ವೇದರಾಣಿ ದಾಸನೂರು, ಡಾ.ಮೀನಾಕ್ಷಿ ಬಾಳಿ ತಾರಾಗೆ ಗೌರವ ಡಾಕ್ಟರೇಟ್ ಪ್ರದಾನ

Vedarani Dasanur, Dr. Meenakshi Bali Tara was awarded an honorary doctorate

ವೇದರಾಣಿ ದಾಸನೂರು, ಡಾ.ಮೀನಾಕ್ಷಿ ಬಾಳಿ ತಾರಾಗೆ ಗೌರವ ಡಾಕ್ಟರೇಟ್ ಪ್ರದಾನ 

ವಿಜಯಪುರ: ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಜರುಗಿದ 16ನೆಯ ಘಟಿಕೋತ್ಸವದಲ್ಲಿ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಅವರು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. 

ಕಲಾಕ್ಷೇತ್ರದ ಸಾಧನೆಗಾಗಿ ಶಿಗ್ಗಾವಿಯ ಗೋಟಗೋಡಿ ರಾಕ್‌ಗಾರ್ಡ್‌ನ್‌ನ ವೇದರಾಣಿ ದಾಸನೂರು, ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕಲಬುರಗಿಯ ವಿಶ್ರಾಂತ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ಬಾಳಿ ಮತ್ತು ಸಿನಿಮಾ ಕ್ಷೇತ್ರದ ಸಾಧನೆಗಾಗಿ ಬೆಂಗಳೂರಿನ ಖ್ಯಾತ ಚಲನಚಿತ್ರ ನಟಿ ತಾರಾ ಅವರಿಗೆ ಕುಲಪತಿಗಳು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. 

ಮುಖ್ಯ ಅತಿಥಿಗಳಾಗಿದ್ದ ನವದೆಹಲಿಯ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆಯ ಕುಲಪತಿ ಪ್ರೊ.ಶಶಿಕಲಾ ವಂಜಾರಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್‌.ಎಂ.ಚಂದ್ರಶೇಖರ್, ಸಿಂಡಿಕೇಟ್ ಸದಸ್ಯರು, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ನಿಕಾಯಗಳ ಡೀನರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. 

ಇದಕ್ಕೂ ಮುನ್ನ ವೇದರಾಣಿ ದಾಸನೂರು ಅವರ ಪರಿಚಯವನ್ನು  ಡಾ.ರೋಹಿಣಿ ಭೂಸನೂರಮಠ, ಡಾ.ಮೀನಾಕ್ಷಿ ಬಾಳಿ ಅವರ ಪರಿಚಯವನ್ನು ಡಾ.ರೇಣುಕಾ ಮೇಟಿ ಮತ್ತು ತಾರಾ ಅವರ ಪರಿಚಯವನ್ನು ಡಾ.ರಾಜು ಬಾಗಲಕೋಟ ಮಾಡಿಕೊಟ್ಟರು. 

ಘಟಿಕೋತ್ಸವದ ಆರಂಭದಲ್ಲಿ ನಡೆದ ಮೆರವಣಿಗೆಯ ನೇತೃತ್ವವನ್ನು ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್‌.ಎಂ.ಚಂದ್ರಶೇಖರ್ ವಹಿಸಿದ್ದರು. ಪ್ರಾಧ್ಯಾಪಕ ಪ್ರೊ.ವಿಷ್ಣು ಶಿಂದೆ ಮತ್ತು ಡಾ.ಅಶ್ವಿನಿ ಕೆ.ಎನ್ ನಿರೂಪಿಸಿದರು.  

ಈ ಘಟಿಕೋತ್ಸವದಲ್ಲಿ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಒಟ್ಟು 63 ವಿದ್ಯಾರ್ಥಿನಿಯರಿಗೆ 80 ಚಿನ್ನದ ಪದಕಗಳನ್ನು ಮತ್ತು 34 ವಿದ್ಯಾರ್ಥಿನಿಯರಿಗೆ ಪಿಎಚ್‌.ಡಿ ಪದವಿ ಪ್ರದಾನ ಮಾಡಲಾಯಿತು. ಈ ಘಟಿಕೋತ್ಸವದಲ್ಲಿ ಒಟ್ಟು 13,461 ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಈ ಘಟಿಕೋತ್ಸವದಲ್ಲಿ ಒಟ್ಟು 1,106 ವಿದ್ಯಾರ್ಥಿನಿಯರಿಗೆ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ನೀಡಲಾಯಿತು. ಈ ಪೈಕಿ ಎಂ.ಎ.- 365, ಎಂ.ಕಾಂ.- 296, ಎಂ.ಬಿ.ಎ.- 49, ಎಂ.ಎಸ್‌.ಸಿ.- 304, ಎಂ.ಈಡಿ- 9, ಎಂ.ಪಿ.ಈಡಿ- 9, ಎಂ.ಎಸ್‌.ಡಬ್ಲ್ಯೂ- 20, ಎಂ.ಸಿ.ಎ.- 40  ಮತ್ತು ಎಂ.ಎಫ್‌.ಎಂ.- 14 ವಿದ್ಯಾರ್ಥಿನಿಯರು ಪದವಿಗೆ ಅರ್ಹರಾಗಿದ್ದಾರೆ. ಈ ಘಟಿಕೋತ್ಸವದಲ್ಲಿ ಒಟ್ಟು 12,350 ವಿದ್ಯಾರ್ಥಿನಿಯರಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಯಿತು. ಇದರಲ್ಲಿ ಬಿ.ಎ.ಹಿ 5387, ಬಿ.ಎಸ್‌.ಡಬ್ಲ್ಯೂ - 36, ಬಿ.ಈಡಿ -1663, ಬಿ.ಪಿ.ಈಡಿ - 15, ಬಿ.ಕಾಂ - 3536, ಬಿಬಿಎ - 122, ಬಿ.ಎಸ್‌.ಸಿ- 1413, ಬಿ.ಸಿ.ಎ-115, ಬಿ.ಎಫ್‌.ಟಿ- 63 ಮತ್ತು ಬಿ.ಎಫ್‌ಎಡಿ- 05 ವಿದ್ಯಾರ್ಥಿನಿಯರು ಸ್ನಾತಕ ಪದವಿ ಪಡೆಯಲು ಅರ್ಹರಾಗಿರುತ್ತಾರೆ.