ಅಧ್ಯಾತ್ಮದ ಮೇರು ಪರ್ವತ ಸಿದ್ಧೇಶ್ವರ ಶ್ರೀಗಳು: ಖೊದ್ನಾಪೂರ

Spiritual Meru Parvata Siddheshwar Sri: Khodnapur

ಅಧ್ಯಾತ್ಮದ ಮೇರು ಪರ್ವತ ಸಿದ್ಧೇಶ್ವರ ಶ್ರೀಗಳು: ಖೊದ್ನಾಪೂರ 

ವಿಜಯಪುರ: ವಿಶ್ವ ಕಂಡ ಶ್ರೇಷ್ಠ ಸಂತ, ತಪಸ್ವಿ, ಮಹಾ ಜ್ಞಾನಯೋಗಿ, ನಡೆದಾಡುವ ದೇವರೆಂದೇ ಹೆಸರಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ನಿಸರ್ಗ ಪ್ರಿಯವಾದ ಅಧ್ಯಾತ್ಮ ಮತ್ತು ಪ್ರವಚನದ ಮೂಲಕ ಜನರ ಮನಸ್ಸನ್ನೇ ಪರಿವರ್ತಿಸುವ ಶಕ್ತಿ, ದುಶ್ಚಟಗಳನ್ನು ದೂರವಾಗಿಸುವ ಮಾಂತ್ರಿಕತೆ, ಮೃದು ವಚನದೊಂದಿಗೆ ನೀಡಿದ ಸಂದೇಶಗಳು ಇಂದಿಗೂ ಜನಮಾನಸದಲ್ಲಿ ಅಮರವಾಗಿವೆ. ಅಧ್ಯಾತ್ಮದ ಮೇರು ಪರ್ವತ ಮತ್ತು ಸದ್ಗುಣಗಳ ಪ್ರತಿರೂಪವೇ ಆಗಿರುವ ಸಿದ್ದೇಶ್ವರ ಬುದ್ಧೀಜೀ ಅವರ ತಮ್ಮ ಜೀವನವೇ ಪ್ರತಿಯೊಬ್ಬರಿಗೆ ಸ್ಪೂರ್ತಿದಾಯಕವಾಗಿದ್ದು, ಅವರ ತೆರೆದಿಟ್ಟ ಜೀವನ ನಮ್ಮೆಲ್ಲರ ಬದುಕಿಗೆ ದಾರೀದೀಪ ಎಂದು ವಿಜಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಎಂ.ಎಸ್‌.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು. 

ಅವರು ನಗರದ ಅಥಣಿ ರಸ್ತೆಯ ಅಲ್‌-ಅಮೀನ ಆಸ್ಪತ್ರೆ ಎದುರಿಗೆ ಇರುವ ಮಧುವನ ಕಾಲನಿಯ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ದಿ. 1ರಂದು ಸಂಜೆ ಜರುಗಿದ ಸಂತ, ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಅವರ ಗುರುನಮನ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಮಾತನಾಡುತ್ತಿದ್ದರು. 

ಸರಳ ಸಾಕಾರಮೂರ್ತಿ ಹಾಗೂ ಮಾತೃ ಹೃದಯದ ಸ್ವಾಮೀಜಿಗಳು ಜನರ ಜೀವನ, ಬದುಕು, ಪರಿಪೂರ್ಣ ಬದುಕಿಗೆ ಬೇಕಾದ ನೈತಿಕ, ಮೌಲ್ವಿಕ ವಿಚಾರಧಾರೆಗಳನ್ನು ಪರಿಸರದ ಹೂವು, ಹಣ್ಣು ಮತ್ತು ಗಿಡ-ಮರಗಳ ಪರೋಪಕಾರಿ ಜೀವನವನ್ನು ಉದಾಹರಿಸಿಕೊಂಡು ಪ್ರವಚನದಲ್ಲಿ ಬೋಧಿಸುತ್ತಿದ್ದರು. ಕನ್ನಡ, ಇಂಗ್ಲೀಷ, ಪರ್ಷಿಯನ್ ಸೇರಿದಂತೆ ಅನೇಕ ಭಾಷೆಗಳಲ್ಲಿ ತಮ್ಮ ಪ್ರವಚನದ ಸಾರ-ಸಂದೇಶ ನೀಡುತ್ತಿರುವ ಅವರು ಉಪನ್ಯಾಸದುದ್ದಕ್ಕೂ ಸಾಕ್ರೆಟಿಸ್, ಕನಫ್ಯೂಷಿಯಸ್, ನೆಪೋಲಿಯನ್, ಬುದ್ದ ಮತ್ತು ಬಸವಣ್ಣವರ ತತ್ವ-ಬೋಧನೆ, ಸಿದ್ಧಾಂತ ಮತ್ತು ಜೀವನ-ಮೌಲ್ಯಗಳ ಮೂಲಕ ವೇದಗಳ ಸಾರವನ್ನು ಉಣಬಡಿಸುತ್ತಿದ್ದರು ಎಂದು ಹೇಳಿದರು. 

