೇಷಚೇತನರು, ಮಹಿಳೆಯರು, ಮಕ್ಕಳು ಓಡಾಡಲು ಸಮಸ್ಯೆಯಾಗುತ್ತಿದೆ. ಪೊಲೀಸರು ಪರ್ಯಾಯ ಕ್ರಮ ಕೈಗೊಳ್ಳಬೇಕು. - ಸುಮಿತ್ರಾ ನಾಯಿಕ )
( ಮಾರುಕಟ್ಟೆ ಪ್ರದೇಶದಲ್ಲಿ ಸೂಕ್ತ ಪಾರ್ಕಿಂಗ್ ಸೌಲಭ್ಯ ಇಲ್ಲದ್ದರಿಂದ ಇಲ್ಲಿ ಓಡಾಡಲೂ ಆಗದ ಸ್ಥಿತಿಯಿದೆ. ನಾವು ವಾಹನ ನಿಲುಗಡೆ ಮಾಡಲು ಬಂದರೆ ವ್ಯಾಪಾರಸ್ಥರು, ಅಂಗಡಿಕಾರರೊಂದಿಗೆ ಜಗಳಕ್ಕಿಳಿಯಬೇಕಾದ ಘಟನೆಗಳು ನಡೆಯುತ್ತಿವೆ. - ನಂದೇಶ್ವರ ಪಾಟೀಲ, ಕೋಳಿಗುಡ್ಡ ನಿವಾಸಿ )