ವಿಜಯಪುರ: ವಿಕಲಚೇತನ ಮತದಾರರಿಗೆ ನೆರವಾಗಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಕಿಶೋರ ಸೂಚನೆ

ಲೋಕದರ್ಶನ ವರದಿ

ವಿಜಯಪುರ 08: ಜಿಲ್ಲೆಯ ನಗರ ಸ್ಥಳೀಯ ವ್ಯಾಪ್ತಿಯಲ್ಲಿ ಬರುವ ವಿವಿಧ ಮತಗಟ್ಟೆಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವ ಜೊತೆಗೆ ವಿಕಲಚೇತನ ಮತದಾರರಿಗೆ ಅವಶ್ಯಕ ನೆರವನ್ನು ಒದಗಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಕಿಶೋರ ಸುರಳಕರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ವಿವಿಧ ಮತಗಟ್ಟೆಗಳಲ್ಲಿ ವಿಕಲಚೇತನ ಮತದಾರರಿಗೆ ರ್ಯಾಂಪ್, ವ್ಹೀಲ್ ಚೇರ, ಶೌಚಾಲಯ,  ರಾಜಕೀಯೇತರ ಸಹಾಯಕರ ನೆರವು, ಕುಡಿಯುವ ನೀರು, ವಿದ್ಯುತ್ ವ್ಯವಸ್ತೆ ಸೇರಿದಂತೆ ಇತರೆ ಸೌಲಭ್ಯಗಳನ್ನು ಮಾಡಿರುವ ಬಗ್ಗೆ ಮುಂಚಿತವಾಗಿ ಖಾತ್ರಿಪಡಿಸಿಕೊಳ್ಳುವಂತೆ ಸೂಚಿಸಿದರು. 

ಅದರಂತೆ ಪ್ರತಿ ಮತಗಟ್ಟೆವಾರು ವಿಕಲಚೇತನ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುವಂತೆ ತಿಳಿಸಿದ ಅವರು, ಆದ್ಯತೆ ಮೇಲೆ ಮತದಾನಕ್ಕೆ ವಾಹನದಲ್ಲಿ ಕರೆದುಕೊಂಡು ಬರುವ ಜೊತೆಗೆ ಮತದಾನ ಮಾಡಿಸಿ, ಮತ್ತೇ ಅವರ ಸ್ವಸ್ಥಳಕ್ಕೆ ಕರೆದುಕೊಂಡು ಹೋಗಬೇಕು. ಜಿಲ್ಲೆಯಲ್ಲಿ 16 ಸಾವಿರಕ್ಕೂ ಹೆಚ್ಚು ವಿಕಲಚೇತನ ಮತದಾರರಿದ್ದು, ಪ್ರತಿ ಮತಗಟ್ಟೆವಾರು ಅಂದಾಜು 1700 ಮತದಾರರು ಬರುವುದರಿಂದ ಆದಷ್ಟು ಬೇಗನೆ ಇವರಿಂದ ಮತದಾನ ಮಾಡಿಸುವಂತೆ ಸೂಚನೆ ನೀಡಿದರು. 

ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಈಗಾಗಲೇ ಹಲವಾರು ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಂತೆ ನಗರ ಸ್ಥಳೀಯ ಹಾಗೂ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ನಕ್ಕು-ನಕ್ಕು ಚಲಾಯಿಸಿ ನಿಮ್ಮ ಹಕ್ಕು ಎಂಬ ಹಾಸ್ಯ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಮತದಾರರು ವೀಕ್ಷಿಸುವಂತೆ ನೋಡಿಕೊಳ್ಳಬೇಕು. ಅದರಂತೆ ವಾಹನಗಳ ಮೂಲಕ ಜಿಂಗಲ್ಸ್ ಅಳವಡಿಸಿ ಮತದಾನ ಜಾಗೃತಿ ಮೂಡಿಸಬೇಕು. ಬೀದಿನಾಟಕ, ರಂಗೋಲಿ, ಸೈಕಲ್ ಜಾಥಾ, ಕ್ಯಾಂಡಲ್ ಮಾರ್ಚ  ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಪ್ರತಿವಾರ ಪ್ರತಿ ವಾರ್ಡವಾರು ವೇಳಾಪಟ್ಟಿಯಂತೆ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.

ಈ ಬಾರಿ ಸಿ-ವಿಜಿಲ್ ಎಂಬ ಮೊಬೈಲ್ ಆಪ್ ಬಿಡುಗಡೆ ಮಾಡಿದ್ದು, ಸಾರ್ವಜನಿಕರು  ಚುನಾವಣೆಗೆ ಸಂಬಂಧಿಸಿದ ನೀತಿ ಸಂಹಿತೆ ಉಲ್ಲಂಘನೆಯಾದ ದೂರುಗಳ ಕುರಿತು ಫೊಟೋ ಅಥವಾ ವಿಡಿಯೋವನ್ನು ಅಪಲೋಡ್ ಮಾಡುವ ಮೂಲಕ ದೂರು ದಾಖಲಿಸಲು ಅವಕಾಶ ಕಲ್ಪಿಸಿದ್ದು, ಇಂತಹ ದೂರುಗಳನ್ನು ಜಿಲ್ಲಾ ಕೇಂದ್ರದಲ್ಲಿ ಸ್ವೀಕರಿಸಿದ ತಕ್ಷಣ, 100 ನಿಮಿಷದೊಳಗಾಗಿ ಚುನಾವಣಾ ಕೆಲಸಕ್ಕೆ ನೇಮಿಸಲಾದ ಅಧಿಕಾರಿಗಳ ತಂಡ ಕೂಡಲೇ ಕಾರ್ಯಪ್ರವೃತ್ತರಾಗಿ ದೂರು ವಿಚಾರಣೆ ಮಾಡಿ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದಶರ್ಿ ಅಮರೇಶ ನಾಯಕ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಿ.ಬಿ.ಕುಂಬಾರ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.