“ಸ್ಪರ್ಶ” ಕುಷ್ಠರೋಗ ಜಾಗೃತಿ ಅಭಿಯಾನ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆ
ಬೆಳಗಾವಿ 30: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಹಾಗೂ ಜಿಲ್ಲಾ ಕುಷ್ಠರೋಗ ವಿಭಾಗ ಇವರ ಸಹಯೋಗದಲ್ಲಿ “ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ-2025 ರ ಪೂರ್ವಭಾವಿ ಸಭೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಜಿಲ್ಲೆಯಾದ್ಯಂತ ಜನವರಿ 30 ರಿಂದ ಪೆಬ್ರುವರಿ 13 ರ ವರೆಗೆ “ಸ್ಪರ್ಶ” ಕುಷ್ಠರೋಗ ಜಾಗೃತಿ ಅಭಿಯಾನವನ್ನು ಅಚ್ಚುಕಟ್ಟಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಇತರ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಬೇಕು ಮತ್ತು “ನಾವೇಲ್ಲರೂ ಒಟ್ಟಾಗಿ ಜಾಗೃತಿ ಮೂಡಿಸೋಣ, ತಪ್ಪ್ಪು ಕಲ್ಪನೆಗಳನ್ನು ಹೋಗಲಾಡಿಸೋಣ ಮತ್ತು ಕುಷ್ಠರೋಗದಿಂದ ಬಾಧಿತರು ಯಾರೋಬ್ಬರೂ ಹಿಂದೆ ಉಳಿಯದಂತೆ ನೋಡಿಕೋಳ್ಳೋಣ” ಎಂದರು.
ಜಿಲ್ಲೆಯನ್ನು "ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ಕೈ ಜೋಡಿಸೋಣ” ಕುಷ್ಠ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಗೆ ತರಲು ನಾವು ಬದ್ಧರಾಗಿದ್ದೇವೆ ಹಾಗೂ ಬಾಪೂಜಿಯವರ ನಂಬಿಕೆ ಮತ್ತು ಸದುದ್ದೇಶಗಳನ್ನು ಸಾಕಾರಗೊಳಿಸಲು ಸನ್ನದ್ದರಾಗಿದ್ದೇವೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಹೇಳಿದರು.
ಜಿಲ್ಲಾ, ತಾಲೂಕಾ ಮತ್ತು ಗ್ರಾಮ ಮಟ್ಟಗಳಲ್ಲಿ ಪರಿಣಾಮಕಾರಿಯಾಗಿ “ಸ್ಪರ್ಶ” ಕುಷ ್ಠರೋಗ ಜಾಗೃತಿ ಅಭಿಯಾನದ ಮೂಲಕ ಕುಷ್ಠರೋಗದ ಪ್ರಕರಣಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಬಹುವಿಧ ಓಷಧಿ ಚಿಕಿತ್ಸೆಗೆ ಒಳಪಡಿಸಿ ಅಂಗವಿಕಲತೆ ಉಂಟಾಗದಂತೆ ತಡೆಗಟ್ಟುವುದು ಅಭಿಯಾನದ ಪ್ರಮುಖ ಕಾರ್ಯ ಚಟುವಟಿಕಯಾಗಿರುತ್ತದೆ ಜಿಲ್ಲಾ ಕುಷ್ಠ ರೋಗ ನಿರ್ಮೂಲನಾಧಿಕಾರಿ ಡಾ. ಗೀತಾ ಕಾಂಬಳೆ ವಿವರಿಸಿದರು.
ಕುಷ್ಠರೋಗ ಪ್ರಕರಣ ಪತ್ತೆ ಹಚ್ಚಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುವ ಬಹುವಿಧ ಓಷದಿ ಎಂ.ಡಿ.ಟಿ ಚಿಕಿತ್ಸಗೆ ಒಳಪಡಿಸುವುದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಮತ್ತು ಶಾಲಾ ಕಾಲೇಜುಗಳಲ್ಲಿ ಪ್ರಶ್ನೋತ್ತರ ಕಾರ್ಯಕ್ರಮಗಳು, ಪತ್ರಿಕಾ ಟಿಪ್ಪಣಿ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಭಿಯಾನದ ಉದ್ದೇಶವಾಗಿರುತ್ತದೆ.
ಪೂಜ್ಯ ಮಹಾತ್ಮ ಗಾಂಧಿಜೀಯವರ ಪುಣ್ಯತಿಥಿಯಂದು ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಆಚರಿಸುತ್ತಿದ್ದು, ಜಿಲ್ಲೆಯಾದ್ಯದಂತ ಜನವರಿ 30 ರಿಂದ ಪೆಬ್ರುವರಿ 13 ರ ವರೆಗೆ ನಡೆಯುವ ಕಾರ್ಯಕ್ರಮವಾಗಿದೆ.
ಜಿಲ್ಲೆಯಲ್ಲಿ ಪ್ರಸ್ತುತ ವರ್ಷದಲ್ಲಿ 50 ಪಿ.ಬಿ ಮತ್ತು 123 ಎಂ.ಬಿ ಒಟ್ಟು 173 ಕುಷ್ಠರೋಗ ಪ್ರಕರಣಗಳು ಕಂಡು ಬಂದಿರುತ್ತವೆ ಮತ್ತು 70 ಪಿ.ಬಿ ಮತ್ತು 112 ಎಂ.ಬಿ ಪ್ರಕರಣಗಳಿಗೆ ಎಂ.ಡಿ.ಟಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿರುತ್ತಾರೆ ಎಂದು ಜಿಲ್ಲಾ ಕುಷ್ಠ ರೋಗ ನಿರ್ಮೂಲನಾಧಿಕಾರಿ ಡಾ. ಗೀತಾ ಕಾಂಬಳೆ ಹೇಳಿದರು.
ಜಾಗೃತಿ ಭಿತ್ತಿ ಪತ್ರ ಬಿಡುಗಡೆ:
“ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ-2025 ರ ಅಂಗವಾಗಿ ಜಾಗೃತಿ ಮೂಡಿಸುವ ಘೋಷಣಾ ಭಿತ್ತಿ ಪತ್ರ ಹಾಗೂ ಬ್ಯಾನರಗಳನ್ನು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ಬಿಡುಗಡೆಗೊಳಿಸಿದರು.
ಜಿಲ್ಲಾ ಪಂಚಾಯತ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಚರ್ಮರೋಗ ವಿಭಾಗ, ಜಿಲ್ಲಾ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು (ಐ.ಇ.ಸಿ ವಿಭಾಗ) ಮತ್ತು ಜಿಲ್ಲಾ ಆಶಾ ಸಂಯೋಜಕರು (ಮೆಂಟರ್ಸ) ಸಭೆಯಲ್ಲಿ ಉಪಸ್ಥಿತರಿದ್ದರು.