ಲೋಕದರ್ಶನ ವರದಿ
ವಿಜಯಪುರ 24: ಭಾರತ ವಿಕಾಸ ಸಂಗಮದ ನೇತೃತ್ವದಲ್ಲಿ ವಿಜಯಪುರ ತಾಲೂಕಿನ ಕಗ್ಗೋಡದ ಶ್ರೀ ರಾಮನಗೌಡ ಪಾಟೀಲ ಯತ್ನಾಳ ಗೋರಕ್ಷಾ ಕೇಂದ್ರದ ಆವರಣದಲ್ಲಿ ಎಂಟು ದಿನಗಳವರೆಗೆ ನಡೆಯುವ ಭಾರತೀಯ ಸಂಸ್ಕೃತಿ ಉತ್ಸವದ ಪ್ರಯುಕ್ತ ಸೋಮವಾರ ನಗರದಲ್ಲಿ ವೈಭವದ ಶೋಭಾಯಾತ್ರೆ ನಡೆಯಿತು.
ಕಲಾ ತಂಡಗಳ ಕಲಾ ವೈಭವ, ಮುಗಿಲು ಮುಟ್ಟಿದ ವಾದ್ಯ-ವೈಭವಗಳ ಹಿಮ್ಮೇಳನ, ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆ ಸಾರುವ ಸ್ತಬ್ಧಚಿತ್ರಗಳು, ಆಕರ್ಷಕ ರೂಪಕಗಳು ಇವೇ ಮುಂತಾದ ದೃಶ್ಯಾವಳಿಗಳು ಶೋಭಾಯಾತ್ರೆಯಲ್ಲಿ ಸಾರ್ವಜನಿಕರ ಗಮನ ಸೆಳೆದವು.
ಶೋಭಾಯಾತ್ರೆಯಲ್ಲಿ ಕಲೆ, ಸಂಸ್ಕೃತಿ, ಸಂಗೀತದ `ತ್ರಿವೇಣಿ ಸಂಗಮ' ಗುಮ್ಮಟ ನಗರಿಯ ವೈಭವವನ್ನು ಇಮ್ಮಡಿಗೊಳಿಸಿತ್ತು. ಹಲವಾರು ಹರ-ಗುರು-ಚರಮೂತರ್ಿಗಳು ಮೆರವಣಿಗೆಯಲ್ಲಿ ಸಾಗುತ್ತಾ ಯುವಜನತೆ, ಸಾರ್ವಜನಿಕರಲ್ಲಿ ಹೊಸ ಉತ್ಸಾಹ ತುಂಬಿದರು.
ಶೋಭಾಯಾತ್ರೆ ಸಾಂಸ್ಕೃತಿಕ ಗತ ವೈಭವ ಸಾರುವ ಜೊತೆಗೆ ನಮ್ಮ ನೆಲದ ಸಂಸ್ಕೃತಿಯನ್ನು ಅನಾವರಣಗೊಳಿಸಿತು. ಕಲಾವಿದರ ಕಲಾ ಪ್ರದರ್ಶನ ಮೆರವಣಿಗೆಯ ಮೆರಗು ಹೆಚ್ಚಿಸಿತು. ದೇಶಭಕ್ತರ ವೇಷದಲ್ಲಿ ಚಿಣ್ಣರು ಕಂಗೊಳಿಸಿದರು. ಸಹಸ್ರಾರು ಜನರು ಮೆರವಣಿಗೆಯಲ್ಲಿ ಉತ್ಸಾಹದಿಂದ ಹೆಜ್ಜೆ ಹಾಕಿದರು.
ಕರಡಿ ಮಜಲು, ಡೊಳ್ಳು ಕುಣಿತ, ಹಲಗೆ ಮಜಲು, ಚೌಡಕಿ ಮೇಳ, ಲಂಬಾಣಿ ನೃತ್ಯ, ಸಂಬಾಳ ವಾದನ, ಕುದುರೆ ಕುಣಿತ, ತಾಸೆ ವಾದನ, ಗಾರುಡಿ ಗೊಂಬೆ, ದೊಡ್ಡಾಟ ಮೇಳದ ವೇಷಧಾರಿಗಳು, ಭಜನಾಕುಣಿತ, ಜಾಂಜ್ ಪತಕ, ವೀರಗಾಸೆ, ದುರುಗ ಮುರುಗಿಯವರು ಸೇರಿದಂತೆ ನೂರಾರು ಕಲಾ ತಂಡಗಳು ಮೆರವಣಿಗೆಯಲ್ಲಿ ಕಲಾ ಲೋಕ ವೈಭವ ಸೃಷ್ಟಿಸಿದ್ದವು.
ಮೈಸೂರಿನ ನಗಾರಿ ತಂಡ, ಧಾರವಾಡದ ಕತಕ್ಕಳಿ, ಮಂಡ್ಯ ಜಿಲ್ಲೆಯ ಪೂಜಾ ಕುಣಿತ, ಚಿಕ್ಕ ಮಂಗಳೂರಿನ ಸೋಮನ ಕುಣಿತ, ಬಳ್ಳಾರಿಯ ಹಗಲು ವೇಷಗಾರರ ತಂಡ ಮೆರವಣಿಗೆಯ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.
ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂತರ್ಿ ಶ್ರೀಗಳು ಶೋಭಾಯಾತ್ರೆಯ ಮೆರವಣಿಗೆಗೆ ಚಾಲನೆ ನೀಡಿದರು. ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಸಾನಿಧ್ಯದಲ್ಲಿ ಮೆರವಣಿಗೆ ಆರಂಭಗೊಂಡಿತು.
ನಗರ ಹೊರವಲಯದ ಸೊಲ್ಲಾಪೂರ ಬೈಪಾಸ್ ರಸ್ತೆಯಿಂದ ಪ್ರಾರಂಭಗೊಂಡ ಶೋಭಾಯಾತ್ರೆ ಬಂಜಾರಾ ಕ್ರಾಸ್, ಬಿಎಲ್ಡಿಇ ಆಡಳಿತ ಕಚೇರಿ ಮುಖಾಂತರ ಲಿಂಗದ ಗುಡಿ ರಸ್ತೆ, ಡಾ.ಹೆಡಗೆವಾರ್ ವೃತ್ತ, ಸಿದ್ದೇಶ್ವರ ದೇವಾಲಯ ರಸ್ತೆ, ಗಾಂಧಿವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್. ಅಂಬೇಡ್ಕರ ವೃತ್ತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ದರಬಾರ ಹೈಸ್ಕೂಲ್ ಮೈದಾನಕ್ಕೆ ತಲುಪಿ ಸಂಪನ್ನಗೊಂಡಿತು.