ವಿಜಯಪುರ: 110 ಗ್ರಾಮ ಪಂಚಾಯತ್ ವ್ಯಾಪ್ತಿ; ಪ್ಯಾರಾಮೋಟರಿಂಗ್ ಮೂಲಕ ಮತದಾನ ಜಾಗೃತಿಗೆ ಚಾಲನೆ

ಲೋಕದರ್ಶನ ವರದಿ

ವಿಜಯಪುರ 08: ಜಿಲ್ಲೆಯ 110 ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ ಮೂಡಿಸಲು  ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡ ಪ್ಯಾರಾ ಮೋಟರಿಂಗ್ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಇಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ವಿಕಾಸ ಕಿಶೋರ ಸುರಳಕರ ಅವರು ಚಾಲನೆ ನೀಡಿದರು. 

ನಗರದ ಡಾ,.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿಂದು ನಿಮ್ಮ ಮತ ನಿಮ್ಮ ಹಕ್ಕು ನೈತಿಕವಾಗಿ ನಿಮ್ಮ ಮತ ಚಲಾಯಿಸಿ ಎಂಬ ಬ್ಯಾನರ್ದೊಂದಿಗೆ ಜಿಲ್ಲೆಯ ವಿಜಯಪುರ, ಇಂಡಿ, ಸಿಂದಗಿ, ಬಸವನಬಾಗೇವಾಡಿ ಹಾಗೂ ಮುದ್ದೇಬಿಹಾಳ ತಾಲೂಕುಗಳ 110ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವಂತೆ ಕರಪತ್ರ ವಿತರಿಸುವ ಮೂಲಕ ಜಾಗೃತಿ ಮೂಡಿಸಲಿದೆ. 

ಇಂದಿನಿಂದ ಆರಂಭಗೊಂಡಿರುವ ಈ ಪ್ಯಾರಾ ಮೋಟರಿಂಗ್ ಮತದಾನ ಜಾಗೃತಿ ಕಾರ್ಯಕ್ರಮವು ಏಪ್ರಿಲ್ 12ರವರೆಗೆ ಜರುಗಲಿದ್ದು, ಇಂದು ವಿಜಯಪುರ ತಾಲೂಕು, ಏಪ್ರಿಲ್ 9 ರಂದು ಇಂಡಿ, ಏಪ್ರಿಲ್ 10 ರಂದು ಸಿಂದಗಿ, ಏಪ್ರಿಲ್ 11 ರಂದು ಬಸವನಬಾಗೇವಾಡಿ ಹಾಗೂ ಏಪ್ರಿಲ್ 12 ರಂದು ಮುದ್ದೇಬಿಹಾಳದಲ್ಲಿ ಪ್ರತಿ ದಿನ ಬೆಳಿಗ್ಗೆ 7 ರಿಂದ ಬೆಳಿಗ್ಗೆ 10 ಗಂಟೆವರೆಗೆ ಪ್ಯಾರಾಮೋಟರಿಂಗ್ ಮೂಲಕ ಜಾಗೃತಿ ನಡೆಯಲಿದ್ದು, ಮತದಾನ ಮಾಡುವ ಕುರಿತಂತೆ ನಾಗರಿಕರಲ್ಲಿ ಅರಿವು ಮೂಡಿಸಲಿದೆ. 

ಪ್ಯಾರಾ ಮೋಟರಿಂಗ್ ಮೂಲಕ ವಿಜಯಪುರ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ಯಾರಾ ಮೋಟರಿಂಗ್ದಲ್ಲಿ ಹಾರಾಟ ನಡೆಸಿ, ಖುದ್ದಾಗಿ ಮತದಾನ ಜಾಗೃತಿಯ ಕರಪತ್ರಗಳನ್ನು ವಿತರಿಸಿದರು. ನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಲವಾರು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮತದಾರರಲ್ಲಿ ಮತದಾನದ ಮಹತ್ವ ಕುರಿತು ಅವರ ಜವಾಬ್ದಾರಿ ಹಾಗೂ ಕರ್ತವ್ಯದ ಬಗ್ಗೆ ತಿಳಿ ಹೇಳುವ ನಿಟ್ಟಿನಲ್ಲಿ ಪ್ಯಾರಾಮೋಟರಿಂಗ್ ಜಾಗೃತಿ ಕಾರ್ಯಕ್ರಮವನ್ನು ಸಹ ಇಂದು ಹಮ್ಮಿಕೊಂಡಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳ ಗ್ರಾಮ ಪಂಚಾಯತ್ ವ್ಯಾಪ್ತಿಗಗಳಲ್ಲಿ, ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವನೆಗಳಲ್ಲಿ ಅತ್ಯಂತ ಕಡಿಮೆ ಮತದಾನವಾಗಿರುವ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. 

ಅದರಂತೆ ಪ್ಯಾರಾ ಮೋಟರಿಂಗ್ ತಂಡಕ್ಕೆ ಈಗಾಗಲೇ ತಾಲೂಕಾವಾರು ಜಾಗೃತಿ ಮೂಡಿಸುವ ನಕಾಶೆಯೊಂದಿಗೆ ಮಾಹಿತಿ ನೀಡಲಾಗಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ಕರಪತ್ರಗಳನ್ನು ವಿವಿಧ ಗ್ರಾಮಗಳಲ್ಲಿ ಈ ಪ್ಯಾರಾಮೋಟರಿಂಗ್ ಮೂಲಕ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿ, ಅದರಂತೆ ಮತದಾನ ಜಾಗೃತಿಗಾಗಿ ನಕ್ಕು-ನಕ್ಕು ಚಲಾಯಿಸಿ ನಿಮ್ಮ ಹಕ್ಕು ಹಾಸ್ಯ ಕಾರ್ಯಕ್ರಮ, ಮ್ಯಾರಾಥಾನ್, ಮಕ್ಕಳಿಂದ ಕಿರುನಾಟಕ, ಶಾಲಾ ಮಕ್ಕಳಿಂದ ಪತ್ರ ಚಳುವಳಿ, ವಿವಿಧ ಜಾಥಾಗಳ ಮೂಲಕವೂ ಸಹ ಮತದಾರರಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು. 

ಪ್ಯಾರಾ ಮೋಟರಿಂಗ್ ತಂಡದಲ್ಲಿ ಇಬ್ಬರೂ ಪೈಲಟ್ಗಳಾದ ಕುಮಾರ, ಸುನೀಲ, ಸಹಾಯಕರಾದ ಜಯಕುಮಾರ ಇನ್ನೋರ್ವ ಪೈಲಟ್ ಸಿದ್ಧಾರ್ಥ ಅವರನ್ನು ಒಳಗೊಂಡ ತಂಡವು ಜಿಲ್ಲೆಯಾದ್ಯಂತ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಿದೆ.

ಇಂದು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಅಧಿಕಾರಿ ಎಸ್.ಜಿ.ಲೋಣಿ, ತಾಲೂಕಾ ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿಗಳಾದ ಅಡವಿಮಠ, ಡಯಟ್ ಉಪನ್ಯಾಸಕ ಕೊಣ್ಣೂರ, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.