ದೈಹಿಕ ಸದೃಢತೆಗೆ ಕ್ರೀಡೆ ಅವಶ್ಯ : ಮಾಜಿ ಸಂಸದ ಪ್ರೋ ಐ ಜಿ. ಸನದಿ
ಶಿರಹಟ್ಟಿ 27: ಪ್ರತಿಯೊಬ್ಬರೂ ದೈಹಿಕವಾಗಿ ಸದೃಢರಾಗಲು ಕ್ರೀಡೆ ಅವಶ್ಯ. ಕ್ರೀಡೆಯಿಂದ ಆರೋಗ್ಯ ವೃದ್ಧಿಯಾಗುವದಲ್ಲದೇ ಮಾನಸಿಕವಾಗಿ ಶಕ್ತರಾಗುತ್ತಾರೆ ಎಂದು ಮಾಜಿ ಸಂಸದ ಐ ಜಿ. ಸನದಿ ಹೇಳಿದರು.
ಅವರು ಸೋಮವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಐಪಿಎಲ್ ಮಾದರಿಯ ಶಿರಹಟ್ಟಿ ಪ್ರೀಮಿಯರ್ ಲೀಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮನುಷ್ಯ ಆರೋಗ್ಯವಾಗಿರಲು ಕ್ರೀಡೆ ಅವಶ್ಯ. ಯುವ ಜನತೆ ಬುದ್ದಿವಂತಿಕೆಯನ್ನು ಉತ್ತಮ ಜೀವನದೆಡೆ ಹಾಗೂ ಸಮಾಜದ ಅಭಿವೃದ್ದಿಯಡೆಗೆ ಬಳಸದೇ ಅನವಶ್ಯಕವಾಗಿ ಕಾಲಹರಣ ಮಾಡುತ್ತಿದ್ದಾರೆ. ಯುವ ಸಂಪತ್ತು ದೇಶದ ಅಭಿವೃದ್ದಿಗೆ ಬಳಕೆಯಾಗಬೇಕು ಎಂದು ಹೇಳಿದರು.
ಪ್ರತಿಯೊಬ್ಬರೂ ಕ್ರೀಡಾ ಮನೋಭಾವನೆಯಿಂದ ಆಟವಾಡಬೇಕು. ಕ್ರೀಡೆಯನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಿದಾಗ ಮಾತ್ರ ಸೋಲು ಗೆಲವನ್ನು ಸಮಾನವಾಗಿ ಸ್ವೀಕರಿಸಲು ಸಾಧ್ಯ ಎಂದರು.
ಸಮಾರಂಭದ ಸಾನಿಧ್ಯವನ್ನು ಹೆಬ್ಬಾಳದ ಸಣ್ಣ ಹಾಲಸ್ವಾಮಿಗಳು ಗುರುಪಾದ್ದೇವರಮಠದ ಸ್ವಾಮಿಜಿ ವಹಿಸಿದ್ದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಹುಮಾಯೂನ್ ಮಾಗಡಿ, ತಹಶೀಲ್ದಾರ ಅನಿಲ ಬಡಿಗೇರ, ಡಾ. ವೆಂಕಟೇಶ ರಾಠೋಡ, ಡಿ ಕೆ. ಹೊನ್ನಪ್ಪನವರ, ಸಂದೀಪ ಕಪ್ಪತ್ತನವರ, ಹೊನ್ನಪ್ಪ ಶಿರಹಟ್ಟಿ, ತಿಮ್ಮರಡ್ಡಿ ಮರಡ್ಡಿ, ಮೋಹನ್ ಗುತ್ತೇಮ್ಮನವರ, ಚಾಂದಸಾಬ ಮುಳಗುಂದ, ಹಮೀದ್ ಸನದಿ, ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ, ಎಲ್ ಕೆ. ಪುರ್ತಗೇರಿ, ಶಿರಹಟ್ಟಿ ತಾಲೂಕು ಕರವೇ ಅಧ್ಯಕ್ಷ ಶಿವು ಮಠದ, ಪ್ರಕಾಶ ಬಡೆಣ್ಣವರ ಹಾಗೂ ಅನೇಕರು ಇದ್ದರು.