ಜನೆವರಿ 30 ರಿಂದ ಫೆಬ್ರುವರಿ 13 ರವರೆಗೆಸ್ಪರ್ಶ ಕುಷ್ಟರೋಗ ಜಾಗೃತಿ ಅಭಿಯಾನ
ಗದಗ 29: ಜಿಲ್ಲೆಯಲ್ಲಿ ಜನೆವರಿ 30 ರಿಂದ ಫೆಬ್ರುವರಿ 13 ರವರೆಗೆ ಕುಷ್ಟರೋಗ ಜಾಗೃತಿ ಅಭಿಯಾನ ಆಯೋಜಿಸಲಾಗಿದ್ದು ವಿವಿಧ ಇಲಾಖೆಗಳ ಸಮನ್ವಯತೆಯಿಂದ ಈ ಅಭಿಯಾನವನ್ನು ಪರಿಣಾಮಕಾರಿಯಾಗಿ ಜರುಗಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನ ಕಾರ್ಯಕ್ರಮದಡಿಯಲ್ಲಿ ಸ್ಪುರ್ಶ ಕುಷ್ಟರೋಗ ಜಾಗೃತಿ ಅಭಿಯಾನದ ಪಾಕ್ಷಿಕ ಆಚರಣೆ ಕುರಿತು ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಷ್ಟರೋಗದ ಕುರಿತು ಜನಸಾಮಾನ್ಯರಲ್ಲಿ ಭಯ ಬೇಡ. ಕುಷ್ಟರೋಗವನ್ನು ಶೀಘ್ರವಾಗಿ ಪತ್ತೆ ಹಚ್ಚುವುದು ಮುಖ್ಯವಾಗಿದೆ. ಕುಷ್ಟರೋಗಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಬಹುವಿಧ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ರೋಗಕ್ಕೆ ಅಂಟಿಕೊಂಡಿರುವ ಕಳಂಕ ಹಾಗೂ ತಾರತಮ್ಯವನ್ನು ಹೋಗಲಾಡಿಸಿ ಕುಷ್ಟರೋಗಿಗಳಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಗೌರವಯುತವಾಗಿ ಬದುಕಲು ಅವಕಾಶ ನೀಡೋಣ. ಈ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಂಡು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ನಿರ್ದೇಶನ ನೀಡಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ರಾಜೇಂದ್ರ ಬಸರಿಗಿಡದ ಅವರು ಮಾತನಾಡಿ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನವನ್ನು ಜನೆವರಿ 30 ರಿಂದ ಫೆಬ್ರುವರಿ 13 ರವರೆಗೆ ಹಮ್ಮಿಕೊಳ್ಳಲಾಗಿದ್ದು ಸದರಿ ಅವಧಿಯಲ್ಲಿ ಕುಷ್ಟರೋಗದ ಕುರಿತು ಅರಿವು ಮೂಡಿಸಲಾಗುವುದು. ಕುಷ್ಟರೋಗ ಸಂಪೂರ್ಣ ಗುಣಮುಖ ಹೊಂದುವ ಕಾಯಿಲೆಯಾಗಿದ್ದು ಕುಷ್ಠರೋಗವನ್ನು ಶೀಘ್ರ ಪತ್ತೆ ಹಚ್ಚಿ ನಿಗದಿತ ಸಂಪೂರ್ಣ ಚಿಕಿತ್ಸೆಯನ್ನು ಪಡೆದು ನಿಯಮಿತ ವ್ಯಾಯಾಮ ಮಾಡಿದಲ್ಲಿ ಕುಷ್ಠರೋಗದಿಂದ ಸಂಪೂರ್ಣ ಗುಣಮುಖ ಹೊಂದಬಹುದಾಗಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಬಹುವಿಧ ಓಷಧಿ ಚಿಕಿತ್ಸೆ ಉಚಿತವಾಗಿ ಲಭ್ಯವಿದೆ ಎಂದು ಡಾ.ರಾಜೇಂದ್ರ ಬಸರಿಗಿಡದ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕುಷ್ಠರೋಗ ವಿಭಾಗದ ಬಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ನೀಲಗುಂದ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಮೀನಾಕ್ಷಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೆಂಕಟೇಶ ರಾಠೋಡ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ಕೆ.ಭಜಂತ್ರಿ, ತಾಲೂಕಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ, ಸಮಿತಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.