ಜಾನುವಾರುಗಳಿಗೆ ಮೇವು ಕೊರತೆ ಆಗದಂತೆ ಕ್ರಮವಹಿಸಿ: ಹಿರೇಮಠ

ಗದಗ 16: ಗದಗ ಜಿಲ್ಲೆಯ  ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಜಿಲ್ಲಾಡಳಿತ ಮುಂಜಾಗ್ರತೆ ಕ್ರಮ ಕೈಕೊಂಡಿದೆ.  ಮೇವು ಬ್ಯಾಂಕಿಗೆ ಬರುವ ಎಲ್ಲ ಅರ್ಹ ಫಲಾನುಭವಿಗಳ ಜಾನುವಾರುಗಳಿಗೆ ಮೇವು ಸರಬರಾಜಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಕರ್ತವ್ಯ ನಿರ್ವಹಿಸಲು ಜಿಲ್ಲಾದಿಕಾರಿ ಎಂ.ಜಿ. ಹಿರೇಮಠ ಸೂಚನೆ ನೀಡಿದರು.  ಸರಬರಾಜು ಆದ ಮೇವು ಪೂರ್ಣ ಮಾರಾಟ ಆದ ಬೆಳ್ಳಟ್ಟಿ,  ಮಜ್ಜೂರ ಮೇವು ಬ್ಯಾಂಕ್ಗಳಿಗೆ ಮೇವು ಸರಬರಾಜಿಗೆ ತಕ್ಷಣ ಕ್ರಮ ಜರುಗಿಸಲು ನಿರ್ದೇಶನ ನೀಡಿದರು. 

       ಶಿರಹಟ್ಟಿಯ ಎಪಿಎಂಸಿ, ಬೆಳ್ಳಟ್ಟಿ, ಕೋಗನೂರ ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇವು ಬ್ಯಾಂಕಿಗೆ ಅವರಿಂದು ( ದಿ.16 ) ಭೇಟಿ ನೀಡಿ ಮೇವು ಸರಬರಾಜು ಹಾಗೂ ಮಾರಾಟ ಕುರಿತಂತೆ ಪರಿಶೀಲನೆ ನಡೆಸಿದರು. 

          ಶಿರಹಟ್ಟಿ ತಹಶೀಲ್ದಾರ ಆಶಪ್ಪ ಶಿರಹಟ್ಟಿ ಎಪಿಎಂಸಿ ಮೇವು ಬ್ಯಾಂಕಿಗೆ ಮಾರ್ಚ 1 ರಿಂದ ಈವರೆಗೆ 45.37 ಮಟ್ರಿಕ್ ಟನ್ ಮೇವು ಬಂದಿದ್ದು 37.16 ಮೆ. ಟನ್ ಮೇವು ಮಾರಾಟವಾಗಿದೆ.  ಪಶು ಸಂಗೋಪನೆ ಇಲಾಖೆ ನೀಡಿದ ಪ್ರಮಾಣ ಪತ್ರ ಆಧರಿಸಿ ಅರ್ಹ ಫಲಾನುಭವಿಗಳಿಗೆ ರಿಯಾಯ್ತಿ ದರದಲ್ಲಿ ಕೆಜಿ 2 ರೂ.ದಂತೆ ಮೇವು ಮಾರಾಟ ಮಾಡಲಾಗುತ್ತಿದೆ.  ಇದೇ ರೀತಿ ಬೆಳ್ಳಟ್ಟಿಯ ಮೇವು ಬ್ಯಾಂಕಿಗೆ 12.35 ಮೆ.ಟನ್ ಬಂದಿದ್ದು ಅಷ್ಟು ಮೇವು ಮಾರಾಟವಾಗಿದೆ.  ಕೋಗನೂರಲ್ಲಿ 15.83  ಮೆ. ಟನ್ ಪೈಕಿ 2.65 ಮೆ. ಟನ್ ಮಾರಾಟವಾಗಿದೆ.  ಕಡಕೋಳದಲ್ಲಿ 16.24 ರ ಪೈಕಿ 11.06 ಮೆ.ಟನ್ ಹಾಗೂ ಮಜ್ಜೂರದಲ್ಲಿ ಸರಬರಾಜಾದ 3.56 ಮೆ.ಟನ್ ಮೇವು ಪೂರ್ತಿ  ಮಾರಾಟವಾಗಿದ್ದು ತಾಲೂಕಿನಲ್ಲಿ ಒಟ್ಟು 66.79 ಮೆ. ಟನ್ ಮೇವು ಮಾರಾಟವಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. 

         ಪಶು ಸಂಗೋಪನೆ ಇಲಾಖೆ ಸಹಾಯಕ ನಿದರ್ೇಶಕ ಡಾ. ಓಲೇಕಾರ, ಶಿರಹಟ್ಟಿ ಪ.ಪಂ. ಮುಖ್ಯಾಧಿಕಾರಿ ಎಂ.ಎಂ. ಮುಗಳಿ, ಕಂದಾಯ ನಿರೀಕ್ಷಕ ಮಗದುಮ ಉಪಸ್ಥಿತರಿದ್ದರು.