ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವೇಳೆ ಕೋಲಾರದ ವಸತಿ ಶಾಲೆಯ ಒಂಬತ್ತನೇ ತರಗತಿಯ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯ 46 ವಿದ್ಯಾರ್ಥಿಗಳು ಮತ್ತು ಆರು ಶಿಕ್ಷಕರ ತಂಡ ಮಂಗಳವಾರ ತಮ್ಮ ಶಾಲಾ ಪ್ರವಾಸದ ಅಂಗವಾಗಿ ಮುರುಡೇಶ್ವರಕ್ಕೆ ತೆರಳಿತ್ತು. ಪೊಲೀಸರ ಪ್ರಕಾರ, ಸಂಜೆ 5.30ರ ಸುಮಾರಿಗೆ ಶಿಕ್ಷಕರು, ವಿದ್ಯಾರ್ಥಿಗಳ ಜೊತೆಗೆ ಬೀಚ್‌ಗೆ ತೆರಳಿದರು. ಜೀವರಕ್ಷಕರ ಎಚ್ಚರಿಕೆಯ ಹೊರತಾಗಿಯೂ, ಏಳು ವಿದ್ಯಾರ್ಥಿಗಳು ಸಮುದ್ರದ ಅಲೆಗಳಿಗೆ ಸಿಕ್ಕಿ ಕೊಚ್ಚಿ ಹೋಗಿದ್ದರು. ಈ ವೇಳೆ ಮೂವರು ವಿದ್ಯಾರ್ಥಿಗಳನ್ನು ಜೀವರಕ್ಷಕರು ಮತ್ತು ಇತರ ಏಜೆನ್ಸಿಗಳ ಸಹಾಯದಿಂದ ರಕ್ಷಿಸಲಾಗಿತ್ತು. ಆದರೆ ನಾಲ್ವರು ಸಮುದ್ರ ಪಾಲಾಗಿದ್ದರು.
ನಿನ್ನೆಯೇ ಓರ್ವ ವಿದ್ಯಾರ್ಥಿನಿ ಶ್ರವಂತಿ ಮೃತದೇಹವನ್ನು ಹೊರತೆಗೆಯಲಾಗಿತ್ತು. ಇಂದು ಜೀವರಕ್ಷಕರು, ಗೃಹ ರಕ್ಷಕರು, ಮೀನುಗಾರರು ಮತ್ತು ಪೊಲೀಸರನ್ನು ಒಳಗೊಂಡ ತಂಡ ಶೋಧ ಕಾರ್ಯಾಚರಣೆ ನಡೆಸಿದ್ದು ಬೆಳಿಗ್ಗೆ ಮೂವರು ಬಾಲಕಿಯರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಾಗಿದ್ದು ಎಲ್ಲಾ ಆರು ಶಿಕ್ಷಕರನ್ನು ಬಂಧಿಸಲಾಗಿದೆ ಎಂದು ಉತ್ತರ ಕನ್ನಡದ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ ತಿಳಿಸಿದ್ದಾರೆ.
ನಂತರ ಶಿಕ್ಷಕರನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಮೃತ ವಿದ್ಯಾರ್ಥಿನಿಯರನ್ನು 15 ವರ್ಷದ ಶ್ರವಂತಿ, ದೀಕ್ಷಾ, ಲಾವಣ್ಯ ಮತ್ತು ಲಿಪಿಕಾ ಎಂದು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಮೃತದೇಹಗಳನ್ನು ಸ್ವಗ್ರಾಮಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ 'X'ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದುಃಖತಪ್ತ ಪೋಷಕರಿಗೆ ಸಂತಾಪ ಸೂಚಿಸಿ, ದುರಂತದಲ್ಲಿ ಸಾವನ್ನಪ್ಪಿದ ನಾಲ್ವರು ವಿದ್ಯಾರ್ಥಿಗಳ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ನಾನು ಉತ್ತರ ಕನ್ನಡ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ಜಿಲ್ಲಾಡಳಿತಕ್ಕೆ ವಿದ್ಯಾರ್ಥಿನಿಯರ ಮೃತದೇಹಗಳನ್ನು ಅವರ ಊರುಗಳಿಗೆ ಸಾಗಿಸಲು ವ್ಯವಸ್ಥೆ ಮಾಡುವಂತೆ ಸೂಚಿಸಿದ್ದೇನೆ ಎಂದರು.
ಪ್ರವಾಸದ ಸಮಯದಲ್ಲಿ ಶಿಕ್ಷಕರು ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಅಪಾಯಕಾರಿ ಸ್ಥಳಗಳಿಗೆ ಭೇಟಿ ನೀಡುವಾಗ ಮಕ್ಕಳ ಮೇಲೆ ನಿಗಾ ವಹಿಸಬೇಕು. ಮಕ್ಕಳನ್ನು ಕಳೆದುಕೊಂಡ ಪೋಷಕರ ನೋವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಇಂತಹ ಘಟನೆಗಳು ಮತ್ತೆಂದೂ ಮರುಕಳಿಸದಂತೆ ನಾನು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದರು.