ಸಂಶೋಧನೆ ವ್ಯವಸ್ಥಿತ ರೀತಿಯ ಕ್ರಮಬದ್ಧವಾದ ಜ್ಞಾನದ ಹುಡುಕಾಟ- ಡಾ. ಸುಪ್ರಿಯಾ
ಧಾರವಾಡ 04: ಶಂಬಾ ಜೋಶಿಯವರ ಕೃತಿಗಳು ಸಾಂಸ್ಕೃತಿಕ ಸಂಶೋಧನಾ ಕೃತಿಗಳಾಗಿದ್ದು, ಅವು ವಿಶಿಷ್ಟ ಆಲೋಚನಾ ಕ್ರಮದಿಂದ ಕೂಡಿದ್ದಾಗಿವೆ. ಸಂಶೋಧನೆ ಎನ್ನುವುದು ವ್ಯವಸ್ಥಿತ ರೀತಿಯ ಕ್ರಮಬದ್ಧವಾದ ಜ್ಞಾನದ ಹುಡುಕಾಟ ಎಂದು ಹುಬ್ಬಳ್ಳಿಯ ಎಸ್.ಜೆ.ಎಂ.ವ್ಹಿ.ಎಸ್. ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸುಪ್ರಿಯಾ ಮಲಶೆಟ್ಟಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಡಾ. ಶಂಬಾ ಜೋಶಿ ದತ್ತಿ ಕನ್ನಡ ಭಾಷಾ ಸಂಶೋಧನಾ ದಿನದ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಶಂಬಾ ಅವರ ‘ಯಕ್ಷಪ್ರಶ್ನೆ ಮತ್ತು ಅಗ್ನಿ ವಿದ್ಯೆ’ 2 ಪುಸ್ತಕಗಳನ್ನು ಬಿಡುಗಡೆ ಮಾಡಿ, ‘ಭಾಷಾ ಸಂಶೋಧನೆಯ ಪ್ರಾಮುಖ್ಯತೆ ಮತ್ತು ಶಂ.ಬಾ. ಸಂಶೋಧನೆಯ ಪ್ರಸ್ತುತತೆ’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಬಹುಶಿಸ್ತಿಯ ಸಾಂಸ್ಕೃತಿಯ ಹಿನ್ನೆಲೆಯ ಅಗಾಧ ಪಾಂಡಿತ್ಯ ಹೊಂದಿದ್ದ ಶಂಬಾ ಅವರು ತಮ್ಮ ಜೀವನದ ಬಹುಭಾಗವನ್ನು ಸಂಶೋಧನೆಯಲ್ಲಿ ಕಳೆದು, ವಿಭಿನ್ನ ನೆಲೆಗಳಲ್ಲಿ ಸತ್ಯದ ಶೋಧನೆಯನ್ನು ಮಾಡಿ ಅನನ್ಯ ಮತ್ತು ಅಗಾಧವಾದ ಕೊಡುಗೆಯನ್ನು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ನೀಡಿದ್ದಾರೆ. ಭಾಷಿಕ ನೆಲೆಯಲ್ಲಿ ಸ್ಥಳ ನಾಮಗಳನ್ನು ವಿಶಿಷ್ಟ ರೀತಿಯಲ್ಲಿ ಸಂಶೋಧಿಸಿದ ಒಬ್ಬ ಸಂಸ್ಕೃತಿಯ ಸಂಶೋಧಕರು ಹಾಗೂ ಚಿಂತನಶೀಲರಾಗಿದ್ದರು ಎಂದರು.
ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಶಂಬಾ ಅವರು ಕನ್ನಡ ನಾಡಿಗೆ ನೀಡಿದ ಕೊಡುಗೆ ಅವಿಸ್ಮರಣೀಯ ಎಂದರು.
ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಮಾನವ ಧರ್ಮ ಪ್ರತಿಷ್ಠಾನದ ಕಾರ್ಯದರ್ಶಿ ವ್ಹಿ.ಜಿ. ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ರಾಮಚಂದ್ರ ಗೆದ್ದೆಣ್ಣವರ, ಎಸ್.ವಾಯ್. ಛಲವಾದಿ, ಎಸ್.ಕೆ. ಕುಂದರಗಿ, ಚೇತನಾ ವ್ಹಿ. ಭಟ್, ಸತೀಶ ಛಟ್ಟಿ, ನಾಗರಾಜ ಹಾಗಲಕಿ, ಎಲ್.ಸಿ. ಬಕ್ಕಾಯಿ, ಜೋಶಿ, ಗಜಾನನ ಸೇರಿದಂತೆ ಜೋಶಿ ಬಂಧುಗಳು ಉಪಸ್ಥಿತರಿದ್ದರು.