ನಡೆದಾಡುವ ದೇವರು, ಜೇಬಿಲ್ಲದ ಅಂಗಿಯ ರಾಷ್ಟ್ರ ಸಂತ ಹಾಗೂ ನನ್ನದು-ತನ್ನದೆಂಬ ಮಮಕಾರ ತೊರೆದ ಮತ್ತು ವಿಚಾರ ಬದ್ಧತೆಯ ಪ್ರತಿರೂಪವಾಗಿದ್ದ ಶ್ರೀಗಳು ಇಷ್ಟೊಂದು ಸರಳ ಜೀವನ ಮತ್ತು ಹಲವಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದರೂ ವಿನಮ್ರವಾಗಿ ನನಗೇಕೆ ಪ್ರಶಸ್ತಿ ಎಂಬ ನಯವಾದ ಮಾತುಗಳಿಂದ ನಿರಾಕರಿಸಿದ ಪ್ರಥಮ ಹಾಗೂ ಅಪರೂಪದ ತ್ಯಾಗಿಗಳು ಆಗಿದ್ದರು ಎಂದರು. 

ಅಧ್ಯಕ್ಷತೆಯನ್ನು ಹಿರಿಯರಾದ ಅಶೋಕ ಪಾಟೀಲ ವಹಿಸಿದ್ದರು. ಸಹನಾ ಕುಲಕರ್ಣಿ ಇವರು ಸಂತನೆಂದರೆ ಯಾರು.. ದಿವ್ಯತೆಯ ಅರಿತವರು ಎಂಬ ಸಿದ್ದೇಶ್ವರ ಸ್ವಾಮೀಜಿಯವರ ಕುರಿತು ಹಾಡಿದ್ದು, ಎಲ್ಲ ಸಭಿಕರ ಗಮನ ಸೆಳೆಯಿತು.  

ದೇವಸ್ಥಾನದ ಸಮಿತಿಯ ಪದಾಧಿಕಾರಿಗಳಾದ ಶಂಕರ ಪೂಜಾರಿ, ಬಿ.ಆರ್‌.ಬಿರಾದಾರ, ವಿಶ್ವನಾಥ ಹಿರೇಮಠ, ರಾಘವೇಂದ್ರ ಬಡಿಗೇರ, ದತ್ತಾತ್ರೇಯ ಕಾಖಂಡಕಿ, ವಿನಯ ಕುಲಕರ್ಣಿ, ಗುರಲಿಂಗ ಮೈಗೂರ, ನಾಗಪ್ಪ ಪೂಜಾರಿ, ಅಮೋಘಸಿದ್ದ ಕಳ್ಳಿ, ಮೋಹನ ವೈಕುಂಠೆ ಹಾಗೂ ಮಧುವನ ಹಾಗೂ ಸುತ್ತಮುತ್ತಲಿನ ಬಡಾವಣೆಗಳ ಮಹಿಳೆಯರು, ಮಕ್ಕಳು, ಯುವಕರು ಹಾಗೂ ಹಿರಿಯರು ಭಾಗವಹಿಸಿದ್ದರು.