ಧಾರವಾಡ 30: ಸಾಧನಕೇರಿಯ ಗುರುಕೃಪಾ ಸಭಾಂಗಣದಲ್ಲಿ ದಿ. 29ರಂದು ಹಮ್ಮಿಕೊಂಡಿದ್ದ ಖ್ಯಾತ ಹಿಂದುಸ್ತಾನೀ ಗಾಯಕ, ಶಿಷ್ಯಪ್ರಾಣ ಪಂ. ಚಂದ್ರಶೇಖರ ಪುರಾಣಿಕಮಠ ಗುರುಗಳ 98ನೇ ಜನ್ಮ ದಿನೋತ್ಸವ ಕಾರ್ಯಕ್ರಮವು ಪಂ. ಶಂಕರ ಕಬಾಡಿಯವರ ಧಾನಿ, ರಾಗ ಜೋಗ ಮತ್ತು ಧುನ್‌ಗಳ ಆಕರ್ಷಕ ಪ್ರಸ್ತುತಿ ಮತ್ತು ಮಳೆಮಲ್ಲೇಶ ಹೂಗಾರರ ಸಮರ್ಥ ತಬಲಾಸಾಥದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಡಾಽಽ ಬಾಳಣ್ಣ ಶೀಗಿಹಳ್ಳಿಯವರು ಮಾತನಾಡಿ ಪುರುಷಾರ್ಥಗಳಲ್ಲಿ ಕೊನೆಯದಾದ ಮೋಕ್ಷ ಸಿಗಬೇಕೆಂದರೆ ಸಂಗೀತದಲ್ಲಿ ಧ್ಯಾನಸ್ಥ ಸ್ಥಿತಿ ತಲುಪಬೇಕು. ಕಲೆಗಳಲ್ಲೆಲ್ಲ ಸಂಗೀತಕಲೆ ಶ್ರೇಷ್ಠವೆಂಬ ಪ್ರತೀತಿಯಿದೆ ಸಂಗೀತಕ್ಕೆ ತನ್ನದೇ ಆದ ಶಕ್ತಿಯಿದ್ದು, ಗಿಡಮರಗಳು ಕೂಡ ಸಂಗೀತ ಕೇಳಿ ಬೆಳೆಯುವದಷ್ಟೇ ಅಲ್ಲ ಅವು ತುಂಬ ಸಂತೋಷಪಡುತ್ತವೆ. ಸಂಗೀತವನ್ನು ದಕ್ಕಿಸಿಕೊಳ್ಳುವದಕ್ಕೆ ಅಪಾರ ಪರಿಶ್ರಮ, ಪ್ರತಿಭೆಗಳ ಅವಶ್ಯಕತೆಯಿದ್ದು ಇದು ಎಲ್ಲರನ್ನೂ ತುಂಬ ಆಕರ್ಶಿಸುತ್ತದೆಯಾದರೂ ಇದು ಕೆಲವರಿಗಷ್ಟೇ ಒಲಿಯುವ ಮತ್ತು ಕೆಲವರಷ್ಟೇ ಸಾಧಿಸುವಂಥ ಮಹತ್ವದ ಕಲೆಯಾಗಿದೆ ಎಂದರು. ಪಂ. ಚಂದ್ರಶೇಖರ ಪುರಾಣಿಕಮಠ ಗುರುವರ‌್ಯರನ್ನು ಪ್ರತಿ ಬಾರಿ ನೆನಪಿಸಿಕೊಳ್ಳುವಂಥ ಅವರ ಶಿಷ್ಯವರ್ಗ, ಕುಟುಂಬವರ್ಗದವರ ಕಾರ‌್ಯವನ್ನು ಮೆಚ್ಚಿ ಇದು ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡ ಆಕಾಶವಾಣಿಯ ವಿಶ್ರಾಂತ ನಿರ್ದೇಶಕ ಸಿ.ಯು. ಬೆಳ್ಳಕ್ಕಿಯವರು ಮಾತನಾಡಿ ಪಂ. ಚಂದ್ರಶೇಖರ ಪುರಾಣಿಕಮಠ ಗುರುಗಳೆಂದರೆ ಕೇವಲ ಒಬ್ಬ ಹಿರಿಯ ಹಿಂದುಸ್ತಾನೀ ಗಾಯಕರಷ್ಟೇ ಆಗಿರದೇ ತಮ್ಮ ನಯ, ವಿನಯ, ವಾತ್ಸಲ್ಯಗಳ ಅನುಕರಣೀಯ ನಡೆಯಿಂದಾಗಿ ಅತ್ಯಂತ ವಿನಯಶಾಲಿ, ಅಪಾರ ಶಿಷ್ಯ ಕೋಟಿಯನ್ನು ತರಬೇತುಗೊಳಿಸಿದ ಅಪರೂಪದ ಸಂಗೀತ ಶ್ರೇಷ್ಠರೆಂದು ಹೆಸರು ಮಾಡಿದವರು. ಇಂಥ ಒಬ್ಬ ಆದರ್ಶ ಸಂಗೀತ ಗುರುಗಳನ್ನು ನೆನಪಿಸುತ್ತಿರುವ ಇಂಥ ಸಮಾರಂಭಗಳು ಪ್ರತಿ ವರ್ಷವೂ ಜರುಗುತ್ತಿರಲಿ. ಇಂಥ ಸುಸಂಸ್ಕೃತ ಕುಟುಂಬದವರ ಮತ್ತು ಶಿಷ್ಯವೃಂದದವರ ಈ ಸಂಗೀತ ಸೇವೆ ನಿರಂತರವಾಗಿ ಜರುಗುತ್ತಿರಲಿ ಎಂದು