ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮಕ್ಕಳಲ್ಲಿ ಅಭಿರುಚಿ ಮೂಡಿಸಿ: ದೈಹಿಕ ಶಿಕ್ಷಕಿ ರೇಣುಕಾ

ಲೋಕದರ್ಶನ ವರದಿ 

ಗಜೇಂದ್ರಗಡ 02: ಬೇಸಿಗೆ ರಜೆಯಲ್ಲಿ ಶಾಲಾ ಮಕ್ಕಳನ್ನು ಆಟೋಟಗಳಲ್ಲಿ ತೊಡಗಿಸಿ ಶಾಲೆಗಳತ್ತ ಆಕರ್ಷಿಸುವುದರ ಜತೆಗೆ ಮಕ್ಕಳಿಗೆ ಕಲೆ, ಸಂಗೀತ, ಸಾಹಿತ್ಯ, ಕ್ರೀಡೆ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮಕ್ಕಳಲ್ಲಿ ಅಭಿರುಚಿ ಮೂಡಿಸಿ ಸೃಜನಶೀಲತೆ ಹಾಗೂ ಕಲಿಕಾ ಮನೋಭಾವ ಉಂಟು ಮಾಡುವುದು ಸರಕಾರದ ಮೂಲ ಉದ್ದೇಶವಾಗಿದೆ ಎಂದು ದೈಹಿಕ ಶಿಕ್ಷಕಿ ರೇಣುಕಾ ಇಟಗಿ ಹೇಳಿದರು.

ಎಚ್.ಪಿ.ಎಸ್. ನಂ 5 ಶಾಲೆಯಲ್ಲಿ ಬೇಸಿಗೆ ಸಂಭ್ರಮ ಶಿಬಿರದಲ್ಲಿ  ಭಾಗವಹಿಸಿ ಮಾತನಾಡಿದ ಅವರು ಶಿಬಿರದಲ್ಲಿ ವಾರಕ್ಕೊಂದು ವಿಷಯದಂತೆ ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡಲಿದ್ದಾರೆ. ಮೊದಲ ವಾರದಲ್ಲಿ ಕುಟುಂಬ, ಎರಡನೇ ವಾರ ನೀರು, ಮೂರನೇ ವಾರ ಆಹಾರ, ನಾಲ್ಕನೇ ವಾರ ನೈರ್ಮಲ್ಯ ಮತ್ತು ಕೊನೆಯ ವಾರ ಪರಿಸರದ ಬಗ್ಗೆ ಮಕ್ಕಳಿಗೆ ತಿಳಿ ಹೇಳಲಾಗುತ್ತದೆ ಎಂದರು. ಇದರೊಂದಿಗೆ ಮಕ್ಕಳಿಗೆ ಕಲಿಕೆಯ ಜೊತಗೆ ಸ್ವಲ್ಪ ಪಠ್ಯೇತರ ಚಟುವಟಿಕೆಯಲ್ಲೂ ತಡಗಿಸಿಕೊಳ್ಳಲು ಕ್ರೀಡೆ, ಸಂಗೀತ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.

ಸ್ವಲ್ಪ ಓದು-ಸ್ವಲ್ಪ ಮೋಜು: ಐದು ವಾರಗಳ ತರಬೇತಿಯನ್ನು ಐದು ಭಾಗವಾಗಿ ವಿಂಗಡಿಸಿದ್ದಾರೆ. ಪ್ರತಿ ದಿನವೂ ಐದು ಅವಧಿಯಾಗಿ ಭಾಗ ಮಾಡಿದ್ದಾರೆ. ಸ್ವಲ್ಪ ಓದು- ಸ್ವಲ್ಪ ಮೋಜು ಮಾದರಿಯಲ್ಲಿ ಪಾಠ ನಡೆಯಲಿದೆ. ಆರಂಭಿಕ ವಾರ ಕುಟುಂಬ, ಎರಡನೇ ವಾರ ನೀರು ಹೀಗೇ ಒಂದೊಂದು ವಿಷಯದ ಕುರಿತು ನುರಿತ ಸಂಪನ್ಮೂಲ ಶಿಕ್ಷಕರು ಮಕ್ಕಳಿಗೆ ತರಬೇತಿ ನೀಡಿಲಿದ್ದಾರೆ.