ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಸಿಗಲಿ: ಸಿದ್ದರಾಮಯ್ಯ

ಧಾರವಾಡ 07: ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವು ಕನ್ನಡ ಮಾಧ್ಯಮದಲ್ಲಿಯೇ ಸಿಗಬೇಕು ಎಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಪುನರುಚ್ಚರಿಸಿದರು.

ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಜ.6ರಂದು ಜರುಗಿದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಭಾಷೆ ಎಂದರೆ ಜ್ಞಾನ ಅಲ್ಲ. ಅದೊಂದು ಕಲಿಕೆಯ ಸಾಧನ. 1ರಿಂದ 7ನೇ ತರಗತಿವರೆಗೆ ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ಸಿಗುವಂತಾಗಬೇಕು ಎಂದು ಅವರು ತಿಳಿಸಿದರು.

ಕನ್ನಡ ಭಾಷೆಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಇಂಗ್ಲೀಷಗೆ ಕೆಲವೇ ವರ್ಷಗಳ ಇತಿಹಾಸವಿದೆ. ಇದನ್ನು ನಾವು ತಿಳಿಯಬೇಕು. ಪ್ರಾಥಮಿಕ ಶಿಕ್ಷಣವು ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಸಿಗಬೇಕು ಎನ್ನುವ ಬಹುಸಂಖ್ಯಾತರ ಭಾವನೆಗೆ ನಾವು ವಿರುದ್ಧವಾಗಿ ಹೋಗಬಾರದು. ಈ ಬಗ್ಗೆ ನಾನು ಮುಖ್ಯಮಂತ್ರಿ ಅವರೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು.

ದೇಶದಲ್ಲಿ 22 ಅಧಿಕೃತ ಭಾಷೆಗಳಿವೆ. ದೇಶದ ಎಲ್ಲಾ ರಾಜ್ಯಗಳ ಭಾಷೆಗಳಿಗೆ ಕುತ್ತು ಬರುವ ಸ್ಥಿತಿ ಈಗ ಎದುರಾಗುತ್ತಿದೆ. ಆಯಾ ರಾಜ್ಯಗಳಲ್ಲಿ ಅವರವರ ಮಾತೃಭಾಷೆಯಲ್ಲಿಯೇ ಶಿಕ್ಷಣ ಸಿಕ್ಕಾಗ, ರಾಜ್ಯ ಸಕರ್ಾರಗಳು ಮತ್ತು ಕೇಂದ್ರ ಸಕರ್ಾರ ಒಟ್ಟಾಗಿ ಕೆಲಸ ಮಾಡಿದಾಗ ಭಾರತೀಯ ಭಾಷೆಗಳ ಉಳಿವು ಸಾಧ್ಯವಾಗುತ್ತದೆ ಎಂದರು.  ಕನ್ನಡ ನೆಲ, ಜಲ ಹಾಗೂ ಭಾಷೆ ರಕ್ಷಣೆಯು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ ಆಗಬೇಕು. ಕನ್ನಡಿಗರು ದುರಾಭಿಮಾನಿಗಳಾಗಬೇಕಿಲ್ಲ. ನಮ್ಮ ಭಾಷೆಯನ್ನು ನಾವೇ ಪ್ರೀತಿಸದೇ ಹೋದರೆ ಅದು ಉಳಿಯುವುದಿಲ್ಲ. ನಾವೆಲ್ಲರೂ ನಮ್ಮ ನಾಡು ನೆಲ ನುಡಿಯನ್ನು ಗೌರವಿಸೋಣ, ಉಳಿಸೋಣ ಎಂದು ಸಲಹೆ ಮಾಡಿದರು.

ಡಾ.ಚಂದ್ರಶೇಖರ ಕಂಬಾರ ಅವರು ಉತ್ತರ ಕನರ್ಾಟಕ ಭಾಗದ ಹಿರಿಯ ಸಾಹಿತಿಯಾಗಿದ್ದಾರೆ. ಅವರು ಉತ್ತರ ಕನರ್ಾಟಕ ಭಾಗದಲ್ಲಿ ನಡೆದ ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದು ಬಹಳ ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.

ನಾನು ಈ ನಾಡನ್ನು ಅಪಾರವಾಗಿ ಪ್ರೀತಿಸುವ ವ್ಯಕ್ತಿಯಾಗಿದ್ದೇನೆ. ಈ ಭಾಗದಲ್ಲಿ ನಡೆದ ಗೋಕಾಕ ಚಳುವಳಿ, ರೈತ ಚಳುವಳಿಗಳಲ್ಲಿ ಪಾಲ್ಗೊಂಡಿದ್ದೇನೆ. ತಾವು ಮುಖ್ಯಮಂತ್ರಿಗಳಾಗಿದ್ದಾಗ ಇಂತಹ ಅನೇಕ ಸಮ್ಮೇಳನಗಳನ್ನು ಉದ್ಘಾಟಿಸುವ ಅವಕಾಶ ಸಿಕ್ಕಿತು. ಇದು ನನಗೆ ತೃಪ್ತಿ ನೀಡಿದೆ. ನನಗೆ ನಿಮ್ಮೆಲ್ಲರ ಮೇಲೆ ಆತ್ಮವಿಶ್ವಾಸವಿದೆ ಎಂದು ಅವರು ಹೇಳಿದರು.ಇದು ಉತ್ತರ ಕನರ್ಾಟಕ, ಅದು ದಕ್ಷಿಣ ಕನರ್ಾಟಕ ಎನ್ನುವ ಭಾವನೆ ನಮ್ಮಲ್ಲಿ ಇರಬಾರದು. ಅಖಂಡ ಕನರ್ಾಟಕ ಒಡೆಯುವ ಕನಸು ಬಿತ್ತುವುದನ್ನು ನಾವೆಲ್ಲರೂ ಒಕ್ಕೋರಲಿನಿಂದ ಖಂಡಿಸಬೇಕು ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಹಿರಿಯ ಸಾಹಿತಿ, ನಾಡೋಜ್ ಚೆನ್ನವೀರ ಕಣವಿ, ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷರಾದ ಡಾ.ಚಂದ್ರಶೇಖರ ಕಂಬಾರ, ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳಾದ ಡಾ.ಮಲ್ಲಿಕಾ ಘಂಟಿ, ಕಸಾಪ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ, ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್, ಕಸಾಪ ಜಿಲ್ಲಾಧ್ಯಕ್ಷರಾದ ಲಿಂಗಾರಾಜ ಅಂಗಡಿ ಹಾಗೂ ಇತರರು ಇದ್ದರು.