ಆಡಿಲೇಡ್, ನ.30 - ಸ್ಟಾರ್ ಆಟಗಾರ ಡೇವಿಡ್ ವಾರ್ನರ್ ಅವರ ಭರ್ಜರಿ ತ್ರಿಶತಕದ ನೆರವಿನಿಂದ ಆತಿಥೇಯ ಆಸ್ಟ್ರೇಲಿಯಾ ಹಗಲು ರಾತ್ರಿ ಟೆಸ್ಟ್ ನಲ್ಲಿ ಪಾಕಿಸ್ತಾನ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ.
ಎರಡನೇ ದಿನವಾದ ಶನಿವಾರ ಒಂದು ವಿಕೆಟ್ ಗೆ 302 ರನ್ ಗಳಿಂದ ಆಟ ಮುಂದುವರಿಸಿದ ಆಸೀಸ್ 3 ವಿಕೆಟ್ ಗೆ 589 ರನ್ ಗೆ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್ ಆರಂಭಿಸಿದ ಪಾಕ್ 6 ವಿಕೆಟ್ ಗೆ 96 ರನ್ ಕಲೆ ಹಾಕಿತು.
ಸ್ಪೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಲ್ಲದೆ ಆಸೀಸ್ ಪರ ತ್ರಿಶತಕ ಬಾರಿಸಿ ಸಂಭ್ರಮಿಸಿದರು. ವಾರ್ನರ್ 418 ಎಸೆತಗಳಲ್ಲಿ 39 ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರೆ, ಒಂದು ಬಾರಿ ಚೆಂಡು ಪ್ರೇಕ್ಷಕರ ಗ್ಯಾಲರಿ ದರ್ಶನವೂ ಮಾಡಿತು.
ಆಸ್ಟ್ರೇಲಿಯಾ ಪರ ಮಾರ್ನಸ್ ಲ್ಯಾಬುಸ್ಚಾಗ್ನೆ 162, ಸ್ಟೀವನ್ ಸ್ಮಿತ್ 36, ಮ್ಯಾಥ್ಯೂ ವೇಡ್ ಅಜೇಯ 38 ರನ್ ಬಾರಿಸಿದರು. ಪಾಕ್ ಪರ ಶಾಹೀನ್ ಶಾ ಅಫ್ರೀದಿ ಮೂರು ವಿಕೆಟ್ ಕಬಳಿಸಿದರು.
ಮೊದಲ ಇನ್ನಿಂಗ್ಸ್ ಆರಂಭಿಸಿದ ಪಾಕ್ ತಂಡದ ಆರಂಭ ಕಳಪೆಯಾಗಿತ್ತು. ಸ್ಟಾರ್ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಆಸೀಸ್ ಪರ ಮಿಚೆಲ್ ಸ್ಟಾರ್ಕ್ 4 ಮತ್ತು ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್ ವುಡ್ ತಲಾ ಒಂದೊಂದು ವಿಕೆಟ್ ಪಡೆದರು.
ಪಾಕ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಬಾಬರ್ ಅಜಮ್ (ಅಜೇಯ 43) ಮತ್ತು ಯಾಸೀರ್ ಶಾ (ಅಜೇಯ 4) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಪಾಕ್ ಇನ್ನಿಂಗ್ಸ್ ಹಿನ್ನಡೆ ತಪ್ಪಿಸಿಕೊಳ್ಳಲು ಇನ್ನು 493 ರನ್ ಕಲೆ ಹಾಕಬೇಕಿದೆ.