ಸಿದ್ಧಗಂಗಾ ಶ್ರೀಗಳಿಗೆ ಮರಣೋತ್ತರ ಭಾರತರತ್ನ ಬರಲಿ

ಲೋಕದರ್ಶನ ವರದಿ

ಧಾರವಾಡ 22 : ಸರ್ವ ಸಮಾಜಗಳ ಪ್ರೀತಿ-ಗೌರವಗಳಿಗೆ ಪಾತ್ರರಾಗಿರುವ ಸಿದ್ಧಗಂಗಾ ಕ್ಷೇತ್ರದ ಲಿಂಗೈಕ್ಯ ಶ್ರೀಗಳಾದ ಪೂಜ್ಯ ಡಾ.ಶಿವಕುಮಾರ ಮಹಾಸ್ವಾಮಿಗಳಿಗೆ ಕನ್ನಡ ನಾಡಿನ ಸಮಸ್ತ ಭಕ್ತ ಸಂಕುಲದ ಅಪೇಕ್ಷೆಯಂತೆ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತರತ್ನ ಮರಣೋತ್ತರ ಬರಬೇಕೆಂದು ಇಲ್ಲಿಯ ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಅಶೋಕ ದೊಡಮನಿ ಪ್ರತಿಪಾದಿಸಿದರು. 

ಇಲ್ಲಿಯ ನೆಹರು ಮಾರುಕಟ್ಟೆಯಲ್ಲಿ ಮಂಗಳವಾರ ಕಿರಾಣಿ ವರ್ತಕರ ಸಂಘ ಆಯೋಜಿಸಿದ್ದ ಪೂಜ್ಯಪಾದರ ಭಾವಪೂರ್ಣ ಶೃದ್ಧಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು.

   ಲಕ್ಷಾಂತರ ಬಡ ವಿದ್ಯಾಥರ್ಿಗಳಿಗೆ ತಮ್ಮ ಶ್ರೀಮಠದಲ್ಲಿ ಆಶ್ರಯ ನೀಡಿ ಬೆಳಕು ನೀಡಿದ್ದ ಶ್ರೀಗಳು ಇಂದು ಎಲ್ಲರ ಮನದಲ್ಲಿ ಶಾಶ್ವತವಾಗಿದ್ದಾರೆ ಎಂದೂ ಅವರು ಹೇಳಿದರು. 

ಹಿರಿಯ ವರ್ತಕ ರವೀಂದ್ರ ವಸ್ತ್ರದ ಮಾತನಾಡಿ, ಅನ್ನ ದಾಸೋಹ, ಜ್ಞಾನ ದಾಸೋಹ ಮತ್ತು ಆಧ್ಯಾತ್ಮ ದಾಸೋಹಗಳನ್ನು ಮುಕ್ತವಾಗಿ ನೆರವೇರಿಸಿಕೊಂಡು ಬಂದು ತ್ರಿವಿಧ ದಾಸೋಹಿಯಾಗಿ ಶ್ರೇಷ್ಠ ಶಿವಯೋಗಿಗಳಾಗಿದ್ದ ಡಾ.ಶಿವಕುಮಾರ ಗುರುವರೇಣ್ಯರು ನಿತ್ಯವೂ ಲಿಂಗಪೂಜಾ ತಪೋನುಷ್ಠಾನ ಹಾಗೂ ಕಾಯಕ ಪ್ರಜ್ಞೆಯಿಂದ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ್ದರು. ಪರಮಪೂಜ್ಯರ ಅಗಲಿಕೆಯಿಂದ ನಾಡು ಬಡವಾಗಿದೆ ಎಂದರು. 

ವರ್ತಕ ಉದಯ ಯಂಡಿಗೇರಿ ಮಾತನಾಡಿ, ಆದರ್ಶ ಸನ್ಯಾಸತ್ವದ ಧೀಮಂತ ವ್ಯಕ್ತಿತ್ವವನ್ನು ಸಿದ್ಧಗಂಗಾ ಶ್ರೀಗಳು ಸಂಪಾದಿಸಿ ಅವರೊಬ್ಬ ಯುಗಪುರುಷರಾಗಿದ್ದಾರೆ ಎಂದರು. 

ಪುಷ್ಪ ನಮನ : ಶೃದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದ ಕಿರಾಣಿ ವರ್ತಕರ ಸಂಘದ ಪದಾಧಿಕಾರಿಗಳಾದ ರವೀಂದ್ರ ವಸ್ತ್ರದ, ಅಶೋಕ ದೊಡಮನಿ, ವ್ಹಿ. ಎಸ್. ಹರಿಹರ, ಬಸವರಾಜ ವಸ್ತ್ರದ, ಮಹಾಂತೇಶ ಪಟ್ಟಣಶೆಟ್ಟಿ, ಎಸ್.ಪಿ. ಕೋಟೂರ, ಹಾಲಯ್ಯ ಹಂಗರಗಿ, ಜಗದೀಶ ಶಹಾ, ಉದಯ ಯಂಡಿಗೇರಿ, ಭರತ್ ಶಹಾ, ಎಸ್.ಎನ್. ಹಂಪಣ್ಣವರ, ಮುಖೇಶ ಜೈನ್, ವಿಶ್ವನಾಥ ವಸ್ತ್ರದ, ವೆಂಕಟೇಶ ದೊಡಮನಿ, ವಿಶ್ವನಾಥ ಯರಿಸೀಮಿ ಅವರು ಅಗಲಿದ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪೂಜ್ಯರ ಗೌರವಾರ್ಥ ಎರಡು ನಿಮಿಷಗಳ ಮೌನ ಪ್ರಾರ್ಥನೆ ನಡೆಸಿದರು.