ಬೆಂಗಳೂರು 9: ನನ್ನನ್ನು ಸೇರಿದಂತೆ ಪಕ್ಷದ ಹಲವು ನಾಯಕರು ಹಾಗೂ ರಾಜ್ಯದ ಜನತೆ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಿದ್ದಾರಾದರೂ ಅದೀಗ ಸಾಧ್ಯವಿಲ್ಲ ಎಂದು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಯುಎನ್ಐ ಕನ್ನಡ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ, ಹೈಕಮಾಂಡ್ ಇರುವ ಪಕ್ಷ. ರಾಹುಲ್ ಗಾಂಧಿ ನಮ್ಮ ಪಕ್ಷದ ನಾಯಕರು. ರಾಹುಲ್ ಗಾಂಧಿ 5 ವರ್ಷಗಳ ಕಾಲ ಕುಮಾರಸ್ವಾಮಿ ಅವರೇ ಬೇಷರತ್ತು ಮುಖ್ಯಮಂತ್ರಿ ಎಂದು ಬರೆದುಕೊಟ್ಟಿರುವುದರಿಂದ ಸಿದ್ದರಾಮಯ್ಯ ಅವರು ಈಗ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. 5 ವರ್ಷಗಳ ಬಳಿಕ ಮತ್ತೆ ಚುನಾವಣೆಯಾಗಲಿದ್ದು, ಆಗ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅವರು ಭವಿಷ್ಯ ನುಡಿದರು.
ಮೇ 23 ರಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ರಾಜ್ಯದ 28 ಸ್ಥಾನಗಳ ಪೈಕಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಒಕ್ಕೂಟ 22 ಸ್ಥಾನಗಳನ್ನು ಗೆಲ್ಲಲಿದೆ ಎಂದು ಜಮೀರ್ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.
ನೆಹರು ಕುಟುಂಬ ಭ್ರಷ್ಟಾಚಾರಿ ಕುಟುಂಬ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಕಿಡಿಕಾರಿದ ಜಮೀರ್ ಅಹ್ಮದ್, ಕಾಂಗ್ರೆಸ್ ಪಕ್ಷ ದೇಶದಲ್ಲಿ ಇನ್ನೂ ಉಳಿದಿದೆ ಎಂದರೆ ಅದಕ್ಕೆ ನೆಹರು ಕುಟುಂಬವೇ ಕಾರಣ. ನೆಹರು ಕುಟುಂಬವನ್ನು ಭ್ರಷ್ಟಾಚಾರ ಎನ್ನುವ ಮೊದಲು ಮೋದಿ ಅವರು ತಮ್ಮ ಹಿಂದಿನ ಯೋಗ್ಯತೆಯನ್ನು ಅವಲೋಕಿಸಬೇಕು.
ಪ್ರಧಾನಿಯಾಗುವ ಮೊದಲು ಮೋದಿ ಹೇಗಿದ್ದರು ಈಗ ಹೇಗೆ ಬದಲಾಗಿದ್ದಾರೆ ? ಭಾರತದಲ್ಲಿ ದುಬಾರಿ ಬೆಲೆಬಾಳುವ ಸೂಟನ್ನು ಧರಿಸುವ ಪ್ರಧಾನಿ ಎಂದರೆ ಅದು ಮೋದಿ. ರಾಹುಲ್ ಗಾಂಧಿ 3-4 ಸಾವಿರ ರೂ. ಬೆಲೆ ಬಾಳುವ ಪೈಜಾಮ ಧರಿಸಿದರೆ ಮೋದಿ 10 ಲಕ್ಷ ರೂ. ಬೆಲೆಬಾಳುವ ದುಬಾರಿ ಸೂಟನ್ನು ಧರಿಸುತ್ತಾರೆ. ಪ್ರತಿದಿನ 4 ಬಾರಿ ಉಡುಪು ಬದಲಾಯಿಸುವ ದುಬಾರಿ ವ್ಯಕ್ತಿ ಮೋದಿ. ಪ್ರಿಯಾಂಕ ಗಾಂಧಿಯಾಗಲೀ, ಸೋನಿಯಾಗಾಂಧಿಯಾಗಲೀ 10 ಲಕ್ಷ ರೂ. ಬೆಲೆಬಾಳುವ ಸೀರೆ ಧರಿಸುವುದಿಲ್ಲ ಎಂದು ತಿರುಗೇಟು ನೀಡಿದರು.