ದೇವರಹಿಪ್ಪರಗಿ 07: ಪಟ್ಟಣದ ಹೊರವಲಯದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಯಾದ ಆನಂದರೆಡ್ಡಿ ಕೊಟಿಖಾನಿ 625ಕ್ಕೆ 609 ಅಂಕಗಳನ್ನು (ಶೇ. 99.44) ಪಡೆದು ವಸತಿ ಶಾಲೆಗೆ ಕೀರ್ತಿ ತಂದಿದ್ದು, ವಿದ್ಯಾರ್ಥಿಗಳ ಈ ಸಾಧನೆಗೆ ವಸತಿ ಶಾಲೆಯ ಪ್ರಾಂಶುಪಾಲ ರೇಷ್ಮಾ ಜಾಧವ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉಳಿದ ವಿದ್ಯಾರ್ಥಿಗಳಾದ ಶ್ರದ್ಧಾ ಪ್ಯಾಟಿ ಹಾಗೂ ನೀತಾ ಪಾಟೀಲ ತಲಾ 601 (ಶೇ. 96.16) ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ, ಸೃಷ್ಟಿ ಬಿರಾದಾರ 600 (ಶೇ. 96) ಅಂಕ ಪಡೆದು ತೃತೀಯ ಸ್ಥಾನ ಪಡೆದು ಸಾಧನೆಗೈದಿದ್ದಾರೆ. ಅದರಂತೆ ಚಿಂತನಾ ದೇಸಾಯಿ, ಶ್ರೀಶೈಲ ಬಿರುಕಬ್ಬಿ, ಸೃಷ್ಟಿ ಬಿರಾದಾರ ಮತ್ತು ಸ್ವಾತಿ ಹರಿಜನ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದಿದ್ದಾರೆ. ಸ್ನೇಹಾ ಪಾಟೀಲ ಇಂಗ್ಲಿಷ್ ವಿಷಯದಲ್ಲಿ 100ಕ್ಕೆ 100ಅಂಕ ಪಡೆದಿದ್ದಾರೆ, ರಶ್ಮಿ ದಳವಾಯಿ 100ಕ್ಕೆ100 ಅಂಕ ಪಡೆದು ಸಾಧನೆ ಮಾಡಿದ್ದಾರೆ.
2024-25ನೇ ಶೈಕ್ಷಣಿಕ ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇಕಡಾ 97.56 ರಷ್ಟು ಫಲಿತಾಂಶ ಬಂದಿದ್ದು, ಒಟ್ಟು 41 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಹಾಗೂ 17 ವಿದ್ಯಾರ್ಥಿಗಳು ಪ್ರಥಮ ದರ್ಜೆ ಮತ್ತು 06 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ವಸತಿ ಶಾಲೆಯ ಪ್ರಾಚಾರ್ಯರು ತಿಳಿಸಿದ್ದಾರೆ.