ತುಮಕೂರು 7: ಬೆಂಗಳೂರಿನಿಂದ ತುಮಕೂರು ಜಿಲ್ಲೆಗೆ ಮೆಟ್ರೋ ರೈಲು ಬದಲು ಉಪನಗರ ರೈಲು ಯೋಜನೆ ಜಾರಿಗೆ ತರಲು ಚಿಂತಿಸಲಾಗಿದೆ. ಪ್ರತಿ 10 ನಿಮಿಷಕ್ಕೊಮ್ಮೆ ರೈಲು ಸಂಚರಿಸುವಂತೆ ಯೋಜನೆ ರೂಪಿಸಲಾಗಿದೆ. ಉಪನಗರ ರೈಲಿಗೆ ಪ್ರತ್ಯೇಕ ಹಳಿ ಹಾಕಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸ್ಮಾರ್ಟಸಿಟಿ ಯೋಜನೆಯಡಿ ಮಹಾತ್ಮಗಾಂಧಿ ಆಟದ ಮೈದಾನ, ಅಮಾನಿಕೆರೆ ಪುನಶ್ಚೇತನ, ಜಿಲ್ಲಾ ಆಸ್ಪತ್ರೆ, ಬಸ್ ನಿಲ್ದಾಣ, ಸರಕಾರಿ ಪದವಿ ಪೂರ್ವ ಕಾಲೇಜು, ಡಿಜಿಟಲ್ ಗ್ರಂಥಾಲಯ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಉದ್ಘಾಟಿಸಿ ಮಾತನಾಡಿದರು.
ತುಮಕೂರು ಸ್ಮಾರ್ಟಸಿಟಿ ಯೋಜನೆಯಡಿ ಕೇಂದ್ರ ಸರಕಾರ 1 ಸಾವಿರ ಕೋಟಿ ರು ಅನುದಾನ ನೀಡಲಿದೆ. ಜೊತೆಗೆ ರಾಜ್ಯ ಸರಕಾರ ನಗರ ಅಭಿವೃದ್ದಿಗೆ 125 ಕೋಟಿ ರು. ಮೀಸಲಿಡಲಾಗಿದೆ. ತುಮಕೂರು ಎಲ್ಲ ರಂಗದಲ್ಲೂ ಸ್ಮಾರ್ಟಸಿಟಿ ಆಗಲಿದೆ. 67 ಕೋಟಿ ರೂ. ಗೆ ಕ್ಯಾನ್ಸರ್ ಆಸ್ಪತ್ರೆ, 50 ಕೋಟಿ ವೆಚ್ಚದಲ್ಲಿ ಕ್ರೀಡಾ ಮೈದಾನ ಸೇರಿದಂತೆ 525 ಕೋಟಿ ರು. ಮೊತ್ತದ ಕಾಮಗಾರಿಯನ್ನು ಇಂದು ಉದ್ಘಾಟಿಸಿದ್ದೇವೆ.
ಅವಧಿಗೂ ಮುನ್ನವೇ ಈ ಎಲ್ಲಾ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ಇನ್ನು ಕೆಲವೇ ವರ್ಷದಲ್ಲಿ ತುಮಕೂರು ಸಿಟಿ ದೇಶದಲ್ಲೇ ಮಾದರಿ ನಗರವಾಗಿ ಹೊರಹೊಮ್ಮುವ ವಿಶ್ವಾಸವಿದೆ ಎಂದರು.
ತುಮಕೂರ ಸ್ಮಾರ್ಟಸಿಟಿ ಯೋಜನೆಗೆ ಕೇಂದ್ರ ಸರಕಾರ ಇನ್ನಷ್ಟು ಹಣ ನೀಡಿದರೆ ಒಳಿತು. ತುಮಕೂರು ಹಿಂದಿನಿಂದಲೂ ನಿರ್ಲಕ್ಷ್ಯಕ್ಕೆ ಒಳಗಾದ ನಗರವಾಗಿತ್ತು. ಈಗ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಬಳಸಿಕೊಂಡು ತುಮಕೂರು ದೊಡ್ಡ ಸಿಟಿಯಾಗಿ ಬೆಳೆಯಬೇಕು ಎಂದರು. ಬೆಂಗಳೂರಿನಲ್ಲಿ ಇರುವ ಕಬ್ಬನ್ ಪಾರ್ಕ ಅಥವಾ ಲಾಲ್ಬಾಗ್ ಮಾದರಿಯಲ್ಲಿ ತುಮಕೂರಿನಲ್ಲಿ 100 ಎಕರೆ ಯಲ್ಲಿ ಪಾಕರ್್ ನಿರ್ಮಾಣ ಮಾಡುವುದು ಅಗತ್ಯವಿದೆ ಎಂದು ಇದೇ ವೇಳೆ ಅವರು ತಿಳಿಸಿದರು. ಈ ಸಂಬಂಧ ಪ್ರಸ್ತಾವನೆ ಸಿದ್ದಪಡಿಸಲಾಗುವುದು ಎಂದರು.