ಕನ್ನಡ ಸಾಹಿತ್ಯ ಪರಿಷತ್ತಿನ 111ನೇ ಸಂಸ್ಥಾಪನಾ ದಿನಾಚರಣೆ

111th foundation day of Kannada Sahitya Parishad

ರಾಣೇಬೆನ್ನೂರು 08: ನೂರಾರು ವರ್ಷಗಳ ಹಿಂದೆ ಬ್ರಿಟಿಷರ ಒಡೆದು ಆಳುವ ನೀತಿಯಿಂದಾಗಿ ಕಾವೇರಿಯಿಂದ ಗೋದಾವರಿಯವರೆಗೆ ಹಂಚಿ ಹೋಗಿದ್ದ ಕನ್ನಡ ನಾಡನ್ನು ಮತ್ತೆ ಅಖಂಡ ಕರ್ನಾಟಕ ಮಾಡುವ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ 1915 ರಲ್ಲಿ ಅನಾವರಣಗೊಂಡ ಸಂಸ್ಥೆಯೇ ಈ ಕನ್ನಡ ಸಾಹಿತ್ಯ ಪರಿಷತ್ತು ಎಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಭಾಕರ ಶಿಗ್ಲಿ ಹೇಳಿದರು. ಅವರು, ಇತ್ತೀಚೆಗೆ ಕ.ಸಾ.ಪ ಕನ್ನಡ ಭವನದಲ್ಲಿ  ಆಯೋಜಿಸಲಾಗಿದ್ದ  ಕನ್ನಡ ಸಾಹಿತ್ಯ ಪರಿಷತ್ತಿನ 111ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಎಲ್ಲ ಕನ್ನಡ ಬಂಧು ಭಗಿನಿಯರು, ಒಂದೆಡೆ ಸೇರಿ ಚಂದಾಗಿ ಬಾಳುವಂತಾಗಬೇಕು, ಕನ್ನಡ ಭಾಷೆ-ಸಾಹಿತ್ಯ-ಕಲೆ-ಸಂಸ್ಕೃತಿ ಮೊದಲಾದವುಗಳುಸರ್ವತೋಮುಖ ಪ್ರಗತಿ ಸಾಧಿಸಬೇಕು ಎಂಬ ಉದ್ದೇಶದಿಂದ ರಾಷ್ಟ್ರಾಭಿಮಾನಿ ಸರ್ ಎಂ ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್, ಮಿರ್ಜಾ ಇಸ್ಮಾಯಿಲ್, ಎಚ್‌.ವಿ. ನಂಜುಂಡಯ್ಯನವರು ಸೇರಿದಂತೆ ಅಂದಿನ ಕಾಲದ ಮಹಾಮಹಿಮರ ಪರಿಶ್ರಮದಿಂದ ಅಸ್ತಿತ್ವಕ್ಕೆ ಬಂದ ಮಹಾಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ತು. ನಿರಂತರವಾಗಿ ಕನ್ನಡ ಪರ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮುಖಾಂತರ ಪರಿಷತ್ತು ಜನಸ್ನೇಹಿ ಕನ್ನಡಿಗರ  ಮನೆಯಂತಾಗಬೇಕು ಎಂದು ಹೇಳಿದರು.  

ಡಾ. ಕಾಂತೇಶ ಗೋಡಿಹಾಳ ಅವರು ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ ವಿಷಯವಾಗಿ ಅತ್ಯಂತ ಅರ್ಥಪೂರ್ಣವಾಗಿ ಉಪನ್ಯಾಸ ನೀಡಿದರು. ಡಾ. ಕಾಂತೇಶ ಅಂಬಿಗೇರ ಅವರು ಸರ್ ಎಂ ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್, ಮಿರ್ಜಾ ಇಸ್ಮಾಯಿಲ್ ಅವರ ದೂರದೃಷ್ಟಿಯ ಫಲವಾಗಿ ಇಂದು ಅಸ್ಥಿತ್ವದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಆಲೋಚನೆಗಳು ಮತ್ತು ಮುಂದೆ ನಡೆಯಬೇಕಾದ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು.ವೇದಿಕೆಯಲ್ಲಿ ಹಿರಿಯ  ಸಾಹಿತಿ ಡಾ. ಕೆ.ಎಚ್‌. ಮುಕ್ಕಣ್ಣನವರ, ವರ್ತಕರ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡರ, ಸ್ವಾಭಿಮಾನ ಕರವೇ ಸಂಸ್ಥಾಪಕ ನಿತ್ಯಾನಂದ ಕುಂದಾಪುರ, ಕದಳಿ ವೇದಿಕೆಯ ಅಧ್ಯಕ್ಷೆ ಗಾಯಿತ್ರಮ್ಮ ಕುರುವತ್ತಿ, ಸೇರಿದಂತೆ ಮತ್ತಿತರರು  ಉಪಸ್ಥಿತರಿದ್ದರು.  

ಕಸಾಪ ಗೌರವ ಕಾರ್ಯದರ್ಶಿ ಜಗದೀಶ ಮಳಿಮಠ ನಿರೂಪಿಸಿ,ಗೌರವ ಕಾರ್ಯದರ್ಶಿ ಎಚ್‌. ಎಚ್‌. ಜಾಡರ ಸ್ವಾಗತಿಸಿದರು, ಕೋಶಾಧ್ಯಕ್ಷ ಎಚ್‌. ಎಸ್‌. ಮುದಿಗೌಡರ ವಂದಿಸಿದರು. ಕಾರ್ಯಕ್ರಮದಲ್ಲಿ ಕೆ. ಸಿ. ಕೋಮಲಾಚಾರ, ಚಂದ್ರಶೇಖರ ಮಡಿವಾಳರ, ಆರ್‌.ಎನ್‌. ಅಡಿಗೇರ, ಮಲ್ಲಿಕಾರ್ಜುನ ಸಾವಕ್ಕಳವರ, ಎಫ್‌. ಎಂ. ಕಡಕೋಳ ಸೇರಿದಂತೆ ವಿವಿಧ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.