ವಿದ್ಯಾರ್ಥಿನಿಯರು ಮತ್ತು ಮಹಿಳೆಯರನ್ನು ಗೌರವಿಸಿ - ಚೈತನ್ಯ ಟೆಕ್ನೋ ಶಾಲೆಯಿಂದ ರ್ಯಾಲಿ
ಬಳ್ಳಾರಿ 04: ಇತ್ತೀಚೆಗೆ ಮೊಬೈಲ್ ಹಾವಳಿಯಿಂದ ವಿದ್ಯಾರ್ಥಿನಿಯರು ಮತ್ತು ಮಹಿಳೆಯರನ್ನು ಅಗೌರವವಾಗಿ ನಡೆಸಿಕೊಳ್ಳಲಾಗುತ್ತಿದ್ದು ಸೃಷ್ಟಿಯ ಸಂಕೇತವಾದ, ಮಾತೃ ಸ್ವರೂಪಿಣಿಯಾದ ಮಹಿಳೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕೆಂಬ ಸಂದೇಶ ಸಾರಲು ಶ್ರೀ ಚೈತನ್ಯ ಟೆಕ್ನೋ ಶಾಲೆಯಿಂದ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಶ್ರೀ ಚೈತನ್ಯ ಟೆಕ್ನೋ ಶಾಲೆಯ ಸಿಇಓ ಸುನಿಲ್ ಕುಮಾರ್ ಜಿ., ಉತ್ತರ ಕರ್ನಾಟಕದ ವ್ಯವಸ್ಥಾಪಕ ಹರಿ ಕೃಷ್ಣ ಇವರ ನೇತೃತ್ವದಲ್ಲಿ ಅವಂಬಾವಿಯ ಶಾಲೆಯಿಂದ ಬೆಳಿಗ್ಗೆ 8-30ಕ್ಕೆ ರ್ಯಾಲಿ ನಡೆಸಿದರು. ಜಿಲ್ಲಾ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ವೃತ್ತ ನೀರೀಕ್ಷಕರು ಮತ್ತು ಸಿಬ್ಬಂದಿಗಳು ರ್ಯಾಲಿಗೆ ಚಾಲನೆ ನೀಡಿದರು. ಮಾಜಿ ಸಚಿವರಾದ ಬಿ.ಶ್ರೀರಾಮುಲು ಹಾಗೂ ಜಿ.ಜನಾರ್ದನರೆಡ್ಡಿ ಅವರ ಸಿರುಗುಪ್ಪ ನಿವಾಸದ ಮುಂಭಾಗದ ಪ್ರಮುಖ ರಸ್ತೆಯ ಗುಂಟ ನಗರದ ವಾಲ್ಮೀಕಿ ವೃತ್ತದ ವರೆಗೆ ಸಾಗಿದ ವಿದ್ಯಾರ್ಥಿಗಳು ದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಹಾಗೂ ಶೋಷಣೆ ತಡೆಗಟ್ಟಲು ಉದ್ಘೋಷಣೆಗಳನ್ನು ಕೂಗಿದರು. ಶಾಲಾ, ಕಾಲೇಜು ಮತ್ತು ಕುಟುಂಬಗಳಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ, ಸುರಕ್ಷತೆ ನೀಡಲು ನಾಗರಿಕ ಸಮುದಾಯ ಮುಂದಾಗಬೇಕೆಂಬ ನಾಮಫಲಕಗಳನ್ನು ಹಿಡಿದು ಶಾಲಾ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು. ಶಾಲೆಯ ಪ್ರಾಂಶುಪಾಲರಾದ ಅವರ ಮಾರ್ಗದರ್ಶನದಲ್ಲಿ ‘ಸ್ಮಾರ್ಟ್ ಲಿವಿಂಗ್ ಪ್ರೋಗ್ರಾಂ’ ಅಡಿ ‘ಭೇಟಿ ಸಮ್ಮಾನ್’ ಎನ್ನುವ ಕಾರ್ಯಕ್ರಮ ಆಯೋಜಿಸಿದ್ದು ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ, ಗೌರವಗಳು ಕ್ಷೀಣಿಸಬಾರದು. ಮಹಿಳೆಯರ ಮೇಲೆ ವಿಕೃತರ ಕಾಕದೃಷ್ಟಿ ತಪ್ಪಿಸಲು ಸಾರ್ವಜನಿಕವಾಗಿ ಆಂದೋಲನ ರೂಪಿಸಬೇಕು ಎನ್ನುವ ಸಂದೇಶ ಸಾರಲಾಯಿತು. ವಾಲ್ಮೀಕಿ ವೃತ್ತದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಭಾರತದ ನಾರಿಯರು ಜಗತ್ತಿಗೆ ಕಳಶಪ್ರಾಯರು. ಅವರನ್ನು ಪೂಜನೀಯ ಭಾವದಿಂದ ನೋಡುವುದು ಈ ದೇಶದ ಸಂಸ್ಕೃತಿ. ಅವರ ಮನಸ್ಸನ್ನು ಘಾಸಿಗೊಳಿಸದೇ, ದೇಹವನ್ನು ಛಿದ್ರಗೊಳಿಸದೇ ತಾಯಿಯಾಗಿ, ಸೋದರಿಯಾಗಿ, ಮಗಳಾಗಿ ಆಕೆಯನ್ನು ರಕ್ಷಣೆ ಮಾಡುವುದು ಎಲ್ಲರ ಹೊಣೆಯಾಗಿದೆ ಎನ್ನುವ ಕಿರು ನೃತ್ಯ ರೂಪಕ ಪ್ರದರ್ಶಿಸಿದರು. ಇದೇ ವೇಳೆ ಶಾಲಾ ಮುಖ್ಯಸ್ಥರು ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕಾರಿಗಳು ನೃತ್ಯರೂಪಕದ ಮೂಲಕ ‘ಹೆಣ್ಣುಮಕ್ಕಳ ರಕ್ಷಣೆ’ ಜಾಗೃತಿ ಮೂಡಿಸಿದ ವಿದ್ಯಾರ್ಥಿನಿಯರಿಗೆ ‘ಗುಲಾಬಿ ಹೂ’ ನೀಡುವ ಮೂಲಕ ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ಸಹ ಶಿಕ್ಷಕರು, ಆಡಳಿತ ಮಂಡಳಿ ಪದಾಧಿಕಾರಿಗಳು, ಸಂಚಾರಿ ಪೊಲೀಸರು, ನಾಗರಿಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು