ಭ.ಮಹಾವೀರರ ತತ್ವಗಳ ಪಾಲನೆಯಿಂದ ವಿಶ್ವಕ್ಕೆ ಶಾಂತಿ: ಪ್ರೋ.ಸಿದ್ದು ಅಲಗೂರ
ಬೆಳಗಾವಿ 10: ಭಗವಾನ ಮಹಾವೀರರ ತತ್ವಾದರ್ಶಗಳ ಪಾಲನೆಯಿಂದಾಗಿ ವಿಶ್ವದಲ್ಲಿ ಶಾಂತಿಯನ್ನು ಸ್ಥಾಪಿಸಬಹುದು. ಇಂದಿನ ಜೀವನಶೈಲಿಯಲ್ಲಿ ಭಗವಾನ ಮಹಾವೀರರ ತತ್ವಾದರ್ಶಗಳು ಪ್ರಸ್ತುತವಾಗಿದ್ದು, ಅವುಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕೇರಳದ ಕೇಂದ್ರಿಯ ವಿಶ್ವ ವಿದ್ಯಾಲಯದ ಕುಲಪತಿ ಪ್ರೋ. ಸಿದ್ದು ಅಲಗೂರ ಅವರು ಅಭಿಪ್ರಾಯಪಟ್ಟರು.
ಬೆಳಗಾವಿ ನಗರದಲ್ಲಿಂದು ಭಗವಾನ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಶೋಭಾಯತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ವಿಶ್ವದ ಹಲವು ದೇಶಗಳಲ್ಲಿ ಯುದ್ದ ನಡೆಯುತ್ತಿದೆ. ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೆ ಅಹಿಂಸೆಯನ್ನು ಪ್ರತಿಪಾದಿಸಿದ ಭಗವಾನ ಮಹಾವೀರರ ತತ್ವಗಳನ್ನು ನಾವು ಅಳವಡಿಸಿಕೊಂಡರೆ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಅವರು ಹೇಳಿದರು.
ಬೆಳಗಾವಿ ಜಿಲ್ಲಾಧಿಕಾರಿ ಮೊಹ್ಮದ ರೋಷನ ಅವರು ಮಾತನಾಡಿ, ವಿಶ್ವದ ಅತ್ಯಂತ ಶಾಂತಿ ಪ್ರೀಯ ಸಮಾಜ ಅಂದರೆ ಅದು ಜೈನ ಸಮಾಜ, ಸಹಲಶೀಲತೆ, ಅಹಿಂಸೆ, ಯಾರಿಗೂ ತೊಂದರೆ ಕೊಡದೆ ಸಕಲರಿಗೂ ಒಳ್ಳೆಯದನ್ನು ಬಯಸುವ ಧರ್ಮ ಜೈನ ಧರ್ಮವಾಗಿದೆ ಎಂದು ಅವರು ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಹುಬ್ಬಳ್ಳಿಯ ಶೀಕ್ಷಣ ತಜ್ಞ ಮಹೇಶ ಶಿಂಘ್ವಿ ಅವರು ಮಾತನಾಡಿ, ಇಂದು ಜೈನ ಸಮಾಜ ಅಲ್ಪಸಂಖ್ಯಾತರಲ್ಲಿ ಅಲ್ಪವಾಗಿದೆ. ಆದರೆ ಇತ್ತಿಚಿನ ದಿನಗಳಲ್ಲಿ ಸಮಾಜ ಹೆಚ್ಚಾಗಿ ಒಟ್ಟಾಗುತ್ತಿದೆ. ನಿನ್ನೆಯ ದಿನ ಜಿತೋ ಸಂಸ್ಥೆಯ ವತಿಯಿಂದ ಆಯೋಜಿಸಲಾದ ವಿಶ್ವ ನವಕಾರ ದಿವಸ ಆಚರಣೆ ಸಂದರ್ಭದಲ್ಲಿ ಎಲ್ಲ ಜೈನ ಸಮುದಾಯ ಒಗ್ಗಟ್ಟಾಗಿತ್ತು. ಈ ಒಗ್ಗಟ್ಟನ್ನು ನಾವೆಲ್ಲರೂ ಮುಂದುವರೆಸಿಕೊಂಡು ಹೋಗಬೇಕಾಗಿದೆ. ಸಾಮಾಜಿಕ ಮತ್ತು ರಾಜಕೀಯವಾಗಿ ನಾವು ಎಲ್ಲರೂ ಒಂದಾಗಬೇಕಾಗಿದೆ ಎಂದರು.
