ಮೈತ್ರಿ ಸರಕಾರ ಪತನಗೊಳಿಸಲು ಮತ್ತೆ ಬಿಜೆಪಿ ಪ್ರಯತ್ನ

ಕಲಬುರಗಿ 11: ರಾಜ್ಯ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸಕರ್ಾರವನ್ನು ಪತನಗೊಳಿಸಲು ಪ್ರತಿಪಕ್ಷ  ಬಿಜೆಪಿ,  ಆಡಳಿತಾರೂಢ ಶಾಸಕರಿಗೆ ಅಮಿಷವೊಡ್ಡಲು ಮತ್ತೆ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಬಿಜೆಪಿ ಪ್ರಯತ್ನ ಮತ್ತೊಮ್ಮೆ ವಿಫಲವಾಗಲಿದೆ ಎಂದು ಭವಿಷ್ಯ ನುಡಿದರು. 

  ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪ್ರತಿಪಕ್ಷ ನಾಯಕ  ಬಿ.ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಸಬೇಕು  ಎಂಬ ದುರಾಸೆಯಿಂದ  ಬಿಜೆಪಿ,  ಆಡಳಿತಾರೂಡ  ಅತೃಪ್ತ ಶಾಸಕರನ್ನು  ಸೆಳೆಯಲು ವಿವಿಧ ರೀತಿಯ ಆಮಿಷವೊಡ್ಡುತ್ತಿದೆ.  ಬಿಜೆಪಿಯ  ಇಂತಹ ಅಮಿಷಗಳಿಗೆ ನಮ್ಮ ಶಾಸಕರು ಬಲಿಯಾಗುವುದಿಲ್ಲ  ಎಂದು ವಿಶ್ವಾಸದಿಂದ ನುಡಿದರು. 

  ಕೆಲವು ಶಾಸಕರು ಬಿಜೆಪಿ ಭಾರಿ ಹಣದ ಆಮಿಷವನ್ನು ತಿರಸ್ಕರಿಸಿದ್ದಾರೆ. ಕೆಲವರು ಹಣ ವಾಪಸ್ಸು ನೀಡಿದ್ದಾರೆ ಎಂದು  ಅವರು ಹೇಳಿದರು. 

   ನಮ್ಮ ಶಾಸಕರಿಗೆ ದೊಡ್ಡ ಪ್ರಮಾಣದ ಹಣ ನೀಡಲು  ಯಡಿಯೂರಪ್ಪ ಅವರಿಗೆ  ಎಲ್ಲಿಂದ ಹಣ ಬರುತ್ತಿದೆ  ಎಂದು ಪ್ರಶ್ನಿಸಿದ  ಸಿದ್ದರಾಮಯ್ಯ,   ಯಡಿಯೂರಪ್ಪರಿಂದ  ಸಕರ್ಾರ ಬೀಳಿಸಲು ಆಗುವುದಿಲ್ಲ ಹಾಗೂ ಕೇಂದ್ರದಲ್ಲಿ ಎನ್ಡಿಎ ಸಕರ್ಾರ ಸಹ ಬರುವುದಿಲ್ಲ. ಅಷ್ಟಕ್ಕೂ ಶಾಸಕರನ್ನು ಖರೀದಿ ಮಾಡಲು ನಿಮ್ಮ ಹತ್ತಿರ ದುಡ್ಡು ಎಲ್ಲಿಂದ ಬರುತ್ತದೆ ಎಂದು ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ಪ್ರಶ್ನಿಸಿದರು. 

   ಇದು ಅಕ್ರಮ ಮಾರ್ಗಗಳಲ್ಲಿ ಸಂಗ್ರಹಿಸಿದ ಹಣವಾಗಿದೆ. ಹಣದ ಮೂಲ ಯಾವುದು ಎಂಬುದನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಷಾ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು  

   ತಮ್ಮ ಕುರಿತು  ಬಿಜೆಪಿ ಮುಖಂಡ  ಆರ್ ಅಶೋಕ್  ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ   ಸಿದ್ದರಾಮಯ್ಯ, ನಾನಾಗಿಯೇ  ಜೆಡಿಎಸ್  ತೊರೆಯಲಿಲ್ಲ. ಅಹಿಂದ ಚಟುವಟಿಕೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ದೇವೇಗೌಡ ಅವರು ನನ್ನನ್ನು ಉಚ್ಚಾಟನೆ ಮಾಡಿದ್ದರು. ಡಾ. ಉಮೇಶ್ ಜಾಧವ್  ಕಾಂಗ್ರೆಸ್  ಬಿಟ್ಟಿರುವುದಕ್ಕೂ ನಾನು ಜೆಡಿಎಸ್ ಬಿಟ್ಟಿರೋದಕ್ಕೂ  ಬಹಳ ವ್ಯತ್ಯಾಸವಿದೆ" ಎಂದು ಹೇಳಿದರು. 

  ಮೈತ್ರಿಯಿಂದಾಗಿ  ಲಾಭಕ್ಕಿಂತ ನಷ್ಟವೇ ಜಾಸ್ತಿ  ಎಂದು ಕೆಆರ್ ಪೇಟೆ ಶಾಸಕ ನಾರಾಯಣಗೌಡ   ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ  ಸಿದ್ದರಾಮಯ್ಯ,  ನಾವು  ನಾರಾಯಣ ಗೌಡರನ್ನು ಕೇಳಿಕೊಂಡು ಮೈತ್ರಿ ಮಾಡಿಕೊಂಡಿಲ್ಲ, ಪಕ್ಷದ ವರಿಷ್ಠರು ತೀಮರ್ಾನದಂತೆ ಕುಮಾರಸ್ವಾಮಿ, ದೇವೇಗೌಡರ ಜೊತೆ ಮಾತುಕತೆ ಮಾಡಿ ಸಕರ್ಾರ ರಚನೆ ಮಾಡಿದ್ದೇವೆ ಎಂದು ಹೇಳಿದರು. 

ರಾಜ್ಯ ಮೈತ್ರಿಕೂಟ ಸಕರ್ಾರದಲ್ಲಿ  ಏಲ್ಲವೂ ಸರಿಯಿಲ್ಲ. 20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು  ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಎಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ  ಎಂದು ಬಿ.ಎಸ್. ಯಡಿಯೂರಪ್ಪ  ನಿನ್ನೆ ಹೇಳಿದ್ದರು. ಮೇ 23ರ ನಂತರ ರಾಜ್ಯದಲ್ಲಿ ಏನುಬೇಕಾದರೂ ನಡೆಯಬಹುದು ಎಂದು ತಿಳಿಸಿದ್ದರು.