ಜೀತ ಪದ್ಧತಿ ಒಂದು ಶಾಪ; ಇದರ ವಿಮೋಚನೆಗೆ ಎಲ್ಲರೂ ಶ್ರಮಿಸಬೇಕು: -ಹಿರಿಯ ಸಿವಿಲ್ ನ್ಯಾಯಧೀಶ

Serfdom is a curse; All should strive for its emancipation: -Senior Civil Judge

ಜೀತ ಪದ್ಧತಿ ಒಂದು ಶಾಪ; ಇದರ ವಿಮೋಚನೆಗೆ ಎಲ್ಲರೂ ಶ್ರಮಿಸಬೇಕು:  -ಹಿರಿಯ ಸಿವಿಲ್ ನ್ಯಾಯಧೀಶ  

ಧಾರವಾಡ 18:  ಜೀತ ಪದ್ಧತಿ ಒಂದು ಶಾಪ. ಇದರ ವಿಮೋಚನೆಗೆ ಸರ್ಕಾರ ಹಲವಾರು ಕಾನೂನುಗಳನ್ನು ರೂಪಿಸಿದೆ. ಪ್ರತಿ ಹಂತದಲ್ಲಿ ಅಧಿಕಾರಿಗಳು ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಸರಿಯಾದ ರೀತಿಯಲ್ಲಿ ಕಾನೂನಾತ್ಮಕವಾಗಿ ನಿಭಾಯಿಸುವ ಮೂಲಕ ಜೀತ ಮುಕ್ತ ಸಮಾಜವನ್ನು ಸೃಷ್ಠಿಸಲು ಕಾರ್ಯಪ್ರವೃತ್ತರಾಗಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್‌.ದೊಡ್ಡಮನಿ ಅವರು ಹೇಳಿದರು.  ಅವರು ಇಂದು (ಫೆ.18) ಮಧ್ಯಾಹ್ನ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜೀತ ಪದ್ಧತಿ ನಿರ್ಮೂಲನಾ ದಿನದ ಅಂಗವಾಗಿ ಆಯೋಜಿಸಿದ್ದ ಜೀತ ಪದ್ಧತಿ ನಿಷೇಧ ಕಾರ್ಯಾಗಾರವನ್ನು ಉದ್ಘಾಟಿಸಿ, ಮಾತನಾಡಿದರು.ಜೀತ ಪದ್ಧತಿ ಅನ್ನೋದು ಬರೀ ಕೇವಲ ದೇಶಕ್ಕೆ ತಟ್ಟಿದ ಶಾಪ ಅಲ್ಲ. ಪ್ರಪಂಚದ ಎಲ್ಲಾ ದೇಶಗಳಲ್ಲಿ ಬೇರೆ ಬೇರೆ ಸ್ವರೂಪಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಜೀತ ಪದ್ಧತಿ ಅಸ್ತಿತ್ವದಲ್ಲಿದೆ. ಇದನ್ನು ಕಿತ್ತು ಹಾಕಲು ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕಾನೂನುಗಳನ್ನು ರಚಿಸಿ, ಜಾರಿಗೊಳಿಸಲಾಗಿದೆ. ಭಾರತದಲ್ಲಿಯೂ ಜೀತ ಪದ್ಧತಿ ಆಚರಣೆ ಒಂದು ಅಪರಾಧವಾಗಿದೆ ಎಂದು ಅವರು ಹೇಳಿದರು.  ಗ್ರಾಮ ಪಂಚಾಯತ ಮಟ್ಟದಿಂದ ಹಿಡಿದು ಜಿಲ್ಲಾಮಟ್ಟದವರೆಗೆ ಎಲ್ಲ ಹಂತದ ಅಧಿಕಾರಿಗಳಿಗೆ ಅಧಿಸೂಚನೆಯಡಿ ನಿಗಧಿಪಡಿಸಿರುವ ಕರ್ತವ್ಯಗಳ ಕುರಿತು ಮತ್ತು ಜೀತ ಕಾರ್ಮಿಕ ಪದ್ಧತಿ (ರದ್ಧತಿ) ಕಾಯ್ದೆ-1976, ಜೀತ ಪದ್ಧತಿಯ ವ್ಯಾಖ್ಯಾನ, ಜೀತ ಕಾರ್ಮಿಕ ಪದ್ಧತಿಗೆ ಒತ್ತಾಯಿಸುವವರ ವಿರುದ್ಧ ಕಾಯ್ದೆ, ಜೀತ ವಿಮುಕ್ತರ ಪುನರ್ವಸತಿ ಯೋಜನೆಗಳ ಬಗ್ಗೆ ಸರಿಯಾದ ತರಬೇತಿ ಮತ್ತು ಮಾಹಿತಿ ಹೊಂದಿರಬೇಕು. ಜೀತ ಕಾರ್ಮಿಕರನ್ನು ಗುರುತಿಸುವಿಕೆ ಹಾಗೂ ರಕ್ಷಣೆ ಮತ್ತು ಪುನರ್ವಸತಿ ಕುರಿತಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸಿರುವ ಸುತ್ತೋಲೆ, ನಿರ್ದೇಶನಗಳನ್ನು ಪಾಲಿಸಬೇಕೆಂದು ಅವರು ಹೇಳಿದರು.  ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಜೀತ ಕಾರ್ಮಿಕ ಪದ್ದತಿ (ನಿರ್ಮೂಲನಾ) ನಿಯಮಗಳು 1976 ರ ಕುರಿತು ಮಾಹಿತಿ ನೀಡಿ, ಪ್ರಸ್ತುತ ಜೀತ ವ್ಯವಸ್ಥೆಯ ಬದಲಾದ ವಾಸ್ತವ ಚಿತ್ರಣ ಕುರಿತು ವಿವರಿಸಿದರು.  ಸರಕಾರಿ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಬೇರೆಯವರಿಗೆ ವರ್ಗಾಹಿಸದೇ ತಾವೇ ನಿರ್ವಹಿಸಬೇಕು. ಇದು ನಮಗೆ ಬರುವುದಿಲ್ಲ, ಇದು ನಮಗೆ ಅನ್ವಯಿಸುವುದಿಲ್ಲ ಎಂದು ಯಾರು ಅಂದುಕೊಳ್ಳಬಾರದು. ಸರಕಾರಿ ನೌಕರನಾದ ಪ್ರತಿಯೊಬ್ಬರು ಜೀತಪದ್ಧತಿಯನ್ನು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಮ್ಮ ಜಿಲ್ಲೆಯಲ್ಲಿ ಜೀತ ಪದ್ಧತಿ ಕಂಡು ಬಂದರೆ, ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ದೂರು ಸಲ್ಲಿಸಬೇಕು ಎಂದು  ಸಿಇಓ ಅವರು ಹೇಳಿದರು.   ಕಾರ್ಯಾಗಾರದಲ್ಲಿ ಜೀತ ವಿಮುಕ್ತತತೆಯ ಪ್ರತಿಜ್ಞೆಯನ್ನು ಅಪರ ಜಿಲ್ಲಾಧಿಕಾರಿ ಗೀತಾ ಸಿ. ಡಿ. ಅವರು ಬೋಧಿಸಿದರು. ನಂತರ ಮಾತನಾಡಿ, ಜೀತ ಪದ್ಧತಿ ಎಷ್ಟು ದಿವಸ ಇರುತ್ತದೆ ಅಷ್ಟರವರೆಗೆ ಅಸಮಾನತೆ ಇರುತ್ತದೆ. ಇದನ್ನು ಹೋಗಲಾಡಿಸಲು ಸಮಾಜದ ಪ್ರತಿಯೊಬ್ಬರು ಪ್ರತಿಜ್ಞೆ ಮಾಡಬೇಕೆಂದು ಹೇಳಿದರು.   ಕರ್ನಾಟಕದ ಮುಕ್ತಿ ಅಲಯನ್ಸ್‌ ಶರ್ಲಿನ್ ಆ್ಯಂಟೋನಿ ಮತ್ತು ವೇಣುಗೋಪಾಲ್ ಹಾಗೂ ಧಾರವಾಡ ಕಿಡ್ಸ್‌ ಸೇವಾ ಸಂಸ್ಥೆಯ ನಿರ್ದೇಶಕ ಅಶೋಕ ಯರಗಟ್ಟಿ ಅವರು ಜೀತ ಪದ್ಧತಿ ನಿಷೇಧ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು. ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಿ.ಎಸ್‌. ಮೂಗನೂರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರವಾಡ ತಹಶೀಲ್ದಾರ ಡಾ. ಡಿ.ಎಚ್‌.ಹೂಗಾರ ಸ್ವಾಗತಿಸಿದರು. ಕಾರ್ಮಿಕ ಅಧಿಕಾರಿ ಅಕ್ಬರ ಮುಲ್ಲಾ ವಂದಿಸಿದರು. ಕಾರ್ಯಕ್ರಮವನ್ನು ರಾಜಶೇಖರಗೌಡ ಕಂಠೆಪ್ಪಗೌಡರ ನಿರ್ವಹಿಸಿದರು.    ಸಭೆಯಲ್ಲಿ ಅಧಿಕಾರಿಗಳಾದ ಮಾರಿಕಾಂಬ ಹುಲಕೋಟಿ, ಕೆ. ಶ್ರೀಧರ, ಅಶೋಕ ಒಡೆಯರ್, ಅಕ್ರಮ ಅಲ್ಲಾಪೂರ, ರಜನಿ ಹಿರೇಮಠ, ಮೀನಾಕ್ಷಿ, ಭುವನೇಶ್ವರಿ ಕೋಟಿಮಠ, ಗುರು ಸುಣಗಾರ, ಬಸವರಾಜ್ ಪಂಚಾಕ್ಷರಿಮಠ ಹಾಗೂ ಕಾರ್ಮಿಕ, ಪೊಲೀಸ್, ಕಂದಾಯ, ಪಂಚಾಯತ ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲೂಕ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.