ಹಿರಿಯ ಐಈಎಸ್ ಅಧಿಕಾರಿ ಹಾಗೂ ಭಾರತಿಯ ರೈಲು ಇಲಾಖೆಯ ಹಿರಿಯ ಅಧಿಕಾರಿ ಅಜಯ ಜೈನ ಅವರು ಮಾತನಾಡಿ ಬೆಳಗಾವಿಯಲ್ಲಿ ಜೈನ ಸಮಾಜದ ಎಲ್ಲ ಪಂಗಡಗಳು ಒಟ್ಟಾಗಿ ಸೇರಿ ಭಗವಾನ ಮಹಾವೀರರ ಜನ್ಮ ಕಲ್ಯಾಣಕ ಮಹೋತ್ಸವವನ್ನು ಆಚರಿಸುತ್ತವೆ. ಇಲ್ಲಿನ ಮಹೋತ್ಸವದ ಆಚರಣೆ ಇಡೀ ದೇಶಕ್ಕೆ ಮಾದರಿಯಾಗಿದ್ದು, ಇದೇ ತರಹ ಮುಂದೆವರೆಯಲಿ ಎಂದರು.
ಗೌರವ ಅತಿಥಿಯಾಗಿ ಆಗಮಿಸಿದ ಮಹಾಪೌರ ಮಂಗೇಶ ಪವಾರ ಅವರು ಮಾತನಾಡಿ ಭ.ಮಹಾವೀರ ಜನ್ಮಕಲ್ಯಾಣ ಬೆಳಗಾವಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಎಲ್ಲರು ಶಾಂತಿ ಮತ್ತು ಅಹಿಂಸೆಯ ತತ್ವಗಳನ್ನು ಪಾಲಿಸೋಣ ಎಂದರು.
ಹಳ್ಳಿಯ ಸಂದೇಶ ದಿನಪತ್ರಿಕೆಯ ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವದ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ವೇದಿಕೆ ಮೇಲೆ ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಉಪ ಮಹಾಪೌರ ವಾಣಿ ವಿಲಾಸ ಜೋಶಿ, ಬಿಜೆಪಿ ಧುರಿಣರಾದ ಎಂ.ಬಿ.ಝೀರಲಿ, ಕೆಪಿಸಿಸಿ ಸೆಕ್ರೆಟರಿ ಸುನಿಲ ಹನಮಣ್ಣವರ, ಮನೋಜ ಸಂಚೇತಿ, ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ಉದ್ಯಮಿ ಸಚಿನ ಪಾಟೀಲ, ನಗರ ಸೇವಕರಾದ ಜಯತೀರ್ಥ ಸವದತ್ತಿ, ಸಂತೋಷ ಪೆಡನೇಕರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಸಂಗಿತಾ ಕಟಾರಿಯಾ ಣಮೋಕಾರ ಮಂತ್ರ ಪಠಣ ಮಾಡಿದರು. ಪ್ರಿಯಂಕಾ ಜುಟ್ಟಿಂಗ ಸ್ವಾಗತ ಗೀತೆ ಹಾಡಿದರು. ರಾಜೇಂದ್ರ ಜೈನ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಕ್ರಮ ಜೈನ ಅತಿಥಿಗಳನ್ನು ಸ್ವಾಗತಿಸಿದರು.
ಭಗವಾನ ಮಹಾವೀರ ಮಹೋತ್ಸವದ ಶೋಭಾಯಾತ್ರೆಯು ಟಿಳಕಚೌಕದಿಂದ ಪ್ರಾರಂಭಗೊಂಡು ಶೇರಿ ಗಲ್ಲಿ, ಮಠ ಗಲ್ಲಿ, ಕಪಿಲೇಶ್ವರ ಸೇತುವೆ, ಎಸ.ಪಿ.ಎಂ.ರಸ್ತೆ, ಶಹಾಪುರ ಕೋರೆ ಗಲ್ಲಿ, ಗೋವಾವೇಸ ಮೂಲಕ ಮಹಾವೀರ ಭವನದ ಬಳಿ ಮುಕ್ತಾಯಗೊಂಡಿತು. ಮಹಾವೀರ ಭವನದಲ್ಲಿ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.