ಹರಸಿದರು. ಪಂ. ಚಂದ್ರಶೇಖರ ಪುರಾಣಿಕಮಠ ಗುರುಗಳು ಒಂದು ಕಾಲಕ್ಕೆ ತಮಗೆ ರಾಗಬದ್ಧವಾಗಿ ಕಲಿಸಿದ “ಕಾಯದ ಕತ್ತಲೆಯ ಕಳೆಯಯ್ಯಾ'' ಎಂಬ ವಚನದ ಸಾಲಗಳನ್ನು ಸುಂದರವಾಗಿ ಹಾಡಿ ಗುರುವಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಖ್ಯಾತ ವಾಯಲಿನ್ ವಾದಕ, ಆಕಾಶವಾಣಿ ‘ಎ' ಗ್ರೇಡ ಕಲಾವಿದ ಪಂ. ಶಂಕರ ಕಬಾಡಿಯವರನ್ನು ಆತ್ಮೀಯವಾಗಿ ಸತ್ಕರಿಸಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಇತ್ತೀಚೆಗೆ ನಿಧನರಾದ ಮೆದುಮಾತಿನ, ಅತ್ಯಂತ ವಿನಯವಂತ ರಾಜಕಾರಣಿ ಭಾರತದ ಮಾಜಿ ಪ್ರಧಾನಿ ಡಾಽಽ ಮನಮೋಹನ ಸಿಂಗ ಮತ್ತು ತಬಲಾ ಮಾಂತ್ರಿಕ, ಅಂತರ್ ರಾಷ್ಟ್ರೀಯ ಖ್ಯಾತಿಯ ಕಲಾವಿದ ಉಸ್ತಾದ ಝಾಕೀರ ಹುಸೇನ ಇವರುಗಳ ಅಗಲಿಕೆಗಾಗಿ ಗೌರವ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಗುರುಕೃಪಾ ಸಂಗೀತ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಪಂ. ಚಂದ್ರಶೇಖರ ಪುರಾಣಿಕಮಠ ಸ್ಮೃತಿ ಸಭಾದ ಸ್ಥಾಯೀ ಸಮಿತಿ ಅಧ್ಯಕ್ಷ ಎನ್.ಟಿ. ಪರಾಂಜಪೆಯವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದು. ಉಪಾಧ್ಯಕ್ಷೆ ಡಾಽಽ ಸೌಭಾಗ್ಯ ಕುಲಕರ್ಣಿಯವರು ಅತಿಥಿಗಳನ್ನು ಪರಿಚಯಿಸಿದರು. ಹೇಮಂತ ಲಮಾಣಿ ವಂದಿಸಿದರು. ಅಶೋಕ ಜೋಶಿ ಕಾರ‌್ಯಕ್ರಮ ನಿರೂಪಿಸಿದರು. ಸ್ಮೃತಿ ಸಭಾದ ಅಧ್ಯಕ್ಷ ಕುಮಾರಸ್ವಾಮಿ ಪುರಾಣಿಕಮಠ ವೇದಿಕೆಯಲ್ಲಿದ್ದರು.
ಮಂಜುನಾಥ ಹೆಗಡೆ, ಸಾತಲಿಂಗ ದೇಸಾಯಿ, ಎಸ್.ಎನ್. ಹೆಗಡೆ, ವೆಂಕಟೇಶ ಹಾವನೂರ, ಶಿವಯೋಗಿ ಪುರಾಣಿಕಮಠ, ಮಲ್ಲಿಕಾರ್ಜುನ ಸಿಂದಗಿ, ಎಚ್.ಎಮ್. ಪಾಟೀಲ, ಎ.ಡಿ.ಸಿದ್ಧೇಶ್ವರ, ಅನಂತ ಥಿಟೆ, ಅಶೋಕ ಮೊಕಾಶಿ, ರಾಮಣ್ಣ ಗೊಜನೂರ, ಜಗನ್ನಾಥ ಕಬಾಡಿ, ಶ್ರೀನಿವಾಸ ಮಾನೆ, ಶ್ರೀಕಾಂತ ಬೀಳಗಿ, ಪ್ರಭುಲಿಂಗಯ್ಯ ಹಿರೇಮಠ ತಾ. ಭ. ಚವ್ಹಾಣ, ಬಿ.ಆಯ್. ಈಳಿಗೇರ, ವಿದುಷಿ ರಾಧಾ ದೇಸಾಯಿ, ಡಾ. ಶಾರದಾ ಭಟ್ಟ, ಸಾವಿತ್ರಿ ಮಾಟೊಳ್ಳಿ, ಶಶಿಕಲಾ ದೊಡ್ಡಮನಿ, ಶಾರದಾ ಕಾಮಟೆ, ಸೀಮಾ ಪರಾಂಜಪೆ, ಪ್ರತಿಭಾ ಮೂಲಿಮನಿ-ಹೆಗಡೆ, ಮಲ್ಲಮ್ಮ ಮುತ್ತಗಿ, ಸುನಂದಾ ಬೆಳಕೇರಿಮಠ ಮುಂತಾದವರು ಉಪಸ್ಥಿತರಿದ್ದರು.