ಕುರಿ ಕಾಯುವವನ ಮಗನ ಯುಪಿಎಸ್ಸಿ ಸಾಧನೆ
ಯರಗಟ್ಟಿ 23: ತಂದೆ ಕುರಿ ಕಾಯುತ್ತಾರೆ. ತಾಯಿ ಹೊಲದಲ್ಲಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಬಡತನ. ಮಗನಿಗೆ ಮಾತ್ರ ಇಡೀ ದೇಶವೇ ತನ್ನತ್ತ ತಿರುಗಿ ನೋಡಬೇಕೆಂಬ ಅಧಮ್ಯ ವಿಶ್ವಾಸ. ತಂದೆ - ತಾಯಿಗೆ ಮಗನ ಮೇಲೆ ಬೆಟ್ಟದಷ್ಟು ನೀರೀಕ್ಷೆ. ಅದು ಹುಸಿ ಆಗಲಿಲ್ಲ. ಸತತ ಓದು, ಪರಿಶ್ರಮ ಆತನ ಕೈ ಹಿಡಿದಿದ್ದು, ಯುಪಿಎಸ್ಸಿ ಪರೀಕ್ಷೆಯಲ್ಲಿ 910ನೇ ರಾ್ಯಂಕ್ ಪಡೆಯುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಯರಗಟ್ಟಿ ತಾಲೂಕಿನ ಕೊಡ್ಲಿವಾಡ ಗ್ರಾಮದ ಹನುಮಂತಪ್ಪ ಯಲ್ಲಪ್ಪ ನಂದಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ಮೆರೆದಿದ್ದಾರೆ. ಯುಪಿಎಸ್ಸಿಯಲ್ಲಿ ಮಗ ಪಾಸ್ ಆಗಿರುವ ಸುದ್ದಿ ತಿಳಿಯುತ್ತಿದ್ದಂತೆ ಕೊಡ್ಲಿವಾಡದ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅಪ್ಪ ಯಲ್ಲಪ್ಪ, ಅವ್ವ ಕಾಳವ್ವ, ಪತ್ನಿ ಯಶೋಧಾ, ಸಹೋದರ ಆನಂದ ಸೇರಿ ಕುಟುಂಬಸ್ಥರ ಸಂತಸಕ್ಕೆ ಪಾರವೇ ಇಲ್ಲ. ಅಲ್ಲದೇ ಇಡೀ ಊರಿಗೆ ಊರೇ ಹನುಮಂತನ ಸಾಧನೆಗೆ ಹೆಮ್ಮೆ ಪಡುತ್ತಿದೆ.