ಜ್ಞಾನ ಸಾಗರವಾಗಿದ್ದರು ಸಿದ್ಧೇಶ್ವರ ಅಪ್ಪಾಜಿ: ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ
ವಿಜಯಪುರ : ವಿದ್ಯೆಗೆ ಸಮನಾದಂತಹ ಮಿತ್ರನಿಲ್ಲ, ರೋಗಕ್ಕೆ ಸಮನಾದ ಶತ್ರುವಿಲ್ಲ, ಧರ್ಮಕ್ಕೆ ಸಮನಾದ ಬಂಧುವಿಲ್ಲ ಅಂತೆಯೇ ಮಾತೆಗೆ ಸಮನಾದಂತಹ ದೇವರು ಇಲ್ಲ ಎನ್ನುವ ಸಾಲುಗಳಿಗೆ ಶ್ರೀ ಸಿದ್ಧೇಶ್ವರ ಅಪ್ಪಾಜಿ ಅವರು ಜೀವ ತುಂಬಿದ್ದಾರೆ ಎಂದು ಖ್ಯಾತ ಹೃದಯ ತಜ್ಞರಾದ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಹೇಳಿದರು. ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವದ 5 ನೇ ಗೋಷ್ಠಿ ‘ಮಾತೃ ಭಕ್ತಿ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂತಃಕರಣ, ಮೃದು ಸ್ವಭಾವವನ್ನು ಹೊಂದಿದ್ದ ಸಿದ್ದೇಶ್ವರ ಅಪ್ಪಾವರು ಮಾತೃ ಹೃದಯದವರಾಗಿದ್ದರು. ಮಣ್ಣಿನ ಮುದ್ದೆಯಾಗಿರುವ ಮಗುವನ್ನು ರೂಪ ನೀಡಿ ಬೆಳೆಸುವವಳು ತಾಯಿ. ಇಂದು ಆಂಗ್ಲ ಸಂಸ್ಕೃತಿ ಒಲವಿನಿಂದ ಮಕ್ಕಳಿಗೆ ಮಮ್ಮಿ ಎಂದು ಕರೆಯವುದನ್ನು ಕಲಿಸುತ್ತಿದ್ದೇವೆ. ಮಮ್ಮಿ ಎಂದರೆ, ಸತ್ತ ಹೆಣ, ನಾವು ಸತ್ತ ಹೆಣ ಎಂದು ಕರೆಯಿಸಿಕೊಳ್ಳುತ್ತಿದ್ದೆವೆ. ಅದರ ಬದಲು ಮಕ್ಕಳಿಗೆ ಭಾರತೀಯ ಸಂಸ್ಕೃತಿಯಂತೆ ಅವ್ವ-ಅಪ್ಪಾ ಎಂದು ಕರೆಯುವದನ್ನು ಕಲಿಸಬೇಕು. ಇಂದು ಮಕ್ಕಳು ಸುಳ್ಳು ಹೇಳುತ್ತಿದ್ದಾರೆ. ಕಾರಣ ಮಾತೆಯರು ತಮ್ಮ ಕರ್ತವ್ಯವನ್ನು ಮರೆಯುತ್ತಿದ್ದಾರೆ. ನಾವು ಕಲಿಸುವ ಸಂಸ್ಕೃತಿ, ಆಚಾರ-ವಿಚಾರಗಳು ನಮ್ಮ ಮಕ್ಕಳ ಭವಿಷ್ಯವನ್ನು ನಿರ್ಧರಿಸುತ್ತವೆ. ಹಾಗಾಗಿ ನಾವು ಜವಾಬ್ದಾರಿಯಿಂದ ಮಕ್ಕಳನ್ನು ಬೆಳೆಸಬೇಕು. ಮಾತೆ ಅಂದರೆ ಸೀರೆ, ಮಾತೆಯರಿಗೆ ಸೀರೆಗೆ ದೊರಕುವ ಗೌರವ ಯಾವುದಕ್ಕೂ ಸಿಗುವುದಿಲ್ಲ. ಸಿದ್ಧೇಶ್ವರ ಅಪ್ಪಾವರು ಜ್ಞಾನ ಸಾಗರ ವಿದ್ದಂತೆ. ಮಾತೆಯರಿಗೆ ಜ್ಞಾನಯೋಗಾಶ್ರಮದಲ್ಲಿ ಅತ್ಯಂತ ಗೌರವ ಸಿಗುವಂತೆ ಮಾಡಿದ್ದಾರೆ ಎಂದರು. ಮಕ್ಕಳು ಹೆಣ್ಣಾಗಲಿ ಗಂಡಾಗಲಿ, ಅವರನ್ನು ಓದಿಸಬೇಕು. ಅವರನ್ನು ಮಾರ್ಕ್ಸ ತೆಗೆಯುವ ಮಶೀನ್ ಮಾಡದೆ ಅವರಲ್ಲಿ ಜ್ಞಾನ, ಸಂಸ್ಕೃತಿ ಹಾಗೂ ಉತ್ತಮ ಗುಣಗಳನ್ನು ಬೆಳೆಸಬೇಕು. ಮಕ್ಕಳಲ್ಲಿ ತಾಳ್ಮೆ, ಆತ್ಮವಿಶ್ವಾಸವನ್ನು ಮೂಡಿಸಬೇಕು. ಮಗುವಿನ ಮೊದಲ ಹಾಸಿಗೆ ತಾಯಿಯ ಗರ್ಭ. ಮಗುವಿನ ಮೊದಲ ಗುರು, ಮೊದಲ ವೈದ್ಯೆ ತಾಯಿ, ಮಾತು ಕಲಿಸುವವಳು ಅವಳೆ, ಅಂತಹ ಹೆಣ್ಣನ್ನು ನಾವು ಸಮಾಜದ ಕಣ್ಣು ಎಂದು ಕರೆದರೆ ಜಗತ್ತು ಅತ್ಯಂತ ಸುಂದರವಾಗುತ್ತದೆ ಎಂದು ಹೇಳಿದರು. ಇಂದು ಹೆಣ್ಣುಮಕ್ಕಳು ಸಹಿತ ಕುಡಿತದ ಚಟಕ್ಕೆ ತುತ್ತಾಗುತ್ತಿದ್ದಾರೆ. ಹೆಣ್ಣು ತಾಯಿಯಾಗಿ, ಮಗಳಾಗಿ ಜಗತ್ತು ಬೆಳಗಬೇಕಾದವಳು ಈ ರೀತಿ ಕೆಟ್ಟ ಚಟಗಳಿಗೆ ಬಲಿಯಾಗದೇ ಸಂಸ್ಕಾರಯುತವಾಗಿ ಬದುಕಬೇಕು. ಸಿದ್ಧೇಶ್ವರ ಅಪ್ಪಾವರು ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ಹೇಳಿದ್ದಾರೆ. ಆದರೆ ಇದನ್ನೆ ಮಾಡಿ ಎಂದು ಯಾವತ್ತು ಒತ್ತಾಯಿಸಿಲ್ಲ. ಹಾಗಾಗಿ ನಾವು ಒಳ್ಳೆಯದನ್ನೇ ಕಲಿಯಬೇಕು, ಒಳ್ಳೆಯದನ್ನೇ ಮಾಡಬೇಕು. ಒಳ್ಳೆಯದನ್ನು ಹೇಳುವುದು ನಮ್ಮ ಧರ್ಮ ಮಾಡುವುದು ನಿಮ್ಮ ಕರ್ಮ ಜ್ಞಾನ ಯೋಗಾಶ್ರಮಕ್ಕೆ ಬಂದಿರುವ ಮಾತೆಯರು ಇಡೀ ಕರ್ನಾಟಕಕ್ಕೆ ಮಾದರಿ. ದೇಶದ ಪ್ರಧಾನ ಮಂತ್ರಿಯೊಬ್ಬರು ಸಫಾಯಿ ಕರ್ಮಚಾರಿಗಳ ಪಾದ ತೊಳೆದಿದ್ದಾರೆ ಎಂದರೆ ಅದು ನರೇಂದ್ರ ಮೋದಿ ಅವರು. ಅದು ಅವರಿಗೆ ಅವರ ತಾಯಿ ಕಲಿಸಿಕೊಟ್ಟ ಸಂಸ್ಕಾರ. ಹಾಗಾಗಿ ನಾವು ಮಾತೆಯಾಗಿ ಕೇವಲ ಎದೆಹಾಲು ಕುಡಿಸಿದರೆ ಸಾಲದು ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಒಳ್ಳೆಯ ನಡತೆ, ಗುಣಗಳನ್ನು ನೀಡಬೇಕು. ನಾವು ಇಡೀ ವಿಶ್ವಕ್ಕೆ ಮಾತೆಯಾಗುವಂತಹ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು. ಆ ಮಗು ಜಗತ್ತು ಬೆಳಗುವ ನಾಗರೀಕನಾಗಬೇಕು ಎಂದರು. ನಾನು ಕರ್ನಾಟಕದ ಮೊದಲ ಹೃದಯ ತಜ್ಞೆಯಾಗಿ ಅಮೇರಿಕಾದಿಂದ ನನಗೆ ಸಂಕಷ್ಟ ಎದುರಾಗಿತ್ತು. ಆಗ ನನ್ನ ತಾಯಿ ನನಗೆ 64 ಸಾವಿರ ರೂಪಾಯಿ ಹಣ ನೀಡಿ ಧೈರ್ಯ ತುಂಬಿದಳು. ಆ ಮಾತೃ ಋಣವನ್ನು ನಾವು ತೀರಿಸಲು ಸಾಧ್ಯವಿಲ್ಲ. ಜ್ಞಾನ ಪಡೆಯಲು ನಾವು ಹಿಮಾಲಯಕ್ಕೆ ಹೋಗುವ ಅವಶ್ಯಕತೆ ಇಲ್ಲ. ಅದು ಜ್ಞಾನ ಯೋಗಾಶ್ರಮದಲ್ಲಿಯೇ ಇದೆ. ಇಲ್ಲೇ ಪರಮಾತ್ಮನ ದರ್ಶನವಾಗುವಾಗ ನಾವು ಅಲ್ಲಿ-ಇಲ್ಲಿ ತಿರುಗುವ ಅವಶ್ಯಕತೆ ಇಲ್ಲ. ಮಹಿಳೆ ಉಪಕಾರಿ, ಹೆಣ್ಣು ಕುಟುಂಬಕ್ಕೆ ಕಣ್ಣು, ತ್ಯಾಗಮಯಿ ಯಾವುದೇ ಮಗು ಜಗತ್ತನ್ನು ಕಾಣಬೇಕಾದರೆ ತಾಯಿ ಆಶೀರ್ವಾದ, ಆರೈಕೆ ಬೇಕು ಎಂದರು. ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, 21 ನೇ ಶತಮಾನದಲ್ಲಿ ನಡೆದಾಡುವ, ಮಾತನಾಡುವ ದೇವರು ಸಿದ್ಧೇಶ್ವರ ಸ್ವಾಮೀಜಿಗಳನ್ನು ಕಂಡಿದ್ದೇವೆ. ನಾವು ಅದೃಷ್ಟವಂತರು. ಇಂದು ತಾಯಂದಿರ ಮೇಲೆ ಅತೀ ದೊಡ್ಡ ಜವಾಬ್ದಾರಿ ಇದೆ. ಅನೇಕ ರಾಷ್ಟ್ರಗಳು ನಮ್ಮ ದೇಶದ ಮೇಲೆ ದಾಳಿ ಮಾಡಿದಾಗ ನಮ್ಮ ದೇಶದಲ್ಲಿ ಇನ್ನೂ ಸಂಸ್ಕೃತಿ ಉಳಿದಿದೆ ಎಂದರೆ ಅದು ತಾಯಂದಿರಿಂದ ಎಂದು ಸಿದ್ಧೇಶ್ವರ ಅಪ್ಪನವರು ನಮಗೆ ಕಲಿಸಿದ್ದಾರೆ. ಮಕ್ಕಳು ನಮ್ಮನ್ನೇ ಅನುಕರಣೆ ಮಾಡುತ್ತವೆ. ಹಾಗಾಗಿ ನಾವು ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸಿದ್ಧೇಶ್ವರ ಅಪ್ಪನವರು ದೀಪ ಆರಿಸಿ ಹುಟ್ಟುಹಬ್ಬ ಮಾಡಬಾರದು. ಅದು ನಮ್ಮ ಸಂಸ್ಕೃತಿ ಅಲ್ಲ, ದೀಪ ಬೆಳಗಿಸುವ ಸಂಸ್ಕೃತಿ ಎಂದು ಹೇಳಿದ್ದಾರೆ ಅವರ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದರು. ಜಾನಪದ ಎಂದರೆ ಸಿದ್ದೇಶ್ವರ ಅಪ್ಪಾವರಿಗೆ ಬಹಳ ಪ್ರೀತಿ. ಬೆಳಗಾವಿಯಲ್ಲಿ 120 ಹಳ್ಳಿಗಳಿಗೂ ಪಾದಯಾತ್ರೆ ಮಾಡಿ ಅಪ್ಪಾಜಿಯವರು ಜಾನಪದದ ಮುಖಾಂತರ ನಮ್ಮ ಸಂಸ್ಕೃತಿ ಅರಿಯುವಂತೆ ಮಾಡಿದರು. ಅವರು ಇಂದು ಶಾರೀರಿಕವಾಗಿ ನಮ್ಮ ಬಳಿ ಇಲ್ಲ, ಆದರೆ ಅವರು ನಮ್ಮ ಮನಸ್ಸಿನಲ್ಲಿ ಯಾವಾಗಲೂ ಇರುತ್ತಾರೆ ಎಂದರು. ಬೀದರನ ಮತೋಶ್ರೀ ಗಂಗಾಂಬಿಕಾ ಮಾತಾ ಅಮ್ಮನವರು ಮಾತನಾಡಿ, ಸಕಲರಿಗೂ ಲೇಸನ್ನು ಬಯಸುವ ಸಂಸ್ಕೃತಿ ಯಾವುದಾದರೂ ಇದ್ದರೆ ಅದು ಶರಣ ಸಂಸ್ಕೃತಿ. ಅದರಂತೆ ಮಾತೆಗೆ ಸರ್ವ ಶ್ರೇಷ್ಠ ಸ್ಥಾನವನ್ನು ನೀಡಲಾಗಿದೆ. ತಾಯಿ ಸ್ವರ್ಗ ಇದ್ದಂತೆ, ಭೂ ಮಾತಾ, ತಾಯಿ ಮಾತಾ, ಗೋ ಮಾತಾ, ಜಲ ಮಾತಾ, ಭಾಷಾ ಮಾತಾ ಇವೆಲ್ಲವೂ ಮನುಷ್ಯನು ಬೆಳೆಯಲು ಪೋಷಕವಾಗಿರುವ ಅಂಶಗಳು. ನಾವು ಇಂದು ಭೂಮಿಯನ್ನು ಅಗೆದು ಹಾಕಿ ಪ್ರಕೃತಿಗೆ ಹಾನಿ ಮಾಡುತ್ತಿದ್ದೇವೆ. ಭೂಮಿ ರಕ್ಷಣೆ ಮಾಡಲು ನಾವು ಗಿಡಗಳನ್ನು ಹಚ್ಚಬೇಕು ಎಂದು ಸಿದ್ಧೇಶ್ವರ ಅಪ್ಪಾಜಿಯವರು ನಮಗೆ ತಿಳಿಸಿಕೊಟ್ಟಿದ್ದಾರೆ. ಗಂಗಾ ಮಾತೆ ಅದೆಷ್ಟೋ ಕೊಳಕನ್ನು ತೊಳೆದು ಹಾಕಿದ್ದಾಳೆ. ಭಾಷೆಯನ್ನು ನಾವು ಕಾಪಾಡಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ. ತಾಯಿ ಮಹಾಶಕ್ತಿ ಸ್ವರೂಪಿಣಿಯಾಗಿದ್ದಾಳೆ. 