ಕೇಂದ್ರ ಕಾರಾಗೃಹದಲ್ಲಿ ಗಣರಾಜ್ಯೋತ್ಸವ ಆಚರಣೆ
ಬೆಳಗಾವಿ 28: ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ 76ನೇ ಗಣರಾಜ್ಯ ದಿನಾಚರಣೆಯನ್ನು ದಿ. 26ರಂದು ಆಚರಿಸಲಾಯಿತು. ಅಂದು ಬೆಳಿಗ್ಗೆ 8ಗಂಟೆಗೆ ಕಾರಾಗೃಹದ ಹೊರಾಂಗಣದಲ್ಲಿ ಅಧೀಕ್ಷ ವಿ. ಕೃಷ್ಣಮೂರ್ತಿಯವರಿಂದ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ಕಾರಾಗೃಹ ಹಾಗೂ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಯವರಿಂದ ಆಕರ್ಷಕ ಪರೇಡ್ ಜರುಗಿತು. ಒಳಾಂಗಣದಲ್ಲಿ ಕಾರಾಗೃಹದ ಹಿರಿಯ ಶಿಕ್ಷಾಬಂಧಿಯಿಂದ ಧ್ವಜಾರೋಹಣ ನೆರವೇರಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ವಿ. ಕೃಷ್ಣಮೂರ್ತಿ ಮಾತನಾಡಿ ಗಣರಾಜ್ಯೋತ್ಸವ ಒಂದು ರಾಷ್ಟ್ರೀಯ ಹಬ್ಬವಾಗಿದ್ದು ಈ ಹಬ್ಬವನ್ನು ಯಾವುದೇ ಜಾತಿ, ಮತ, ಧರ್ಮ ಎನ್ನದೆ ಎಲ್ಲರೂ ಒಗ್ಗಟ್ಟಿನಿಂದ ಆಚರಿಸಲಾಗುತ್ತಿದೆ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ದೇಶವು ಮುನ್ನಡೆಸಲು ಒಂದು ಶಾಸನದ ಅವಶ್ಯಕತೆ ಇತ್ತು. ಆಗ ಭಾರತ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಇವರು ಭಾರತದ ಸಂವಿಧಾನವನ್ನು ಎರಡು ವರ್ಷ ಹನ್ನೊಂದು ತಿಂಗಳು ಹದಿನೆಂಟು ದಿನಗಳ ಕಾಲ ರಚಿಸಿ 1949 ನವೆಂಬರ 26ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು. ನಂತರ ಜನವರಿ 26, 1950 ಜಾರಿಗೆ ಬಂದಿತು. ಅಂದಿನಿಂದ ಪ್ರತಿ ವರ್ಷ ಜನೇವರಿ 26ರಂದು ಗಣರಾಜ್ಯದ ದಿನವನ್ನು ಆಚರಿಸುತ್ತಿದ್ದೇವೆ. ಭಾರತದ ಸಂವಿಧಾನವು ದೇಶದ ಮೂಲ ಭೂತ ಕಾನೂನಿನಂತೆ ನಮ್ಮ ದೇಶದ ಮೌಲ್ಯಗಳು, ತತ್ವಗಳು ಮತ್ತು ಆಡಳಿತದ ಚೌಕಟ್ಟನ್ನು ಒಳಗೊಂಡಿದೆ. ಇದು ಸರ್ವೋಚ್ಚ ಕಾನೂನಾಗಿ ಕಾರ್ಯನಿರ್ವಹಿಸುತ್ತಿದೆ. ಸಂವಿಧಾನವು ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳನ್ನು ಹಾಗೂ ಕರ್ತವ್ಯಗಳನ್ನು ನೀಡಿದೆ. ಭಾರತದ ಪ್ರಜೆಗಳಾದ ನಾವು ಪ್ರತಿಯೊಬ್ಬರು ಸಂವಿಧಾನವನ್ನು ಗೌರವಿಸಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ ಕಾರಾಗೃಹದಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಪ್ರಶಂಸನೀಯ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಗಣರಾಜ್ಯೋತ್ಸವ ನಿಮಿತ್ಯ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಬಂಧಿಗಳಿಗೆ ಬಹುಮಾನಗಳನ್ನು ಹಾಗೂ ಸಿಹಿಯನ್ನು ವಿತರಿಸಲಾಯಿತು. ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಪೋಲಿಸ ನೀರೀಕ್ಷಕ ಸ್ವಪ್ನಾ, ಆಡಳಿತಾಧಿಕಾರಿ ಬಿ.ಎಸ್. ಪೂಜಾರಿ, ವೈದ್ಯಾಧಿಕಾರಿ ಡಾ. ಸರಸ್ವತಿ, ಡಾ. ಶಾಲದಾರ ಉಪಸ್ಥಿತರಿದ್ದರು. ಶಿಕ್ಷಕ ಎಸ್.ಎಸ್ ಯಾದಗೂಡೆ ನಿರೂಪಿಸಿ ವಂದಿಸಿದರು.