35 ಜನ ಮಹಿಳಾ ವಚನ ಸಾಹಿತಿಗಳು ಸಮಾಜವನ್ನು ಸುಧಾರಿಸುವ ಕೆಲಸ ಮಾಡಿದ್ದಾರೆ. ಮಹಿಳೆಯರಿಂದಲೇ ದೇಶದ ಸಬಲೀಕರಣಗೊಳ್ಳುತ್ತಿದೆ. ಬಾಹ್ಯಾಕಾಶ ಕ್ಷೇತ್ರ, ನ್ಯುಕ್ಲಿಯರ್ ವೆಪನ್, ಚಂದ್ರಯಾನ, ಎರಡು ನೋಬೆಲ್ ಪಡೆದವರು ಕೂಡ ಮಹಿಳೆಯೇ ಆಗಿದ್ದಾಳೆ ಅಂತಹ ಶಕ್ತಿ ತಾಯಿ ಬಳಿ ಇದೆ. ಆದರೆ ದುರಾದೃಷ್ಟ ಎಂದರೆ ತಾಯಂದಿರನ್ನು ವೃದ್ಧಾಶ್ರಮಕ್ಕೆ ತಂದು ಬಿಡುತ್ತಿದ್ದಾರೆ. ಅದು ನಿಲ್ಲಬೇಕು ಅದಕ್ಕಾಗಿ ತಾಯಂದಿರು ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು. ಇದರಿಂದ ನಾವು ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡಬುದಾಗಿದೆ ಹಾಗಾಗಿ ಸಿದ್ಧೇಶ್ವರ ಅಪ್ಪಾವರು ನಡೆದಾಡಿದ ವಿಜಯಪುರದಲ್ಲಿ ಹುಟ್ಟಿರುವ ನಾವೆಲ್ಲ ಪುಣ್ಯವಂತರು. ಅಪ್ಪಾಜಿವರು ಹಾಕಿ ಕೊಟ್ಟಿರುವ ಮಾರ್ಗದಲ್ಲಿ ನಡೆಯೋಣ ಎಂದು ಹೇಳಿದರು. ಬುರುಣಾಪುರದ ಯೋಗೇಶ್ವರಿ ಮಾತಾಜಿ ಮಾತನಾಡಿ, ಪ್ರಕೃತಿಯಲ್ಲಿ ಗಂಡು-ಹೆಣ್ಣು ಬೇಧವಿಲ್ಲ. ಆದರೆ ಮಕ್ಕಳು ಹೆಚ್ಚು ಮಾತೆಯರ ಕೈಯಲ್ಲಿ ಇರುತ್ತವೆ. ಅವರಿಗೆ ಸಂಸ್ಕಾರ, ಶಿಕ್ಷಣ, ಆಚಾರ-ವಿಚಾರಗಳನ್ನು ನಾವೇ ಕಲಿಸಬೇಕು. ತಾಯಿ ಭಕ್ತಿಯಿಂದ ದೇಶಕ್ಕೆ ಪುಣ್ಯಾತ್ಮರನ್ನು ಕೊಡಲು ಸಾಧ್ಯ. ಇವತ್ತು ದೇವರು ಎಲ್ಲಿ ಇದ್ದಾನೆ ಎಂದರೆ ಅದು ತಾಯಿಯಲ್ಲಿ ಇದ್ದಾನೆ ಎಂದರು. ಕಾಶಿ ಯಾತ್ರೆ ಮಾಡಿ ಗಂಗಾ ಸ್ನಾನ ಮಾಡುವ ಬದಲು ನಿಮ್ಮ ತಂದೆ-ತಾಯಿಗಳನ್ನು ಪೂಜೆ ಮಾಡಿ ಅವರ ಸೇವೆಯಿಂದ ನಿಮ್ಮ ಜನ್ಮ ಪಾವನವಾಗುತ್ತದೆ. ನೀವು ಮಾಡುವ ಎಲ್ಲ ಯಾತ್ರಾ ಸ್ಥಳಗಳು ನೀವು ಇದ್ದಲ್ಲಿಗೆ ಬರುತ್ತವೆ. ಸಿದ್ಧೇಶ್ವರ ಅಪ್ಪಾಜಿ ಅವರು ಆ ಸಂಸ್ಕೃತಿಯನ್ನು ನಮಗೆಲ್ಲ ತಿಳಿಸಿ ಹೋಗಿದ್ದಾರೆ. ನಾವು ಅವರ ಮಾತುಗಳನ್ನು ಪಾಲಿಸಿ ಅವರ ಪ್ರೀತಿಗೆ ಪಾತ್ರರಾಗೋಣ ಎಂದು ಹೇಳಿದರು. ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿಗಳು ಮಾತನಾಡಿ, ಸಿದ್ಧೇಶ್ವರ ಅಪ್ಪಾಜಿಯವರು ತಾಯಿಯಲ್ಲಿಯೇ ದೇವರನ್ನು ಕಾಣು ಎಂದಿದ್ದಾರೆ ಇದರ ಅರ್ಥ ತಾಯಿ ಮೊದಲು ಎನ್ನುವುದನ್ನು ಅಪ್ಪಾವರು ತಿಳಿಸಿಕೊಟ್ಟಿದ್ದಾರೆ. ನಾವು ಅಪ್ಪಾಜಿ ಅವರ ಮಾತನ್ನು ಪಾಲಿಸಬೇಕು. ನಮ್ಮ ಸಂಸ್ಕೃತಿ ಕನ್ನಡ ಭಾಷೆಯಲ್ಲಿದೆ. ಅಮ್ಮಾ ಎನ್ನುವ ಪದ ಕನ್ನಡ ಭಾಷೆಯಲ್ಲಿ ಅಡಗಿದೆ ಹಾಗಾಗಿ ನಮ್ಮ ಮನೆಯನ್ನು ಕನ್ನಡಮಯವಾಗಿಸಬೇಕು ಎಂದು ಹೇಳಿದರು. ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕವಾಡ ಮಾತನಾಡಿ, ಸಿದ್ಧೇಶ್ವರ ಅಪ್ಪಾವರ ಪ್ರವಚನಗಳನ್ನು ಕೇಳಿ ಪ್ರಭಾವಿತಳಾಗಿ ನಾನು ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಹಿಂದುಳಿದ ಜಿಲ್ಲೆಯಿಂದ ಬಂದು ಕ್ರಿಕೆಟ್‌ನಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದೇನೆ. ಇದು ಈ ಆಶ್ರಮದ ಶಕ್ತಿ ಎಂದು ಹೇಳಿದರು. ಶೈಲಜಾ ಬಸನಗೌಡ ಪಾಟೀಲ ಮಾತನಾಡಿ, ಮಾತೃ ಶಕ್ತಿ ಎಲ್ಲ ಶಕ್ತಿಗಿಂತಲೂ ದೊಡ್ಡದು. ಮಾತೆಯರನ್ನು ಗೌರವದಿಂದ ಕಾಣಬೇಕು ಎಂದರು. ಭಾಗ್ಯಶ್ರೀ ಶಿವಾನಂದ ಪಾಟೀಳ ಮಾತನಾಡಿ, ಸಮಾಜದ ನಿರ್ಮಾಣದಲ್ಲಿ ಮಾತೆಯರ ಮಾತ್ರ ಬಹಳ ದೊಡ್ಡದು. ಇಡೀ ದಿನ ತಾಯಿ ಕೆಲಸ ಮಾಡಿದರೂ ಅವಳಿಗೆ ಧಣಿವಾಗುವುದಿಲ್ಲ. ಮಕ್ಕಳನ್ನು ನೋಡಿಕೊಳ್ಳುವಲ್ಲಿ ತಾಯಿ ಯಾವುದೇ ಕಷ್ಟ ಬಂದರು ಸಹಿಸುತ್ತಾಳೆ. ಮಕ್ಕಳು ಭವಿಷ್ಯ ರೂಪಿಸುವಲ್ಲಿ ತಾಯಿ ಜವಾಬ್ದಾರಿ ಬಹಳ ದೊಡ್ಡದು. ನಾವು ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು. ಅವರಲ್ಲಿ ಜ್ಞಾನ ಸದ್ಗುಣಗಳನ್ನು ಬೆಳೆಸಬೇಕು ಎಂದು ಹೇಳಿದರು. ಮಹಾನಗರ ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ, ಶರಣು ಸಬರದ, ಆಶ್ರಮದ ಭಕ್ತರು, ಸ್ವಾಮೀಜಿಗಳು ಉಪಸ್ಥಿತರಿದ್ದರು.